ಭಾಲ್ಕಿ: ವಿದ್ಯಾರ್ಥಿಗಳು ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪಠ್ಯದ ಜತೆಗೆ ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಹೇಳಿದರು.
ಕೋನಮೇಳಕುಂದಾ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಶಾಲೆಗೊಂದು ಸಾಹಿತ್ಯ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಾಹಿತ್ಯದ ಓದು ಕ್ಷೀಣಿಸುತ್ತಿದೆ ಎನ್ನುವ ಆತಂಕ ಎದುರಾಗಿದೆ. ಸಾಹಿತ್ಯ ಅಧ್ಯಯನ, ಓದುವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಹಿತ್ಯ ಜೀವನದ ಒಂದು ಭಾಗವಾಗಿದೆ ಎನ್ನುವ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯದ ಓದಿನ ನಡುವೆ ಬಿಡುವಿನ ಸಮಯದಲ್ಲಿ ಸಾಹಿತಿಗಳ, ಚಿಂತಕರ, ಕವಿಗಳ ಪರಿಚಯದ ಜತೆಗೆ ಅವರು ರಚಿಸಿದ ಸಾಹಿತ್ಯವನ್ನು ವಿದ್ಯಾರ್ಥಿಗಳು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜೀವನ ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ಸಮಾಜದ ಮೌಲ್ಯ ಸೇರಿದಂತೆ ಎಲ್ಲವೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಹಿತಿ ಗಣಪತಿ ಭೂರೆ ವಿ.ಕೃ. ಗೋಕಾಕ್ ಅವರ ಬದುಕು ಬರಹ ಕುರಿತು ಮಾತನಾಡಿ, ವಿ.ಕೃ.ಗೋಕಾಕ್ ಅವರು ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ 1909ರಲ್ಲಿ ಜನಸಿದ ಗೋಕಾಕರು ಧಿಧೀಮಂತ ವ್ಯಕ್ತಿತ್ವದ ಸಾಹಿತಿಗಳಾಗಿದ್ದರು. ಸುಮಾರು 84 ವರ್ಷಗಳ ಕಾಲ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಕೂಡ ಸಾಹಿತ್ಯದ ಮೇಲಿನ ಅಭಿಮಾನ, ಪ್ರೀತಿ ಕೂಡ ಕಡಿಮೆ ಆಗಿರಲಿಲ್ಲ. ದ.ರಾ.ಬೇಂದ್ರೆ ಅವರ ಶಿಷ್ಯರಾಗಿದ್ದ ಗೋಕಾಕ್ ಅವರು 20ನೇ ವಯಸ್ಸಿನಲ್ಲಿಯೇ ಸಾಹಿತ್ಯದ ಕಡೆಗೆ ಒಲವು ತೋರಿದರು.
ಮುಂದೆ 1977ರಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1991ರಲ್ಲಿ “ಭಾರತ ಸಿಂಧು ರಶ್ಮಿ’ ರ್ಕತಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು. 60ಕ್ಕೂ ಅ ಧಿಕ ಕೃತಿಗಳನ್ನು ಅವರು ರಚಿಸಿದ್ದಾರೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿ, ಕನ್ನಡ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಇಂತಹ ಭಾಷೆಯನ್ನು ಉಳಿಸಿ, ಬೆಳೆಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಸಾಹಿತಿಗಳ ಕೃತಿ ಪರಿಚಯಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದು ಹೇಳಿದರು. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜಪ್ಪ ಪಾಟೀಲ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯದಲ್ಲಿ ಕಸಾಪ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಬನ್ನಾಳೆ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಾಹಿತ್ಯ ಅಧ್ಯಯನ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಗೌತಮ ಸೋಮವಂಶಿ ಅಧ್ಯಕ್ಷತೆ ವಹಿಸಿದರು. ತಾಲೂಕು ಕಸಾಪ ಅಧ್ಯಕ್ಷ ಸಂಗಮೇಶ ಮದಕಟ್ಟಿ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ನಿಟ್ಟೂರು(ಬಿ) ವಲಯ ಅಧ್ಯಕ್ಷ ಸಂಗಮೇಶ
ಗುಮ್ಮೆ, ಮನೋಹರ ಸಂತಪೂರೆ, ಕಲ್ಲಪ್ಪ ಮೊಳಕೇರೆ ಸೇರಿದಂತೆ ಹಲವರು ಇದ್ದರು. ಸಂಜು ಮೇತ್ರೆ ನಿರೂಪಿಸಿದರು. ಗೌತಮ ವಾನಖೇಡೆ ವಂದಿಸಿದರು.