Advertisement

ರಸಋಷಿ ಕುವೆಂಪು ಶ್ರೇಷ್ಠ ದಾರ್ಶನಿಕರು

05:19 PM Nov 22, 2019 | Naveen |

ಭಾಲ್ಕಿ: ಶಿಕ್ಷಕರಾಗಿ, ಕವಿಯಾಗಿ, ರಸಋಷಿಯಾಗಿ ಹಲವು ವೈಶಿಷ್ಟ್ಯಮಯ ಕೃತಿಗಳನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರು ಶ್ರೇಷ್ಠ ದಾರ್ಶನಿಕರಾಗಿದ್ದಾರೆ ಎಂದು ಹಿರಿಯ ಸಾಹಿತಿ ಡಾ| ಕಾಶಿನಾಥ ಚಲುವಾ ಹೇಳಿದರು.

Advertisement

ಪಟ್ಟಣದ ಮಹರ್ಷಿ ದಯಾನಂದ ಸರಸ್ವತಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಶಾಲೆಗೊಂದು ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ಅವರು ಮಾತನಾಡಿದರು.

ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗು ನೀ ಅನಿಕೇತನ.. ಹೀಗೆ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿವೆ ಎಂದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ 1904ರಲ್ಲಿ ಜನಸಿದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢ ಶಾಲಾ ಶಿಕ್ಷಣದಿಂದ ಎಂಎ ಪದವಿ ವರೆಗೂ ಮೈಸೂರಿನಲ್ಲಿ ಅಧ್ಯಯನ ಮಾಡಿದರು. ಕುವೆಂಪು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ, ನಾಟಕಕಾರ ಮತ್ತು ಚಿಂತಕರಾಗಿದ್ದರು. ಇವರನ್ನು 20ನೇ ಶತಮಾನದ ದೈತ್ಯ ಕವಿ ಎಂದು ಹೇಳಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ ಅವರು, ಕಥನ, ಕವನಗಳು ಕಲಾ ಸುಂದರಿ, ನವೀಲು, ಪಕ್ಷಿಕಾಶಿ, ಶ್ರೀರಾಮಯಣ ದರ್ಶನಂ ಮಹಾಕಾವ್ಯ ಸೇರಿದಂತೆ 30ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಪ್ರಪಂಚದಲ್ಲಿಯೇ ಪ್ರಾಚೀನ ಭಾಷೆಯಾಗಿದೆ. ಕನ್ನಡವು ಕರ್ನಾಟಕ ರಾಜ್ಯದ ಅ ಧಿಕೃತ ಹಾಗೂ ಆಡಳಿತ ಭಾಷೆಯಾಗಿದೆ. ಬೇರೆ ಭಾಷೆಗಳಲ್ಲಿ ಇಲ್ಲದ ವೈಶಿಷ್ಟ್ಯ ಕನ್ನಡದಲ್ಲಿದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಡಿಗಂಬರರಾವ್‌ ಜಗತಾಪ್‌ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕವು ಆಯ್ದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮ ಹಮ್ಮಿಕೊಂಡು, ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಹರ್ಷ ತಂದಿದೆ ಎಂದು ಕಸಾಪ ಕಾರ್ಯಕ್ಕೆ ಅಭಿನಂದಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿ, ಕನ್ನಡ ಜಗತ್ತಿನ ಸಮೃದ್ಧ ಭಾಷೆಯಾಗಿದೆ ಎಂದು ಹೇಳಿದರು. ಕಸಾಪ ಗೌರವ ಕಾರ್ಯದರ್ಶಿ ಹಣಮಂತ ಕಾರಾಮುಂಗೆ, ಸಂಘಟನಾ ಕಾರ್ಯದರ್ಶಿ ಸಂಗಮೇಶ ಮದಕಟ್ಟಿ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿಪಾಟೀಲ, ಗೌರವ ಕಾರ್ಯದರ್ಶಿ ಜೀವನ ಬೇಂದ್ರೆ, ವಿನೋದ ಜಗತಾಪ, ಹರಿಶ್ಚಂದ್ರ ತಮಗ್ಯಾಳೆ ಸೇರಿದಂತೆ ಹಲವರು ಇದ್ದರು. ಸಂಗೀತಾ ಕಾಕನಾಳೆ ಸ್ವಾಗತಿಸಿದರು. ಅಂಬರೀಶ ಬಿರಾದಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next