ಭಾಲ್ಕಿ: ಪುರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿರುವುದರಿಂದ ಚುನಾವಣೆ ಅಖಾಡ ಬಿರುಸುಗೊಂಡಿದೆ. ಸುಮಾರು ದಿನಗಳಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಬಿ.ಫಾರ್ಮ್ಗಾಗಿ ಅಲೆದಾಡಿ ಸುಸ್ತಾಗಿದ್ದ ಅಭ್ಯರ್ಥಿಗಳು, ಕೊನೆ ಗಳಿಗೆಯಲ್ಲಿ ಪಕ್ಷದ ಬಿ.ಫಾರ್ಮ್ ಪಡೆದ ಸಂತಸದಲ್ಲಿದ್ದಾರೆ.
ಜನಸಂಖ್ಯೆ ಆಧಾರದಲ್ಲಿ ಪುನರ್ ರಚನೆಗೊಂಡಿರುವ ಪಟ್ಟಣದ ಪುರಸಭೆಯ 27 ವಾರ್ಡ್‌ಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕಿಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕೊನೆಯ ಗಳಿಗೆಯಲ್ಲಿ ಟಿಕೆಟ್ ಘೋಷಣೆ ಮಾಡಿ ಆಯಾ ಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಕಣಕಿಳಿಸಿದ್ದಾರೆ.
ಟಿಕೆಟ್ ವಂಚಿತ ಅಭ್ಯರ್ಥಿಗಳು ಬೇರೆ ಪಕ್ಷದ ಕಡೆ ಮುಖ ಮಾಡದಂತೆ ನೋಡಿಕೊಳ್ಳುವಲ್ಲಿ ವಿವಿಧ ಪಕ್ಷಗಳ ಮುಖಂಡರು ಯಶಸ್ಸು ಕಂಡಿದ್ದಾರೆ. ಪ್ರತಿ ವಾರ್ಡ್‌ನಿಂದ ಎಲ್ಲ ಪಕ್ಷಗಳಲ್ಲೂ ನಾಲ್ಕೈದು ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು, ಪಕ್ಷದ ಟಿಕೆಟ್ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದೇ ವಿವಿಧ ಪಕ್ಷದ ಮುಖಂಡರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅಲ್ಲದೇ ಬಂಡಾಯದ ಅಪಾಯವೂ ಇತ್ತು. ಕೊನೆ ಗಳಿಗೆಯಲ್ಲಿ ತಮ್ಮ ತಮ್ಮ ಪಕ್ಷಗಳ ಮುಖಂಡರನ್ನು ಒಂದು ಸೂರಿನಡಿ ತಂದು ಬಿ.ಫಾರ್ಮ್ ನೀಡಿ ಎಲ್ಲರೂ ಒಟ್ಟಾಗಿ ಚುನಾವಣೆಯಲ್ಲಿ ಸಹಕರಿಸುವಂತೆ ನೋಡಿಕೊಳ್ಳಲಾಗಿದೆ.
ಸಾಮಾನ್ಯ ಕ್ಷೇತ್ರದ ಟಿಕೆಟ್ಗಾಗಿ ಎಲ್ಲ ವರ್ಗದ ಅಭ್ಯರ್ಥಿಗಳೂ ಆಕಾಂಕ್ಷಿಗಳಾಗಿದ್ದು, ಪಕ್ಷಗಳ ಮುಖಂಡರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಯಾವ ಕ್ಷೇತ್ರಗಳಲ್ಲಿ ಯಾವ ವರ್ಗದ ಹೆಚ್ಚು ಮತಗಳಿವೆ ಎಂಬ ಅಂಕಿ ಅಂಶಗಳನ್ನು ಲೆಕ್ಕಹಾಕಿ ಎಲ್ಲ ಪಕ್ಷದ ಮುಖಂಡರು ತೂಕಹಾಕಿ ಬಿ.ಫಾರ್ಮ್ ನೀಡಿದ್ದಾರೆ.
ಬಿ.ಫಾರ್ಮ್ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮುನ್ನ ಪಟ್ಟಣದ ಹಿರೇಮಠದ ಪೂಜ್ಯರ ದರ್ಶನ ಪಡೆದು, ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ತಮ್ಮ ತಮ್ಮ ಇಷ್ಟದೇವತೆಗಳ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಲು ಕಚೇರಿಗೆ ಆಗಮಿಸಿದ್ದು ಸಾಮಾನ್ಯವಾಗಿತ್ತು.
ಇನ್ನು ಕೆಲವರು ತಮ್ಮ ಬಲ ಪ್ರದರ್ಶಿಸುವ ನಿಟ್ಟಿನಲ್ಲಿ ಬಾಜಾ ಭಜಂತ್ರಿಯೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದರು. ಒಟ್ಟಿನಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಬಿ.ಫಾರ್ಮ್ ಪಡೆದು ತಮ್ಮ ನಾಮಪತ್ರ ಸಲ್ಲಿಸಿ, ಚುನಾವಣಾ ಪ್ರಚಾರಕ್ಕೆ ಸಜ್ಜಾಗಿದ್ದಾರೆ. ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣಾ ಕಣ ರಂಗೇರಿದ್ದು, ಇನ್ನುಮುಂದೆ ಪ್ರಚಾರದ ಭರಾಟೆ ಶುರುವಾಗುವ ನಿರೀಕ್ಷೆ ಇದೆ.
ಜಯರಾಜ ದಾಬಶೆಟ್ಟಿ