Advertisement

ಬಾಳಿಲ ಶಾಲೆ ಹೊಸ ಅಕ್ಕಿ ಊಟದ ಸಂಭ್ರಮ

09:51 AM Nov 22, 2018 | |

ಬೆಳ್ಳಾರೆ : ಬಾಳಿಲದ ವಿದ್ಯಾಬೋಧಿನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹೊಸ ಅಕ್ಕಿ ಊಟದ ಸಂಭ್ರಮ. ಮಕ್ಕಳು ಬಾಯಿ ಚಪ್ಪರಿಸಿ, ಹೊಸ ಅಕ್ಕಿಯ ಊಟವನ್ನು ಸವಿದರು. ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಹೆತ್ತವರು ಅತ್ಯುತ್ಸಾಹದಿಂದ ಕೊಯ್ಲು ಹಾಡಿನೊಂದಿಗೆ ಶಾಲೆಯ ಅಂಗಳದಲ್ಲೇ ಭತ್ತವನ್ನು ಬೇರ್ಪಡಿಸಿದರು.

Advertisement

ಗ್ರಾಮೀಣ ಪ್ರದೇಶದಿಂದ ದೂರ ಸರಿಯುತ್ತಿರುವ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನವೊಂದು ವಿದ್ಯಾಬೋಧಿನಿಯಲ್ಲಿ ಸದ್ದಿಲ್ಲದೆ ಸಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಲ್ಲಿ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಗದ್ದೆಯನ್ನು ಉತ್ತು, ಬಿತ್ತಿ, ನೇಜಿಗೆ ನೀರು-ಗೊಬ್ಬರವುಣಿಸಿ, ಅವು ತೆನೆ ಅರಳಿಸುವುದನ್ನು ಕಂಡು ಸಂಭ್ರಮಿಸಿದ್ದಾರೆ. ಕೊನೆಗೆ ಹಿರಿಯರೊಂದಿಗೆ ಸೇರಿ ಕೊಯ್ಲು ಮಾಡಿ, ಭತ್ತವನ್ನು ಬೇರ್ಪಡಿಸಿದ್ದಾರೆ. ಶಾಲೆಯಲ್ಲಿರುವ 125 ಮಕ್ಕಳನ್ನು ಭವಿಷ್ಯದ ಕೃಷಿಕರನ್ನಾಗಿ ರೂಪಿಸುವ ಪ್ರಯತ್ನವೂ ನಡೆದಿದೆ.

ಭತ್ತ, ತರಕಾರಿ
ಬಾಳಿಲದ ವಿದ್ಯಾಬೋಧಿನಿ ಶಾಲೆಯಲ್ಲಿ ಒಂದು ಮುಡಿಯಿಂದ ಒಂದು ಕ್ವಿಂಟಾಲ್‌ ಅಕ್ಕಿಯನ್ನು ಪ್ರತಿ ವರ್ಷವೂ ಶಾಲೆಯ ಗದ್ದೆಯಲ್ಲಿ ಬೆಳೆಯಲಾಗುತ್ತದೆ. ಇವುಗಳೊಂದಿಗೆ ಸೌತೆಕಾಯಿ, ಅಲಸಂಡೆ, ಬೆಂಡೆ ಇತ್ಯಾದಿ ತರಕಾರಿಗಳ ಸಾಲುಗಳೂ ಇವೆ. ಕ್ರೀಡಾಂಗಣದ ಸುಮಾರು ಕಾಲು ಭಾಗವನ್ನು ತೊಂಡೆ ಬಳ್ಳಿಯ ಚಪ್ಪರವೇ ಆವರಿಸಿರುವುದು ವಿಶೇಷ. ಪುಷ್ಟವಾಗಿ ಬೆಳೆದ ಬಸಳೆಯ ಬಳ್ಳಿಗಳು ನೋಡುಗರ ಕಣ್ಸೆಳೆಯುತ್ತವೆ.

25ರಿಂದ 30 ಸೂಡಿ ವೀಳ್ಯದೆಲೆ ಮಾರಾಟ ಮಾಡಿದ ಹಣದಿಂದ ವಿದ್ಯಾರ್ಥಿಗಳು ಕಡ್ಲೆ ಹಿಂಡಿ, ನೆಲ್ಲಿ ಹಿಂಡಿ ಗೊಬ್ಬರಗಳನ್ನು ಖರೀದಿಸಿ, ಗಿಡ – ಬಳ್ಳಿಗಳ ಆರೈಕೆ ಮಾಡುತ್ತಿದ್ದಾರೆ. ತರಗತಿಯ ಬಿಡುವಿನಲ್ಲಿ ಹಾಗೂ ರಜಾ ದಿನಗಳಲ್ಲಿ ವಿದ್ಯಾರ್ಥಿಗಳೇ ಗದ್ದೆ ಹಾಗೂ ತರಕಾರಿ ತೋಟಕ್ಕೆ ನೀರುಣಿಸುವ ಕೆಲಸ ನಿರ್ವಹಿಸುತ್ತಾರೆ.

ಮಕ್ಕಳೇ ಬಾಣಸಿಗರು!
ಭತ್ತದ ಕೊಯ್ಲು ಹಾಗೂ ಹೊಸ ಅಕ್ಕಿಯ ಭೋಜನ ಕೂಟದಲ್ಲಿ ಮಕ್ಕಳೇ ಬಾಣಸಿಗರಾಗಿದ್ದುದು ವಿಶೇಷವಾಗಿತ್ತು. ಶಿಕ್ಷಕರು ಹಾಗೂ ಅಡುಗೆ ಸಿಬಂದಿಯ ಮಾರ್ಗದರ್ಶನದಲ್ಲಿ ಹೊಸ ಅಕ್ಕಿಯ ಊಟವನ್ನು ತಯಾರಿಸಿ, ನೆರೆದ ಎಲ್ಲರಿಗೂ ಉಣಬಡಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮುಖದಲ್ಲಿ ಹೊಸ ಹುರುಪು ಹಾಗೂ ಸಂತೃಪ್ತಿಯ ಭಾವ ಮಿನುಗುತ್ತಿತ್ತು.

Advertisement

ಗಣ್ಯರು, ಎಸ್‌ಡಿಎಂಸಿ ಸಹಕಾರ
ಪ್ರತೀ ವರ್ಷವೂ ಮಕ್ಕಳ ಆಸಕ್ತಿಯನ್ನು ಗಮನಿಸುತ್ತಾ ಬಂದಿರುವ ಗಣ್ಯರು ಹಾಗೂ ಶಾಲಾ ಎಸ್‌ಡಿಎಂಸಿ ಮಂಡಳಿ ಸದಸ್ಯರು ಬಾಲ ಕೃಷಿಕರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ,ಅಕ್ಕಿ ಮಕ್ಕಳ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಿದೆ. ಶ್ರಮ ಸಂಸ್ಕೃತಿಗೂ ಪ್ರೋತ್ಸಾಹ ಕೊಡುತ್ತಿದೆ. ಮಕ್ಕಳಿಗೆ ಗ್ರಾಮಸ್ಥರು ಊಟಕ್ಕೆ ಬಾಳೆ ಎಲೆ, ಮಜ್ಜಿಗೆ,ತೆಂಗಿನಕಾಯಿಗಳನ್ನು ಕೊಡುತ್ತಿದ್ದಾರೆ.

ಕೃಷಿಯ ಜ್ಞಾನ
ಮೊಬೈಲ್‌, ಟಿವಿ ಎಂದು ಸಮಯವನ್ನು ಪೋಲು ಮಾಡುವ ಈಗಿನ ವಿದ್ಯಾರ್ಥಿ ಸಮೂಹಕ್ಕೆ ಕೃಷಿ ಚಟುವಟಿಕೆ ಒಂದು ವಿಶೇಷ ಅನುಭವ ನೀಡುತ್ತದೆ. ಅವರ ಬದುಕಿಗೊಂದು ಪಾಠವಾಗುತ್ತದೆ. ಈ ಮೂಲಕ ಕೃಷಿಯ ಜ್ಞಾನ ಮಕ್ಕಳಲ್ಲಿ ಕಿಂಚಿತ್ತಾದರೂ ಮೂಡುತ್ತದೆ.
 -ಜಾಹ್ನವೀ ಕಾಂಚೋಡು
ಎಸ್‌ಡಿಎಂಸಿ ಅಧ್ಯಕ್ಷೆ, ತಾ.ಪಂ. ಸದಸ್ಯೆ 

ಬಾಲಚಂದ್ರ ಕೋಟೆ 

Advertisement

Udayavani is now on Telegram. Click here to join our channel and stay updated with the latest news.

Next