Advertisement

ಸಾಮಾಜಿಕ ಸೇವೆಗೆ 5 ಎಕರೆ ಭೂಮಿ ಕೊಡಿ

04:13 PM Sep 17, 2018 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ರಡ್ಡಿ ಸಮಾಜದ ಸಮೂಹ ಸಂಘಗಳ ಸಂಸ್ಥೆಗಳಿಂದ ವಿವಿಧ ಸಾಮಾಜಿಕ ಸೇವೆ ಕೈಗೊಳ್ಳಲು ಬಾಗಕೋಟೆ ಪಟ್ಟಣದಲ್ಲಿ 5 ಎಕರೆ ಜಾಗ ಕೊಡಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಾನೂ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗ ರಡ್ಡಿ ಒತ್ತಾಯಿಸಿದರು.

Advertisement

ನವನಗರದ ಡಾ| ಅಂಬೇಡ್ಕರ ಭವನದಲ್ಲಿ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರಿ ಸಂಘದ 3ನೇ ವಾರ್ಷಿಕ ಸಭೆ, ರಡ್ಡಿ ಸಮಾಜದ ಸಮೂಹ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಡ್ಡಿ ಸಮಾಜಕ್ಕೆ ನೀಡುವ ಈ ಜಾಗೆಯಿಂದ ಕೇವಲ ನಮ್ಮ ಸಮಾಜಕಷ್ಟೇ ಬಳಕೆಯಾಗುವುದಿಲ್ಲ. ಈ ಜಾಗೆ ಬಳಸಿಕೊಂಡು ಜಿಲ್ಲೆಯ ಎಲ್ಲ ಸಮಾಜದ ಏಳ್ಗೆಗೂ ಕೆಲಸ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಇರುವ ರಡ್ಡಿ ಸಮುದಾಯದ ಕಾಲೇಜು, ವಸತಿ ನಿಲಯದಲ್ಲಿ 8 ಸಾವಿರ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 1 ಸಾವಿರ ಮಕ್ಕಳೂ ನಮ್ಮ ಸಮಾಜದವರಿಲ್ಲ. ಬಹುತೇಕ ಬೇರೆ ಬೇರೆ ಸಮಾಜದ ಮಕ್ಕಳೇ ಅಲ್ಲಿ ಕಲಿಯುತ್ತಿದ್ದಾರೆ. ಅದೇ ಮಾದರಿಯ ಸಾಮಾಜಿಕ ಸೇವೆಗೈಯ್ಯಲು ಬಾಗಲಕೋಟೆಯಲ್ಲಿ ಭೂಮಿ ಒದಗಿಸಬೇಕು ಎಂದು ತಿಳಿಸಿದರು.

ಯಾವುದೇ ಒಂದು ಸಮಾಜ ಒಂದೆಡೆ ಸೇರಿ ಸಂಘಟನೆಗೊಳ್ಳುವುದು ತಪ್ಪಲ್ಲ. ಇತರ ಎಲ್ಲ ಸಮಾಜಗಳೂ ಅದನ್ನು ಮಾಡುತ್ತೇವೆ. ಹಾಗೆಯೇ ರಡ್ಡಿ ಸಮುದಾಯ ಉತ್ತರಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ. ಉತ್ತರ ಮತ್ತು ದಕ್ಷಿಣ ಭಾಗದ ನಮ್ಮ ಸಮುದಾಯದವರು ಒಂದೆಡೆ ಸೇರಿರಲಿಲ್ಲ. ಆ ಕೆಲಸವನ್ನು ಕಳೆದ ವರ್ಷ ಎಲ್ಲರೂ ಮಾಡಿದ್ದೇವೆ. ಹೀಗೆ ಪದೇ ಪದೇ ಒಂದೆಡೆ ಸೇರಿ, ಸಂಘಟನೆ ಮಾಡುವ ಕೆಲಸ ನಡೆಯಬೇಕು ಎಂದರು.

ಯಾವುದೇ ಸಮಾಜಕ್ಕೆ ಜಾಗೆ, ಅನುದಾನ ಕೊಟ್ಟರೆ, ಆ ಸಮಾಜ ಸಂಘಟನೆಗೊಳ್ಳುವ ಜತೆಗೆ ಸಾಮಾಜಿಕ ಕೆಲಸದಲ್ಲಿ ಮತ್ತಷ್ಟು ಬಲಿಷ್ಠವಾಗಿ ತೊಡಗಿಸಿಕೊಳ್ಳುತ್ತದೆ. ಇದರಿಂದ ಇತರೆ ಸಮಾಜಗಳಿಗೂ ಸೌಲಭ್ಯ ಕಲ್ಪಿಸಲು ಸಾಧ್ಯವಿದೆ ಎಂದು ತಿಳಿಸಿದರು.

Advertisement

ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌. ಪಾಟೀಲ ಮಾತನಾಡಿ, ರಡ್ಡಿ ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿದೆ. ಎಲ್ಲೋ ಒಂದಿಬ್ಬರಿಗೆ ಸಮಸ್ಯೆ ಇದ್ದರೂ ಅವರಿಗೆ ಎಲ್ಲ ರೀತಿಯ ಸಹಾಯ- ಸಹಕಾರ ನೀಡುವ ಮನೋಭಾವನೆ ಸಮಾಜದಲ್ಲಿದೆ ಎಂದರು. ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ ಮಾತನಾಡಿ, ರಡ್ಡಿ ಸಮಾಜದಿಂದ ಪ್ರತಿಭಾ ಪುರಸ್ಕಾರ ನಡೆಸುತ್ತಿರುವುದು ಉತ್ತಮ ಕೆಲಸ. ಸಮಾಜದ ಸವಿತಾ ಲಕರಡ್ಡಿ ಮತ್ತು ಐಶ್ವರ್ಯ ಲಕರಡ್ಡಿ ಎಂಬ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಮಾಜ ಬಾಂಧವರು ಕೇಳಿದ್ದು, ಅವರು ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸಿದರೆ, ನಮ್ಮ ಬಿವಿವಿ ಸಂಘದಿಂದ ಉಚಿತ ಸೀಟು ನೀಡಿ, ಶಿಕ್ಷಣ ಕೊಡಲಾಗುವುದು ಎಂದು ಭರವಸೆ ನೀಡಿದರು. 

ಕಳೆದ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿಭಾಗದಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬೆಂಗಳೂರಿನ ಜಯನಗರ ಶಾಸಕ ಸೌಮ್ಯ ರಡ್ಡಿ, ತಾಪಂ. ಅಧ್ಯಕ್ಷ ಸಿ.ಆರ್‌. ಪರನಗೌಡರ, ಪ್ರಮುಖರಾದ ಎನ್‌. ಶೇಖರ ರಡ್ಡಿ, ಕೃಷ್ಣಾ ರಡ್ಡಿ, ಎಸ್‌.ಎನ್‌. ಅಮಾತೆಪ್ಪನವರ, ಸಿ.ಕೆ. ಒಂಟಗೋಡಿ, ಡಾ|ಜಿ.ಆರ್‌. ಹಲಗಲಿ, ಅನುಸೂಯಾ ಪಾಟೀಲ, ನಾರಾಯಣ ಹಾದಿಮನಿ, ಎಸ್‌.ಬಿ. ಮಾಚಾ, ಎಸ್‌|ಎಸ್‌. ನಾಲತವಾಡ, ಸಂಜೀವ ಸತ್ಯರಡ್ಡಿ, ಈಶ್ವರಪ್ಪ ಕೋನಪ್ಪನವರ, ಮೋಹನ ಹೊಸಮನಿ ಮುಂತಾದವರು ಪಾಲ್ಗೊಂಡಿದ್ದರು.

ಸವಾಲ್‌-ಜವಾಬ್‌ !
ರಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮಾಜಕ್ಕೆ 5 ಎಕರೆ ಭೂಮಿಯನ್ನು ಬಿಟಿಡಿಎದಿಂದ ಒದಗಿಸಲು ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಡಾ|ವೀರಣ್ಣ ಚರಂತಿಮಠ, ಹಿಂದೆ ಎಸ್‌.ಆರ್‌. ಪಾಟೀಲರು ಸಚಿವರಾಗಿದ್ದರು. ಅವರದೇ ಸರ್ಕಾರವೂ ಇತ್ತು. ಆಗ ಏಕೆ ಕೊಡಲಿಲ್ಲ. ಮುಂದೆ ನಮ್ಮ ಸರ್ಕಾರ ಬಂದರೆ ನಾನು ಐದು ಎಕರೆ ಭೂಮಿ ಕೊಡಿಸುತ್ತೇನೆ ಎಂದರು. ಇದಕ್ಕೆ ಜವಾಬ್‌ ನೀಡಿದ ಮಾಜಿ ಸಚಿವ ಎಸ್‌.ಆರ್‌. ಪಾಟೀಲ, ನಾನು 2013ರಿಂದ 2016ರ ವರೆಗೆ ಸಚಿವನಾಗಿದ್ದೆ. ಈ ಸಂಘ ಹುಟ್ಟಿಕೊಂಡಿದ್ದು 2015ರಲ್ಲಿ. ಯಾವುದೇ ಸಂಘ- ಸಂಸ್ಥೆಗೆ ಭೂಮಿ ಕೊಡಬೇಕಾದರೆ ಮೂರು ವರ್ಷ ಆಗಿರಬೇಕು. ಭೂಮಿ ಕೊಡಿಸಲು ನನಗೆ ಬೇಡಿಕೆಯೂ ಇಟ್ಟಿರಲಿಲ್ಲ. ಆದ್ದರಿಂದ ನಾನು ಸಚಿವನಾಗಿದ್ದ ವೇಳೆ ಭೂಮಿ ಕೊಡಿಸಿಲ್ಲ ಎಂಬ ಆಪಾದನೆ ನನ್ನ ಮೇಲೆ ಹಾಕುವುದು ಬೇಡ. ಈಗ ಸಂಘ ಸ್ಥಾಪನೆಗೊಂಡು 3 ವರ್ಷ ಕಳೆದಿವೆ. ಭೂಮಿ ಕೊಡಿಸಲು ಅಧಿಕಾರದಲ್ಲೇ ಇರಬೇಕಿಲ್ಲ. 15 ದಿನಗಳಲ್ಲಿ ಬಿಟಿಡಿಎಗೆ ಆಡಳಿತ ಮಂಡಳಿ ಬರಲಿದೆ. ಆಗ ಸಂಘಕ್ಕೆ ಜಾಗೆ ಕೊಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next