ವಿಟ್ಲ : ಕನ್ಯಾನ ಗ್ರಾಮದ ಬಾಳೆಕೋಡಿ ಶ್ರೀ ಕಾಶೀಕಾಳಭೈರವೇಶ್ವರ ಶಿಲಾಂಜನ ಕ್ಷೇತ್ರದ ಡಾ. ಶ್ರೀ ಶಶಿಕಾಂತಮಣಿ ಸ್ವಾಮೀಜಿ (44) ಅವರು ಮೇ 18ರ ತಡರಾತ್ರಿ ಅನಾರೋಗ್ಯದಿಂದ ದೈವೈಕ್ಯರಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೊಳ್ಳೇಗಾಲದ ಮಣಿಯನ್ ಕುಟ್ಟಿ ಸ್ವಾಮಿನಾಥನ್ ಅವರಿಂದ 49 ಭೈರವ ತಂತ್ರ ವಿದ್ಯೆಗಳಲ್ಲಿ ಪರಿಣಿತರಾಗಿರುವ ಶ್ರೀ ಸದ್ಗುರು ಶಶಿಕಾಂತಮಣಿ ಸ್ವಾಮೀಜಿಗಳು ಸದಾಶಿವಧ್ಯಾನದಿಂದ ಶ್ರೀಕ್ಷೇತ್ರವನ್ನು ಆರ್ತರಾದವರ ಸಾಂತ್ವನ ಕೇಂದ್ರವಾಗಿ ರೂಪಿಸಿ ಸುಮಾರು 18 ವರ್ಷಗಳಿಂದ ಸೇವೆಯನ್ನು ಸಲ್ಲಿಸಿ ಅತ್ಯಂತ ಕಿರಿಯ ದಲಿತ ಸ್ವಾಮೀಜಿಯೆನಿಸಿಕೊಂಡಿದ್ದರು. ದೇವಸ್ಥಾನ ನಿರ್ಮಾಣ ಮಾಡಲು ಪ್ರಯತ್ನಿಸಿದ್ದ ಅವರಿಗೆ ಪೂರ್ತಿಗೊಳಿಸುವ ಸಂಕಲ್ಪ ಈಡೇರಲಿಲ್ಲ. ಶ್ರೀ ಕಾಳಭೈರವೇಶ್ವರ ಟ್ರಸ್ಟ್ ರಚಿಸಿ, ಧನಸಹಾಯ, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿದ್ದರು. ಕ್ಷೇತ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ, ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದರು.
ಧಾರ್ಮಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ಅವರು ವಿಶೇಷ ಸಾಧನೆ ಮಾಡಿದ್ದಾರೆ. ತುಳು ಕನ್ನಡ ಭಾಷೆಯಲ್ಲಿ ಕವಿತೆ ರಚಿಸಿದ್ದ ಅವರು ಅನೇಕ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
2014ರ ಪ್ರತಿಷ್ಠಿತ ನೆಲ್ಸನ್ ಮಂಡೇಲಾ ಪ್ರಶಸ್ತಿ, ಇಂಡೋನೇಪಾಲ್ ಸದ್ಭಾವನಾ ಪ್ರಶಸ್ತಿ ವನ್ನು ನೇಪಾಳದ ಪ್ರಧಾನಿ ಕಿಲ್‌ರಾಜ್ ರೆಗ್ಮಿಯವರಿಂದ ಪಡೆದುಕೊಂಡಿದ್ದಾರೆ. ಎಕಾನಾಮಿಕ್ ಗ್ರೋಥ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು 2014-15ನೇ ಸಾಲಿನ ಪ್ರೈಡ್ ಆಫ್ ಎಷಿಯಾ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಜೆಕ್ಕಾರ್ ಬೆಳದಿಂಗಳ ಸಮ್ಮೇಳನದಲ್ಲಿ ಕರ್ನಾಟಕ ಧರ್ಮ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ಪ್ರದಾನ ಮಾಡಲಾಗಿದೆ. 2018ರ ಅಗಸ್ಟ್ 10ರಂದು ದೆಹಲಿಯಲ್ಲಿ ಜರ್ಮನಿಯ ಇಂಟರ್ ನ್ಯಾಷನಲ್ ಪೀಸ್ ಯುನಿವರ್ಸಿಟಿ ಇಂಡಿವಿಜಲ್ ಕಾನ್ ಸ್ಟ್ರಿಬ್ಯುಶನ್ ಫಾರ್ ಇಕನಾಮಿಕ್ ಆಂಡ್ ಸೋಷಿಯಲ್ ಡೆವಲಪ್ ಮೆಂಟ್ ಎಂಬ ನ್ಯಾಷನಲ್ ಸೆಮಿನಾರ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ಅವರು ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಆಯೋಜಿಸಿದ್ದು, ಹವ್ಯಾಸಿ ಭಾಗವತರಾಗಿದ್ದರು.