ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಬಿದರೆ ಗ್ರಾಪಂ ವ್ಯಾಪ್ತಿಯ ಪುರಾಣ ಪ್ರಸಿದ್ಧ ಸಿಂಧೂರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವಲ್ಲಿ ಮುಜುರಾಯಿ ಇಲಾಖೆ ವಿಫಲಗೊಂಡಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2012ರಲ್ಲಿ ಪತ್ರಿಕಾ ವರದಿಯನ್ನು ಉಲ್ಲೇಖೀಸಿ ಅಂದಿನ ಅಪರ ಜಿಲ್ಲಾಧಿಕಾರಿಗಳು ಶಿಥಿಲಗೊಳ್ಳುತ್ತಿರುವ ಗುಹಾಂತರ ದೇವಾಲಯದ ಅಭಿವೃದ್ಧಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಿದ್ದರು. ಅದರಂತೆ ಅಂದಾಜು ಪಟ್ಟಿಯನ್ನು ತಯಾರಿಸಿ ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು ಎಂದರು.
ಅನುದಾನದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ದುರಸ್ತಿ ಮಾಡಿಸುವುದಾಗಿ ಸರ್ಕಾರದಿಂದ ಜಿಲ್ಲೆಯ ಮುಜುರಾಯಿ ಕಚೇರಿಗೆ ಪತ್ರ ಬಂದಿದೆ. ಆದರೆ, ಇದುವರೆಗೂ ಅಭಿವೃದ್ಧಿ ಕಾಮಗಾರಿ ಮಾಡಿಸಿಲ್ಲ. ಗುಹೆಯ ಒಳಗೆ ವೀರಭದ್ರಸ್ವಾಮಿ ಹಾಗೂ ಬಸವಣ್ಣನ ಮೂರ್ತಿ ಇವೆ. ಪಕ್ಕದಲ್ಲೇ ನಿರಂತರ ನೀರು ಹರಿಯುವ ಬಾವಿ ಇದೆ. ಮುಖ ಮಂಟಪದ ಕಲ್ಲು ಕಂಬಗಳೆಲ್ಲಾ ತುಂಡಾಗಿ ಬಿದ್ದು ಹೋಗಿವೆ. ಸುಮಾರು 800 ವರ್ಷಗಳ ಇತಿಹಾಸವಿದೆ ಎನ್ನಲಾಗಿದೆ. ಶ್ರೀ ಪರದೇಶಪ್ಪನವರ ಮಠದ ಧರ್ಮಾಧಿಕಾರಿಗಳು ಇಲ್ಲಿಗೆ ಬಂದು ತಿಂಗಳಿಗೊಮ್ಮೆ ಪೂಜೆ ನೇರವೇರಿಸುತ್ತಾರೆ ಎಂದರು.
ದೇವಸ್ಥಾನದ ಸಮೀಪದಲ್ಲೇ ಋಷಿಮುನಿಗಳು ವಾಸಿಸುತ್ತಿದ್ದರು ಎನ್ನಲಾದ ಬೃಹದಾಕಾರದ ಬಂಡೆ ಆವರಿಸಿದ ಗುಹೆ ಇದ್ದು, ದ್ವಾರಕ್ಕೆ ಕಾಡುಗಲ್ಲು ಬಳಸಲಾಗಿದೆ. ಈ ಬಗ್ಗೆ ಮನವಿ ಸಲ್ಲಿಸಿದರು ಅಭಿವೃದ್ಧಿಯಾಗದೆ ಇರುವುದು ವಿಷಾದದ ಸಂಗತಿಯಾಗಿದೆ. ಇನ್ನು ಮಂದಾದರೂ ಮುಜುರಾಯಿ ಇಲಾಖೆ ಗಮನ ಹರಿಸಿ ಪುರಾಣ ಪ್ರಸಿದ್ಧ ವೀರಭದ್ರಸ್ವಾಮಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.