ಬಾಳೆಹೊನ್ನೂರು: ಪ್ರಕೃತಿ ದೈವದತ್ತವಾಗಿ ಕೊಟ್ಟ ಕೊಡುಗೆ ಅಪಾರ. ಈ ಕೊಡುಗೆಯಲ್ಲಿ ಒಂದಾದ ಪರಿಸರವನ್ನು ಉಳಿಸಿ ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶ್ರೀ ರಂಭಾಪುರಿ ಪೀಠದ ಡಾ| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಸಮಾರಂಭದಲ್ಲಿ ನೆಗಳೂರು ಶ್ರೀಗಳು ಕೈಕೊಂಡಿದ್ದ ಪ್ರಕೃತಿ ಸಮತೋಲನ ಪಾದಯಾತ್ರೆಯ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರಕೃತಿಯ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚುತ್ತಿದೆ. ಕಾಡು-ಪರಿಸರ ನಿರ್ನಾಮಗೊಳ್ಳುತ್ತಿವೆ. ಭೂಮಿಯ ತಾಪಮಾನ ಹೆಚ್ಚುತ್ತಿದ್ದು, ಅಸಮತೋಲನ ಉಂಟಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾಗೃತರಾಗಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಾಗಿದೆ ಎಂದರು.
ಕೆಲವೊಮ್ಮೆ ಅತಿವೃಷ್ಟಿ, ಕೆಲವೊಮ್ಮೆ ಅನಾವೃಷ್ಟಿ ಉಂಟಾಗಿ ಜೀವ ಸಂಕುಲ ಅನೇಕ ನೋವುಗಳನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ. ಹೀಗಾಗಿ ಜನ ಮನದಲ್ಲಿ ಪರಿಸರ ಪ್ರಜ್ಞೆ, ಧರ್ಮ ಪ್ರಜ್ಞೆ, ರಾಷ್ಟ್ರಪ್ರಜ್ಞೆ ಹಾಗೂ ಸಸಿ ವಿತರಿಸುವ ಮೂಲಕ ಗುರುಶಾಂತೇಶ್ವರ ಶ್ರೀಗಳು ನೆಗಳೂರಿನಿಂದ ರಂಭಾಪುರಿ ಪೀಠದ ವರೆಗೆ ಪಾದಯಾತ್ರೆ ಕೈಗೊಂಡು 2ನೇ ಅವಧಿಗೆ ಯಶಸ್ವಿಯಾಗಿ ನೆರವೇರಿಸಿದ್ದು ಸಂತೋಷ ತಂದಿದೆ ಎಂದರು. ಇದೇ ವೇಳೆ ಶ್ರೀಗಳಿಗೆ ಮಡಿ, ಫಲಪುಷ್ಪ, ರುದ್ರಾಕ್ಷಿ ಮಾಲೆಯೊಂದಿಗೆ ಗುರುರಕ್ಷೆ ನೀಡಿ ಶುಭ ಹಾರೈಸಿದರು.
ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಳೆಗಾಲದಲ್ಲಿ ಮಳೆ, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಹಿತವಾಗುವಷ್ಟು ಕೊಡು ಭಗವಂತ ಎಂದು ಪ್ರಾರ್ಥಿಸುವುದೇ ನಮ್ಮೆಲ್ಲರ ಗುರಿಯಾಗಬೇಕಾಗಿದೆ. ನಮ್ಮ ಮೂರು ವರ್ಷದ ಸಂಕಲ್ಪದಲ್ಲಿ ಎರಡನೇ ಬಾರಿಯ ಕಾರ್ಯ ಯಶಸ್ವಿಯಾಗಿದ್ದು ಸಮಾಧಾನ ತಂದಿದೆ. ತಮ್ಮ ಜೊತೆಗೆ ಸುಮಾರು 200 ಜನ ಭಕ್ತರು ಪರಿಸರ ಜಾಗೃತಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಉಲ್ಲೇಖನೀಯ ಎಂದರು. ಮುಕ್ತಿಮಂದಿರ, ಕಾರ್ಜುವಳ್ಳಿ, ಶಿವಮೊಗ್ಗ, ಗುಳೇದಗುಡ್ಡ, ಚಿಣಮಗೇರಿ, ಶಾಂತಪುರ ಶ್ರೀಗಳು, ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ ಇತರರು ಪಾಲ್ಗೊಂಡಿದ್ದರು.