Advertisement

ಅಂಗಡಿ ತೆರವು: ವ್ಯಾಪಾರಸ್ಥರ ಪರದಾಟ

11:44 AM Jul 22, 2019 | Naveen |

ಬಾಳೆಹೊನ್ನೂರು: ಬಸ್‌ ನಿಲ್ದಾಣದ ಆವರಣದಲ್ಲಿದ್ದ 2 ತಂಗುದಾಣ ಸೇರಿದಂತೆ 15ಕ್ಕೂ ಹೆಚ್ಚು ಅಂಗಡಿ, ಮಳಿಗೆಗಳನ್ನು ರಸ್ತೆ ಅಗಲೀಕರಣಕ್ಕಾಗಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ, ವ್ಯಾಪಾರಸ್ಥರು ಜೀವನೋಪಾಯಕ್ಕೆ ಪರದಾಡುವಂತಾಗಿದೆ ಎಂದು ಅಂಗಡಿ ಮಾಲಿಕರು ಅಳಲು ತೋಡಿಕೊಂಡಿದ್ದಾರೆ.

Advertisement

ಪತ್ರಿಕೆಯೊಂದಿಗೆ ಮಾತನಾಡಿದ ವ್ಯಾಪಾರಸ್ಥರು, ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ಬೇರೆಲ್ಲೂ ಅಂಗಡಿ, ಮಳಿಗೆಗಳು ದೊರೆಯುತ್ತಿಲ್ಲ. ಗ್ರಾಪಂನವರು ತ್ವರಿತವಾಗಿ ಕಾಮಗಾರಿ ಮುಗಿಸಿ ಅಂಗಡಿ, ಮಳಿಗೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.

ಸುಮಾರು 40 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದ ಅಂಗಡಿ ಮಾಲಿಕರು ಇದೀಗ ಚಾತಕ ಪಕ್ಷಿಯಂತೆ ಅಂಗಡಿ, ಮಳಿಗೆಗೆ ಕಾಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ್ರು, ಬಸ್‌ ನಿಲ್ದಾಣ ಆವರಣದ ಕಟ್ಟಡವನ್ನು ತುರ್ತಾಗಿ ತೆರವುಗಿಳಿಸುವುದು ಬೇಡ. ಅಂಗಡಿಯವರಿಗೆ ಬದಲಿ ವ್ಯವಸ್ಥೆ ಮಾಡಿಸಿಕೊಟ್ಟು ತೆರವುಗೊಳಿಸಬೇಕೆಂದು ಪಂಚಾಯಿತಿಗೆ ಸೂಚಿಸಿದ್ದರು. ಆದರೆ, ಶಾಸಕರ ಸೂಚನೆಯನ್ನು ಲೆಕ್ಕಿಸದೇ ಅಂಗಡಿ, ಮಳಿಗೆ ತೆರವುಗೊಳಿಸಲಾಗಿದೆ ಎಂದು ದೂರಿದರು.

ಈ ಸಂಬಂಧ ಗ್ರಾಪಂ ಅಧ್ಯಕ್ಷ ಮಹಮ್ಮದ್‌ ಹನೀಫ್‌ ಅವರನ್ನು ಪ್ರಶ್ನಿಸಿದಾಗ, ಬಾಕ್ಸ್‌ ಚರಂಡಿ ಕಾಮಗಾರಿ ಪೂರ್ಣಗೊಂಡ ನಂತರ ಅಂಗಡಿ, ಮಳಿಗೆ ನಿರ್ಮಿಸಲಾಗುವುದು ರಸ್ತೆ ಅಗಲೀಕರಣ ಹಾಗೂ ಬಾಕ್ಸ್‌ ಚರಂಡಿ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಕಾಮಗಾರಿಯನ್ನು ವಿಳಂಬ ಮಾಡುತ್ತಿದ್ದಾರೆ. ಬಾಕ್ಸ್‌ ಚರಂಡಿ ನಿರ್ಮಾಣ ಮಾಡಿದ ತಕ್ಷಣವೇ ಆಟೋ ನಿಲ್ದಾಣ ಹಾಗೂ ಅಂಗಡಿ, ಮಳಿಗೆ ಕಟ್ಟಡ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಿ ಮಳಿಗೆ ನಿರ್ಮಿಸಿಕೊಡುವುದಾಗಿ ತಿಳಿಸಿದರು.

Advertisement

ಮಂದಗತಿ ಕಾಮಗಾರಿ: ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಬಾಕ್ಸ್‌ ಚರಂಡಿ ಕಾಮಗಾರಿ 5 ತಿಂಗಳಿನಿಂದ ಆಮೆ ಗತಿಯಲ್ಲಿ ಸಾಗುತ್ತಿದೆ. ಇದುವರೆಗೂ ಸುಮಾರು 500 ಮೀ. ನಷ್ಟು ಕಾಮಗಾರಿ ಮಾಡಿದ್ದಾರೆ. ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವೆಡೆ ಕಾಮಗಾರಿ ಅರ್ಧಂಬರ್ಧವಾಗಿದೆ. ಹಾಲಪ್ಪ ಗೌಡ ಕಾಂಪ್ಲೆಕ್ಸ್‌ ಮುಂಭಾಗದಲ್ಲಿ ಕಾಮಗಾರಿ ಪ್ರಾರಂಭ ಮಾಡಿ 3 ತಿಂಗಳು ಕಳೆದರೂ ಪೂರ್ಣಗೊಳಿಸಿಲ್ಲ. ಹೊಂಡದಲ್ಲಿ ನೀರು ನಿಂತಿದ್ದು, ಪಾರ್ಕಿಂಗ್‌ ಮಾಡಿದ ವಾಹನವೊಂದು ಸ್ಕಿಡ್‌ ಆಗಿ ಕೊಳಚೆ ನೀರಲ್ಲ ಶಾರದಾ ಡ್ರೈ ಕ್ಲೀನರ್‌ನಲ್ಲಿ ಇಸ್ತ್ರಿ ಮಾಡುತ್ತಿದ್ದ ಬಟ್ಟೆಗಳ ಮೇಲೆ ರಾಡಿ ಮಣ್ಣು ಸಿಂಪಡನೆಯಾಗಿ ಸಮಸ್ಯೆ ಉಂಟಾಗಿದೆ.

ಈ ಬಗ್ಗೆ ಕಾಮಗಾರಿ ಉಸ್ತುವಾರಿ ವಹಿಸಿರುವ ಇಂಜಿನಿಯರ್‌ರನ್ನು ಸಂಪರ್ಕಿಸಿದಾಗ ತ್ವರಿತವಾಗಿ ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ. ಅಂಗಡಿ, ಮಳಿಗೆ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ ಶೀಘ್ರ ಮುಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಬಸ್‌ ನಿಲ್ದಾಣದ ಆವರಣದಲ್ಲಿ 15ಕ್ಕೂ ಹೆಚ್ಚು ನೆಲ ಬಾಡಿಗೆ ಕಟ್ಟಡಗಳಿದ್ದು, ಅವುಗಳನ್ನು ಪಂಚಾಯಿತಿ ವಶಕ್ಕೆ ಪಡೆದು ಉತ್ತಮ ಕಟ್ಟಡ ನಿರ್ಮಿಸಿಕೊಡುವ ಯೋಚನೆ ಮಾಡಲಾಗಿದೆ. ಈ ಹಿಂದೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನೆಲ ಬಾಡಿಗೆ ಕಟ್ಟಡಗಳನ್ನು ವಶಕ್ಕೆ ಪಡೆಯುವ ನಿರ್ಣಯ ಕೈಗೊಂಡಿದ್ದರೂ ಅನುಷ್ಠಾನಗೊಂಡಿರಲಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಮಹಮ್ಮದ್‌ ಹನೀಫ್‌, ಗ್ರಾಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next