ಬಾಳೆಹೊನ್ನೂರು: ಸಾರ್ವಜನಿಕ ಉದ್ದೇಶಕ್ಕಾಗಿ ಶ್ರೀ ಜಗದ್ಗುರು ರಂಭಾಪುರಿ ಪೀಠದ 5 ಎಕರೆ ಪ್ರದೇಶದಲ್ಲಿ ಶ್ರೀ ರೇಣುಕ ಉದ್ಯಾನವನ ನಿರ್ಮಿಸಲಾಗುವುದೆಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಶ್ರೀ ರಂಭಾಪುರಿ ಪೀಠದ ಸಮೀಪ ಶ್ರೀ ಕೊಪ್ಪಲು ಚೌಡೇಶ್ವರಿ ದೇವಸ್ಥಾನದ ಪಕ್ಕದ ಪೀಠದ ಜಮೀನಿನಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಗಿಡ-ಮರಗಳನ್ನು ಬೆಳೆಸುವುದರಿಂದ ಶುದ್ಧ ಗಾಳಿ ಲಭಿಸಿ, ಸಕಲ ಜೀವ ಸಂಕುಲದ ಉಸಿರಾಟಕ್ಕೆ ಹೆಚ್ಚು ಅನುಕೂಲಕರ ವಾತವಾರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರ ಅವಧಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಅರಣ್ಯ ಇಲಾಖೆಯವರು ಔಷಧಿ ಸಸ್ಯ ಹಾಗೂ ನವಗ್ರಹ ಸಸ್ಯಗಳು ಹಾಗೂ ನಾಗಸಂಪಿಗೆ, ನಾಗಲಿಂಗ ಪುಷ್ಪ, ಕೆಂಡ ಸಂಪಿಗೆ, ಶಮಿ, ಹಲಸು, ಮಾವು, ನೇರಳೆ, ಕದಂಬ ಸೇರಿದಂತೆ ಹಲವಾರು ಗಿಡಗಳನ್ನು ಬೆಳೆಸಲು ಮುಂದಾಗಿರುವುದು ಸಂತಸ ತಂದಿದೆ. ಮಕ್ಕಳು ಹಾಗೂ ಹಿರಿಯರು, ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯಾನವನ ನಿರ್ಮಿಸಲಾಗುವುದೆಂದು ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಸತೀಶ್ ಮಾತನಾಡಿ, ಈ ಉದ್ಯಾನವನದಲ್ಲಿ ಸುಮಾರು 1ಲಕ್ಷ ರೂ. ವೆಚ್ಚದಲ್ಲಿ ವಿವಿಧ ಜಾತಿಯ 450ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಆಟವಾಡಲು ಜಾರುಬಂಡಿ, ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಬೆಂಚುಗಳನ್ನು ನಿರ್ಮಿಸಲಾಗುವುದೆಂದು ತಿಳಿಸಿದರು.
ವಲಯ ಅರಣ್ಯಾಧಿಕಾರಿ ಶಿಂದೆ ನೀಲೇಶ್ ದೇವಭಾ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ಪ್ರಕಾಶ್, ನಾರಾಯಣ, ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.