Advertisement

ಗ್ರಾಮ ಸಭೆಯಲ್ಲಿ ಸಮಸ್ಯೆಗಳ ಸರಮಾಲೆ

03:33 PM Jul 19, 2019 | Naveen |

ಬಾಳೆಹೊನ್ನೂರು: ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಬಿ.ಕಣಬೂರು ಗ್ರಾಪಂ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಗ್ರಾಮಸ್ಥರು ಬಿಚ್ಚಿಟ್ಟರು.

Advertisement

ನಾಗರಿಕ ವೇದಿಕೆಯ ಹಿರಿಯಣ್ಣ ಮಾತನಾಡಿ, ಈ ಹಿಂದಿನ ಗ್ರಾಮ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳಡಿ ಯಾವುದೇ ಕಾಮಗಾರಿಗಳು ನಡೆದಿಲ್ಲ. ಸಮಸ್ಯೆಗಳು ಬಗೆಹರಿದಿಲ್ಲ. ಹಾಗಾದರೆ, ಗ್ರಾಮ ಸಭೆ ಏಕೆ ನಡೆಸಬೇಕೆಂದು ಪ್ರಶ್ನಿಸಿದರು.

ಪಟ್ಟಣದಲ್ಲಿ ರಸ್ತೆ ಪಕ್ಕದ ಚರಂಡಿಗೆ ಕೊಳಚೆ ನೀರುವ ಬಿಡುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಕೊಳಚೆ ನೀರನ್ನು ಇಂಗುಗುಂಡಿಯಲ್ಲಿ ಇಂಗಿಸಬೇಕೆಂದು ತಿಳಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಚರಂಡಿಗಳು ಸೊಳ್ಳೆ ಹಾಗೂ ನೊಣಗಳ ಉತ್ಪತ್ತಿ ಕೇಂದ್ರವಾಗಿವೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಕ್ಕದ ಬಡಾವಣೆಯ ಕೊಳಚೆ ನೀರು ಹರಿದು ಬರುತ್ತಿದ್ದು, ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗ್ರಾಮಗಳಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ಯಾವುದೇ ಸೂಚನಾ ಫಲಕ ಹಾಕಿಲ್ಲ. ಹಾಗಾಗಿ, ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಬಸ್‌ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಯಿಂದಾಗಿ ಬಸ್‌ಗಳು ನಿಲ್ಲಲು ಸ್ಥಳವಿಲ್ಲದಂತಾಗಿದೆ. ಆದ್ದರಿಂದ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇಟ್ಟಿಗೆ ಸೀಗೋಡು ಗ್ರಾಮಸ್ಥರು ಮಾತನಾಡಿ, ಶಿವನಗರದಲ್ಲಿ ಕೋಳಿ ಫಾರಂನಿಂದ ನೊಣಗಳು ಉತ್ಪತ್ತಿಯಾಗಿ ಸಮಸ್ಯೆ ಉಂಟಾಗುತ್ತಿದೆ. ಕೋಳಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಪೊಲೀಸ್‌ ವಸತಿ ಗೃಹ ಹಾಗೂ ಅಕ್ಕಪಕ್ಕದ ಮನೆಗಳಿಗೆ ನೊಣಗಳು ನುಗ್ಗುತ್ತಿವೆ. ಕಸ ವಿಲೇವಾರಿ ಜಾಗ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ಕಸ ಕೊಳೆತು, ಕೊಳಚೆ ನೀರು ಭದ್ರಾ ನದಿ ಸೇರಿ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂದು ಹೇಳಿದರು.

Advertisement

ವಾಟುಕುಡಿಗೆಯಲ್ಲಿ ವಿದ್ಯುತ್‌ ತಂತಿ ಕಟ್ಟಾಗಿರುವ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿ 2ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪಟ್ಟಣದಲ್ಲಿ ಕೋತಿಗಳ ಕಾಟ ಮಿತಿ ಮೀರಿದ್ದು, ಈ ಹಿಂದಿನಿಂದಲೂ ಮನವಿ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾತ್ರಿಯ ವೇಳೆ ಸರ್ಕಾರಿ ಕಚೇರಿ ಹಾಗೂ ಆಟದ ಮೈದಾನ ಹಾಗೂ ರಸ್ತೆ ಬದಿಯಲ್ಲಿ ಮದ್ಯಪಾನ ಮಾಡಿ ಬಾಟಲಿ ಒಡೆದು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಆಡುವಳ್ಳಿ ಗ್ರಾಮದ ತಾಪಂ ಸದಸ್ಯ ಪ್ರವೀಣ್‌ ಮಾತನಾಡಿ, ಕರ್ಕೆಶ್ವರ, ಕಾನೂರು, ಬನ್ನೂರು, ಗಡಿಗೇಶ್ವರ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್‌ನ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಗ್ರಾಹಕರು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಕಾಂ ಇಂಜಿನಿಯರ್‌ ರಾಜಪ್ಪ ಮಾತನಾಡಿ, ಬಿಎಸ್‌ಎನ್‌ಎಲ್ ನವರು ಲಕ್ಷಾಂತರ ರೂ. ಮೆಸ್ಕಾಂಗೆ ಪಾವತಿ ಮಾಡದ ಕಾರಣ ಸಂಪರ್ಕ ಕಡಿತಗೊಳಿಸಲಾಗಿದೆ. ಮೆಸ್ಕಾಂ ಸಮಸ್ಯೆ ಬಗ್ಗೆ ದೂರವಾಣಿ ಮೂಲಕ ತಿಳಿಸಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ತಾಪಂ ಸದಸ್ಯ ಟಿ.ಎಂ. ನಾಗೇಶ್‌ ಮಾತನಾಡಿ, ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಅಲ್ಲದೇ, ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಪಂ ಸದಸ್ಯೆ ಚಂದ್ರಮ್ಮ ಮಾತನಾಡಿ, ಜಿಪಂ ವತಿಯಿಂದ 24ಲಕ್ಷ ರೂ. ಅನುದಾನ ಬರುತ್ತಿದ್ದು, ಇದನ್ನು ಏಳು ಗ್ರಾಪಂಗಳಿಗೆ ಸಮಾನವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷ ಹನೀಫ್‌ ಮಾತನಾಡಿ, ಕೋತಿಗಳ ಉಪಟಳದ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾ.ಪಂ ಉಪಾಧ್ಯಕ್ಷೆ ರತ್ನಮ್ಮ, ಮಾರ್ಗದರ್ಶಿ ಅಧಿಕಾರಿ ಡಾ| ನಿಧಾ ಮಾಡನಾಡಿ, ಗ್ರಾಮ ಸಭೆಯಲ್ಲಿ ಬಂದ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಕೊಡಾಗುವುದು ಹಾಗೂ ಸಭೆಗೆ ಬಾರದ ಅಧಿಕಾರಿಗಳ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಕೃಷಿ, ಶಿಕ್ಷಣ, ಕಂದಾಯ, ಮೆಸ್ಕಾಂ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಪಂ ಸದಸ್ಯರು, ನಾಗರಿಕರು ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್‌ ಸ್ವಾಗತಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next