ಬಾಳೆಹೊನ್ನೂರು: ಯುವಕರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಮಾಡಲು ಅವರಲ್ಲಿ ಧೈರ್ಯ, ಸಂಯಮ, ತ್ಯಾಗ, ಸರಳತೆ, ಸೇವೆ, ತಾಳ್ಮೆ, ಸಹಕಾರ ಮತ್ತು ಪೂರ್ಣ ಸೇವಾ ಮನೋಭಾವನೆಯನ್ನು ಮೂಡಿಸುವುದು ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಉದ್ದೇಶವಾಗಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀ ರಂಭಾಪುರಿ ಪೀಠದ ಶ್ರೀ ರುದ್ರಮುನೀಶ್ವರ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢ, ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಸೇವಾದಳ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂ ಧೀಜಿ ಅವರ ತತ್ವ ಮತ್ತು ಕಾರ್ಯಕ್ರಮಗಳ ತಳಹದಿಯ ಮೇಲೆ ಯುವಕರನ್ನು ಸಂಘಟಿಸಿ ರಾಷ್ಟ್ರೀಯ ಸೇವೆಗಾಗಿ ತರಬೇತಿ ನೀಡುವುದು ಹಾಗೂ ಸೇವಾದಳದ ಮೂಲಕ ಜನರ ಆರೋಗ್ಯ ಮತ್ತು ದೈಹಿಕ ದೃಢತೆಯನ್ನು ಬಲಗೊಳಿಸುವ ಮತ್ತು ಜಾತೀಯ ಮತ್ತು ವರ್ಣೀಯ ಭಾವನೆಗಳನ್ನು ತ್ಯಜಿಸಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸಿ ರಾಷ್ಟ್ರೀಯತೆಯನ್ನು ಹೆಚ್ಚಿಸುವಲ್ಲಿ ಭಾರತ ಸೇವಾದಳ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಕೇಂದ್ರ ಸಮಿತಿ ಸದಸ್ಯ ಐ.ಬಿ.ಶಂಕರ್, ರಾಷ್ಟ್ರಗೀತೆ, ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ಹಾಗೂ ಶಿಕ್ಷಕರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಲಿದೆ. ಆಪತ್ಕಾಲದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದು ಹಾಗೂ ಪ್ರಾಣ, ಮಾನ ಮತ್ತು ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ, ಶಾಂತಿ ಕಾಯ್ದುಕೊಳ್ಳುವ ಕೆಲಸವನ್ನು ಸೇವಾದಳ ಮಾಡುತ್ತಿದೆ. ಅಲ್ಲದೇ, ದೈಹಿಕವಾಗಿಯೂ ಬಲಾಡ್ಯನಾಗಿ, ಮಾನಸಿಕವಾಗಿ ಜಾಗೃತನಾಗಿ ಮತ್ತು ನೀತಿವಂತನಾಗಿ ಇರಬೇಕಾದುದು ಸ್ವಯಂ ಸೇವಕರ ಕರ್ತವ್ಯವಾಗಿದೆ ಎಂದರು.
ಸಮಾರಂಭದಲ್ಲಿ ಭಾರತ ಸೇವಾದಳದ ಜಿಲ್ಲಾ ಸಮಿತಿ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಮಿತಿ ಸದಸ್ಯ ಶಾಂತಕುಮಾರ್, ತಿಮ್ಮೇಗೌಡ, ಜಿಪಂ ಸದಸ್ಯೆ ಚಂದ್ರಮ್ಮ, ತಾಲೊಕು ದೈಹಿಕ ಶಿಕ್ಷಣಾಧಿಕಾರಿ ಶಂಕರಮೂರ್ತಿ, ಶಿಕ್ಷಕ ವೆಂಕಟೇಶ್‌ಭಟ್, ರಮೇಶ್, ಬಿ.ಕಣಬೂರು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಹನೀಫ್, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯೆ ರೋಹಿಣಿ, ಜಾನ್ ಡಿಸೋಜಾ, ಬಿ.ಕೆ.ಮಧುಸೂದನ್ ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.