Advertisement

ಬಾಳೆಬರೆ ಘಾಟಿ ಕಾಂಕ್ರಿಟೀಕರಣ ಬಹುತೇಕ ಪೂರ್ಣ: ಎ.10ರ ಬಳಿಕ ವಾಹನ ಸಂಚಾರಕ್ಕೆ ಮುಕ್ತ ಸಾಧ್ಯತೆ

11:41 PM Mar 27, 2023 | Team Udayavani |

ಕುಂದಾಪುರ: ಕರಾವಳಿ ಹಾಗೂ ಮಲೆನಾಡನ್ನು ಬೆಸೆಯುವ ಬಾಳೆಬರೆ (ಹುಲಿಕಲ್‌) ಘಾಟಿಯ ಕಾಂಕ್ರಿಟೀಕರಣ ಬಹುತೇಕ ಪೂರ್ಣ ಗೊಂಡಿದೆ. ಕೊನೆಯ ಹಂತವಷ್ಟೇ ಬಾಕಿಯಿದೆ. ಕ್ಯೂರಿಂಗ್‌ ನಡೆಯು ತ್ತಿದ್ದು, ಎ. 15ರ ಬಳಿಕ ಸಂಚಾರ ಪುನರಾರಂಭಗೊಳ್ಳುವ ಸಾಧ್ಯತೆಗಳಿವೆ.

Advertisement

ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಈ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 3 ಕೋ.ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ 10 ಕೋ.ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರ ಅಗಲಗೊಳಿಸುವಿಕೆ, ಕಾಂಕ್ರಿಟೀಕರಣ, ರಕ್ಷಣ ಗೋಡೆ ನಿರ್ಮಾಣ ನಡೆಯುತ್ತಿದೆ.

ಎ. 10ಕ್ಕೆ ಮುಕ್ತ ಸಾಧ್ಯತೆ
ಕಳೆದ ಫೆ. 5ರಿಂದ ಎ. 5ರ ವರೆಗೆ ಕಾಮಗಾರಿ ಸಲುವಾಗಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಂಕ್ರಿಟೀಕರಣ ಮುಗಿದಿದೆ. ಕ್ಯೂರಿಂಗ್‌ ನಡೆಯುತ್ತಿದೆ. ಅಪಾಯಕಾರಿ ತಿರುವುಗಳಲ್ಲಿ ಅಗಲಗೊಳಿಸುವಿಕೆ ಹಾಗೂ ರಕ್ಷಣ ಗೋಡೆ ನಿರ್ಮಾಣವಾಗಿದೆ. ಶಿವಮೊಗ್ಗ ವ್ಯಾಪ್ತಿಯಲ್ಲಿ ಈವರೆಗೆ 2 ಕಿ.ಮೀ. ಕಾಂಕ್ರಿಟೀಕರಣ ನಡೆದಿದ್ದು, 500 ಮೀ.ಗಳಷ್ಟು ಬಾಕಿಯಿದೆ. ಇದಕ್ಕೆ ಹೆಚ್ಚುವರಿ 10 ದಿನಗಳ ಅಗತ್ಯವಿದೆ. ಆದರೂ ಕ್ಯೂರಿಂಗ್‌ ಪೂರ್ಣಗೊಳ್ಳುತ್ತಿದ್ದಂತೆ ಒಂದು ಬದಿಯಿಂದ ಸಂಚಾರಕ್ಕೆ ಅನುವು ಮಾಡಿಕೊಡುವ ಸಾಧ್ಯತೆಗಳಿವೆ. ಅಂದರೆ ಎ. 10ರ ಅನಂತರ ಸಂಚಾರಕ್ಕೆ ಮುಕ್ತವಾಗಬಹುದು.

3.5 ಕಿ.ಮೀ. ಅಭಿವೃದ್ಧಿ ಬಾಕಿ
ಈ ಘಾಟಿ ರಸ್ತೆ ಹುಲಿಕಲ್‌ ಚೆಕ್‌ಪೋಸ್ಟ್‌ನಿಂದ ಹೊಸಂಗಡಿಯ ಘಾಟಿ ಬುಡದವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆಯ 8 ಕಿ.ಮೀ. ಪೈಕಿ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿ 2.5 ಕಿ.ಮೀ.ನೊಂದಿಗೆ ಬಹುತೇಕ ಕಾಂಕ್ರಿಟೀಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ಭಾಗದ ಪೈಕಿ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ 3.5 ಕಿ.ಮೀ. ಕಾಂಕ್ರಿಟೀಕರಣ ಬಾಕಿ ಇದೆ.

ಬಿರುಕು ಬಿಟ್ಟಿಲ್ಲ: ಸ್ಪಷ್ಟನೆ
ಕಾಮಗಾರಿ ಮುಗಿಯುವ ಮುನ್ನವೇ ಬಿರುಕು ಬಿಟ್ಟಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದು ಬಿರುಕು ಬಿಟ್ಟಿದ್ದಲ್ಲ, ಕಾಂಕ್ರೀಟ್‌ ಕಾಮಗಾರಿ ವೇಳೆ ಅಂತರ ಸೃಷ್ಟಿಯಾಗಿರುವುದು. ಈ ದಿನ ಹಾಗೂ ಮರುದಿನದ ಕಾಮಗಾರಿ ವೇಳೆ ಕೆಲವೊಮ್ಮೆ ಗ್ಯಾಪ್‌ ಉಂಟಾಗುತ್ತದೆ. ಹೀಗಾದಲ್ಲಿ ಟಾರ್‌ ಹಾಕಿ ಸರಿಪಡಿಸಲಾಗುತ್ತದೆ. ಕಾಮಗಾರಿ ಬಗ್ಗೆ ಆತಂಕ ಬೇಡ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಸ್ಪಷ್ಟಪಡಿಸಿದ್ದಾರೆ.

Advertisement

ಉಡುಪಿ ಜಿಲ್ಲಾ ವ್ಯಾಪ್ತಿಯ ಕಾಂಕ್ರಿಟೀಕರಣ ಬಹುತೇಕ ಪೂರ್ಣಗೊಂಡಿದೆ. ಕೊನೆಯ ಹಂತ ಬಾಕಿ ಇದೆ. ಶಿವಮೊಗ್ಗ ವ್ಯಾಪ್ತಿಯಲ್ಲಿ ಸ್ವಲ್ಪ ಬಾಕಿ ಇದೆ. ಕ್ಯೂರಿಂಗ್‌ ನಡೆಯುತ್ತಿದೆ. ಇನ್ನು 10-15 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಆ ಬಳಿಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು.
– ಶಿವಮೂರ್ತಿ ಹಾಗೂ ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next