Advertisement
ಅವು ನಾನು ಪಿಯುಸಿ ಓದುತ್ತಿದ್ದ ದಿನಗಳು. ಇನ್ನೆರಡು ದಿನಗಳಲ್ಲಿ ನಮಗೆ ಅಕೌಂಟ್ಸ್ ಪರೀಕ್ಷೆ ಇತ್ತು. ಹಾಗಾಗಿ, ಇಡೀ ಹಾಸ್ಟೆಲ್ ಓದಿನಲ್ಲಿ ಮುಳುಗಿ ಹೋಗಿತ್ತು. ನಾವೆಲ್ಲಾ ಡೆಬಿಟ್, ಕ್ರೆಡಿಟ್‌ಗಳ ಲೆಕ್ಕಾಚಾರದಲ್ಲಿದ್ದಾಗ, ನನ್ನ ರೂಮ್‌ಮೇಟ್ ಮಾತ್ರ ಬಯಾಲಜಿ ಪುಸ್ತಕ ಹಿಡಿದು ಕುಳಿತಿದ್ದಳು. “ನಿಂಗೇನೇ ಬಂತು? ಅಕೌಂಟ್ಸ್ ಬಿಟ್ಟು ಬಯಾಲಜಿ ಓದ್ತಾ ಇದ್ದೀಯಾ?’ ಅಂತ ಕೇಳಿದೆ. ಆಗ ಅವಳು, “ಹುಡುಗಿಯರೂ ಹುಡುಗರಂತೆ ಬಾಂಡ್ಲಿ (ಬೊಕ್ಕತಲೆ) ಆಗುವ ಸಾಧ್ಯತೆಗಳಿದೆಯಾ ಅಂತ ಹುಡುಕುತ್ತಿದ್ದೇನೆ’ ಅಂದಳು.
Related Articles
Advertisement
ಕೂದಲು ಉದುರುವುದು ಸಹಜ, ಸಾಮಾನ್ಯ ಕ್ರಿಯೆ. ಪ್ರತಿದಿನ 70-100 ಕೂದಲು ಉದುರಿದರೆ ಯಾವ ತೊಂದರೆಯೂ ಇಲ್ಲ. ಆರೋಗ್ಯ ಹದಗೆಟ್ಟಾಗ, ಟೆನÒನ್‌ನ ಕಾರಣದಿಂದ, ಮಾಲಿನ್ಯದಿಂದ ಕೆಲವೊಮ್ಮೆ ಹೆಚ್ಚು ಕೂದಲು ಉದುರಬಹುದು ಅಂತ ಗೊತ್ತಿದ್ದರೂ, ಯಾರೂ ಕೂದಲನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅದರಲ್ಲೂ ಹುಡುಗಿಯರಿಗೆ, ಹೇರ್‌ಫಾಲ್ ಅನ್ನುವುದು ಸದಾ ಕಾಡುವ ದು:ಸ್ವಪ್ನ. ಉದ್ದ ಜಡೆಯ ಹುಡುಗಿಯಷ್ಟೇ ಅಲ್ಲ, ಬಾಬ್ ಕೂದಲಿನವಳೂ ಕೂದಲು ಕಿತ್ತು ಕೈಗೆ ಬರುವುದನ್ನು ಸಹಿಸಲಾರಳು.
ನಾನು ಪ್ರೈಮರಿ ಸ್ಕೂಲಿನಲ್ಲಿದ್ದಾಗ, ನನ್ನ ಕೂದಲು ಸೊಂಟದವರೆಗೆ ಬರುತ್ತಿತ್ತು. ದಪ್ಪನೆಯ ಎರಡು ಜಡೆ ಹೆಣೆದುಕೊಂಡು ಶಾಲೆಗೆ ಹೋಗುತ್ತಿದ್ದೆ. ಈಗ ಹಾಗಂತ ಹೇಳಿದರೆ ಯಾರೂ ನಂಬುವುದಿಲ್ಲ, ಕೆಲವೊಮ್ಮೆ ನನಗೂ ಅದೆಲ್ಲಾ ಸುಳ್ಳು ಅನ್ನಿಸುತ್ತದೆ. ಈಗ, ಸಂತೆಯಲ್ಲಿ ಯಾರೂ ಕೊಳ್ಳದ ಕೊತ್ತಂಬರಿ ಸೊಪ್ಪಿನಂತಾಗಿದೆ ನನ್ನ ಜುಟ್ಟು. ಅಷ್ಟೇ ದಪ್ಪ, ಅಷ್ಟೇ ಸತ್ವಹೀನ!
ಹೈಸ್ಕೂಲ್‌ವರೆಗೂ ಬೆನ್ನು ತುಂಬಾ ಆವರಿಸಿಕೊಳ್ಳುತ್ತಿದ್ದ ಕಪ್ಪು ಕೂದಲು, ವರ್ಷಗಳು ಕಳೆದಂತೆ ಕ್ಷೀಣಿಸುತ್ತಾ ಹೋಗಿದ್ದಕ್ಕೆ ಕಾರಣ ಇದೇ ಅಂತ ಹೇಳಲಾರೆ. ಬಾಲ್ಯದಲ್ಲಿ ಅಮ್ಮ, ಕೂದಲಿಗೆ ಎಣ್ಣೆ ಮೆತ್ತಿ, ವಾರಕ್ಕೊಮ್ಮೆ ಸೀಗೆಕಾಯಿ ಪುಡಿ ಹಚ್ಚಿ ಸ್ನಾನ ಮಾಡಿಸಿ, ಪ್ರತಿದಿನ ಜಡೆ ಹೆಣೆದು ಕೂದಲನ್ನು ಪೋಷಿಸುತ್ತಿದ್ದಳು. ಕಾಲೇಜು ಮೆಟ್ಟಿಲೇರುವಾಗ ಉದ್ದ ಕೂದಲು ಬೋರ್ ಅನ್ನಿಸಿ, ಕತ್ತರಿಸಿಕೊಂಡೆ. ಎಣ್ಣೆ ಹಚ್ಚಿಸಿಕೊಳ್ಳುವುದಕ್ಕೆ ಪುರುಸೊತ್ತಿರಲಿಲ್ಲ, ಸೀಗೆಕಾಯಿ ಬದಲು ಶ್ಯಾಂಪೂ, ಕಂಡಿಷನರ್ ಬಳಸತೊಡಗಿದೆ. ಓದು-ಉದ್ಯೋಗದ ಟೆನ್ಸ್ ನ್ ಕೂಡಾ ಜೊತೆಯಾಯ್ತು. ಇನ್ಯಾವ ಕಾರಣ ಬೇಕು ಹೇಳಿ, ಕೂದಲು ಉದುರಲು?
ಮೊನ್ನೆ ಹೈಸ್ಕೂಲು ಗೆಳೆಯನೊಬ್ಬ ಸಿಕ್ಕಿದ್ದ. ಶಾಲೆಯಲ್ಲಿದ್ದಾಗ ದಟ್ಟ ಕೂದಲಿನ ಕಾರಣದಿಂದಲೇ ಸುಮಾರು ಹುಡುಗಿಯರ ಪಾಲಿನ ಹೀರೋ ಆಗಿದ್ದ ಆತ, ಈಗ ಹತ್ತು ವರ್ಷ ಹೆಚ್ಚು ವಯಸ್ಸಾದವನಂತೆ ಕಾಣಿಸುತ್ತಿದ್ದ. ತಲೆಯ ಮುಂಭಾಗದಲ್ಲಿ ಕೂದಲು ವಿರಳವಾಗಿತ್ತು. ಇನ್ನೊಂದೆರಡು ವರ್ಷದಲ್ಲಿ ತಲೆ, ಆಟದ ಮೈದಾನವಾಗುವುದರಲ್ಲಿ ಸಂಶಯವಿರಲಿಲ್ಲ. ಉದ್ಯೋಗ, ಪ್ರಮೋಷನ್ ಇತ್ಯಾದಿಗಳ ನಂತರ ಮಾತು ಮದುವೆಯತ್ತ ಹೊರಳಿತು.
“ಅಯ್ಯೋ, ತಲೇಲಿ ಕೂದಲಿಲ್ಲ ಅಂತ ಎಲ್ಲ ಹುಡುಗಿಯರೂ ರಿಜೆಕ್ಟ್ ಮಾಡ್ತಾ ಇದ್ದಾರೆ. ಅಮ್ಮನಿಗಂತೂ ನನ್ನ ಮದುವೆಯದ್ದೇ ಟೆನ್ಸ್ ನ್ ಆಗಿದೆ. ಅಪ್ಪನದ್ದೂ ಬೊಕ್ಕತಲೆಯೇ. ಆದ್ರೆ, ಅವರಿಗೆ ಕೂದಲು ಉದುರಿದ್ದು ನಲವತ್ತರ ನಂತರ. ನಂಗೆ ಇಪ್ಪತ್ತೆಂಟಕ್ಕೇ ತಲೆ ಖಾಲಿಯಾಗ್ತಿದೆ’ ಅಂತ ಬೇಸರದಿಂದ ನಕ್ಕ. ಇದೇ ಹುಡುಗ ಹೈಸ್ಕೂಲ್‌ನಲ್ಲಿದ್ದಾಗ, ಬೊಕ್ಕತಲೆಯ ಹಿಂದಿ ಸರ್ ಅನ್ನು ಅಣಕಿಸಿ, ಅವರಿಂದ ಚೆನ್ನಾಗಿ ಬೈಸಿಕೊಂಡಿದ್ದ. ಅದನ್ನು ಅವನಿಗೆ ನೆನಪಿಸಿದೆ. “ಅವರೇ ಏನಾದ್ರೂ ಶಾಪ ಕೊಟ್ಟಿದ್ರೂ ಕೊಟ್ಟಿರಬಹುದು’ ಅಂತ ಇಬ್ಬರೂ ನಕ್ಕೆವು.
ಕೊನೆಗೆ ಅವನು, “ನೀವು ಹುಡ್ಗಿರೇ ಲಕ್ಕಿ ಕಣಮ್ಮಾ. ಬಾಂಡ್ಲಿ ಆಗೋ ಟೆನ್ಸ್ ನ್ನೇ ಇಲ್ಲ ನಿಮ್ಗೆ’ ಅಂದುಬಿಟ್ಟ! ಎಲಾ ಇವನಾ, ಹುಡುಗರು ಬೇಕಾದ್ರೆ ಕೂದಲು ಕಡಿಮೆಯಾಗುತ್ತಿದ್ದಂತೆ ತಲೆಯನ್ನ ಫುಲ್ ಶೇವ್ ಮಾಡಿಕೊಂಡು ಓಡಾಡಬಹುದು. ನಮ್ಗೆ ಹಾಗೆ ಮಾಡಲು ಆಗುತ್ತದೆಯಾ? “ಏನೇ ಇದು, ಕೂದಲು ಇಷ್ಟು ತೆಳ್ಳಗಾಗಿದೆ’ ಅಂತ ಎಲ್ಲರೂ ಕೇಳುವಾಗ, ಸಂಕಟವಾಗುವುದಿಲ್ಲವಾ? ಆ ಹುಡುಗಿಯ ಜಡೆ ನೋಡಿಯೇ ನಾನು ಬಿದ್ದು ಹೋದೆ ಅಂತ ಗೆಳೆಯ ಹೇಳುವಾಗ ಹೊಟ್ಟೆ ಉರಿಯೋದಿಲ್ವಾ? ದಿಂಬು, ಟವೆಲ್, ಬಾತ್‌ರೂಮ್, ಬಾಚಣಿಗೆ, ಕೊನೆಗೆ ಮಾಡಿದ ಅಡುಗೆಯಲ್ಲೂ ಬಿದ್ದು ಬಾಯಿಗೆ ಸೇರುವ ಕೂದಲೆಳೆಯನ್ನು ಸಹಿಸಿಕೊಳ್ಳಲು ಆಗುತ್ತದಾ? ಬೋಳು ತಲೆಯ ಗೋಳು ನಮ್ಮನ್ನೂ ಕಾಡುತ್ತದೆ. ಆದರೆ, ಅದನ್ನೆಲ್ಲ ಹುಡುಗರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ ಬಿಡಿ.
-ರೋಹಿಣಿ