Advertisement

ಬೋಳು ಮರ ಮತ್ತು ಹಕ್ಕಿ!

01:30 PM Dec 14, 2017 | Harsha Rao |

ಅಂಜೂರದ ಮರದಲ್ಲಿ ಹಕ್ಕಿಯೊಂದು ತುಂಬಾ ವರ್ಷಗಳಿಂದ ವಾಸಿಸುತ್ತಿತ್ತು. ಮರದಲ್ಲಿದ್ದ ರುಚಿಕರವಾದ ಹಣ್ಣುಗಳನ್ನು ಸವಿದು ಆನಂದದಿಂದ ಕಾಲ ಕಳೆಯುತ್ತಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ಮರ ಒಣಗತೊಡಗಿತು. ಹಣ್ಣು ಬಿಡುವುದನ್ನು ನಿಲ್ಲಿಸಿತು. ಇಷ್ಟೆಲ್ಲಾ ಆದರೂ ಹಕ್ಕಿ ಮಾತ್ರ ಮರವನ್ನು ಬಿಡಲಿಲ್ಲ. ಅಲ್ಲೇ ವಾಸಿಸುವುದನ್ನು ಮುಂದುವರಿಸತೊಡಗಿತು. ಆಹಾರವನ್ನು ಹೊರಗಡೆಯಿಂದ ತಿಂದು ಬಳಿಕ ತನ್ನ ಮರಕ್ಕೇ ಹಿಂದಿರುಗುತ್ತಿತ್ತು. 

Advertisement

ಕಾಡಿನ ದೇವತೆಗೆ ಹಕ್ಕಿಯ ಕುರಿತು ವಿಷಯ ತಿಳಿಯಿತು. ಮಿಕ್ಕೆಲ್ಲಾ ಹಕ್ಕಿಗಳು ಹಸಿರು ಹೆಚ್ಚಾಗಿರುವಲ್ಲಿ ವಾಸಿಸುತ್ತಾ ಆರಾಮಾಗಿದ್ದರೆ ಈ ಒಂದು ಹಕ್ಕಿ ಮಾತ್ರ ಬೋಳು ಮರದಲ್ಲೇ ವಾಸಿಸುತ್ತಿದ್ದುದರ ಬಗ್ಗೆ ದೇವತೆಗೆ ಕುತೂಹಲವಾಯಿತು. ಆದಕ್ಕೆ ಮಾರುವೇಷದಲ್ಲಿ ಕೊಕ್ಕರೆಯ ರೂಪ ತಾಳಿ ಹಕ್ಕಿಯ ಬಳಿ ಹೋಯಿತು. “ಅಯ್ನಾ ನೀನು ಇನ್ನೂ ಏತಕ್ಕೆ ಅಂಜೂರದ ಮರದಲ್ಲಿ ವಾಸ ಮಾಡುತ್ತಿರುವೆ?’ ಎಂದು ಪ್ರಶ್ನಿಸಿತು. ಅದಕ್ಕೆ ಹಕ್ಕಿಯು “ನನ್ನ ಪ್ರೀತಿಯ ಅಂಜೂರದ ಮರವು ಇಷ್ಟು ವರ್ಷಗಳ ಕಾಲ ತಿನ್ನಲು ರುಚಿಕರವಾದ ಹಣ್ಣುಗಳನ್ನು ಕೊಟ್ಟು ನನಗೆ ಆಶ್ರಯ ನೀಡಿದೆ. ಈಗ ಮುದಿಯಾದ ಮಾತ್ರಕ್ಕೆ ನಾನು ಮರವನ್ನು ತೊರೆದರೆ ಅದು ಒಂಟಿಯಾಗಿಬಿಡುವುದಿಲ್ಲವೆ? ಅದಕ್ಕೇ ನನಗೆ ಈ ಮರವನ್ನು ಬಿಟ್ಟಿರಲಾಗದು’ ಎಂದು ಹೇಳಿತು.

ಹಕ್ಕಿಯ ಮಾತಿನಿಂದ ಸಂತಸಗೊಂಡ ಕಾಡಿನ ದೇವತೆ ತನ್ನ ನಿಜವಾದ ರೂಪಕ್ಕೆ ಮರಳಿ “ಮರದ ಮೇಲಿರುವ ನಿನ್ನ ಕಾಳಜಿಯನ್ನು ಮೆಚ್ಚಿದೆನು. ನಿನಗೆ ಏನು ವರ ಬೇಕು ಕೇಳು’ ಎಂದನು. ಹಕ್ಕಿಯು ತಲೆ ಬಾಗಿ ವಂದಿಸಿ “ದೇವಾ ನನಗೆ ಆಶ್ರಯ ಕೊಟ್ಟ ಅಂಜೂರದ ಮರವು ಮೊದಲಿನಂತೆ ಹಣ್ಣುಗಳಿಂದ ಕಂಗೊಳಿಸಲಿ’ ಎಂದು ಪ್ರಾರ್ಥಿಸಿತು. “ನಿನ್ನ ಆಸೆ ನೆರವೇರಲಿ’ ಎಂದು ದೇವತೆ ಆಶೀರ್ವದಿಸಿದಳು. ಆ ಕ್ಷಣವೇ ಮುದಿಯಾಗಿದ್ದ ಮರ ಹಸಿರಿನಿಂದ ನಳನಳಿಸುತ್ತಾ ಹಣ್ಣುಗಳಿಂದ ಕಂಗೊಳಿಸಿತು. ಹಕ್ಕಿಗೆ ತುಂಬಾ ಸಂತೋಷವಾಯಿತು. 

– ಕೀರ್ತಿ ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next