Advertisement
ನಗರಸಭೆ ಹಾಗೂ ಬಾಲವನದ ಜತೆಗೆ ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಕೈ ಜೋಡಿಸಿದರು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶ್ರಮದಾನದ ಮೂಲಕ ಮೈದಾನ, ಬಾಲವನದ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಬೆಳಗ್ಗಿಯಿಂದ ಮಧ್ಯಾಹ್ನದವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಭಾಗವಹಿಸಿದರು. ಕೈಯಲ್ಲಿ ಪೊರಕೆ, ಹಾರೆ ಹಿಡಿದುಕೊಂಡು ಗುಡಿಸಿದರು, ಕಳೆ ಕಿತ್ತರು, ಕಸ ಹೆಕ್ಕಿದರು.
ಪರಿಸರ ದಿನದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಐದು ದಿನಗಳ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ. ಸರಣಿ ಕಾರ್ಯಕ್ರಮದ ಮೊದಲ ಹಂತವಾಗಿ ಮಂಗಳವಾರ ದರ್ಬೆ ಸಮೀಪದ ಪರ್ಲಡ್ಕ, ಪಾಂಗಲಾಯಿ ಪ್ರದೇಶದಲ್ಲಿ ಸ್ವಚ್ಛತಾ ಜಾಗೃತಿಗೆ ಚಾಲನೆ ನೀಡಲಾಯಿತು. ಆಸುಪಾಸಿನ ಪ್ರತಿ ಮನೆಗಳಿಗೆ ತೆರಳಿದ ನಗರಸಭೆ ಅಧಿಕಾರಿ, ಸಿಬಂದಿ ಘನತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಿದರು. ಘನತ್ಯಾಜ್ಯ ವಿಂಗಡಣೆ ಬಗ್ಗೆ ಸಂದೇಶ, ಜಾಗೃತಿ ಕರಪತ್ರಗಳನ್ನು ಹಂಚಿದರು. ಇದರ ಮುಂದುವರಿದ ಭಾಗವಾಗಿ ಬುಧವಾರ ಪರ್ಲಡ್ಕದ ಡಾ| ಕೆ. ಶಿವರಾಮ ಕಾರಂತರ ಬಾಲವನದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು. ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ನಗರಸಭೆಯ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ನಡೆಸಿದರು.
Related Articles
ಸರಣಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ, ಚಿಂದಿ ಆಯುವ ವ್ಯಕ್ತಿಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಚಿಂದಿ ಆಯುವ ವ್ಯಕ್ತಿಗಳನ್ನು ಹುಡುಕಿ ಅವರಿಗೆ ತರಬೇತಿ ನೀಡುವ ವಿಶಿಷ್ಟ ಕಾರ್ಯಕ್ರಮವನ್ನೂ ಇದೇ ಅಭಿಯಾನದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಗುಜರಿ ಸಾಮಾನು ಖರೀದಿ ಅಂಗಡಿಗಳನ್ನು ಸಂಪರ್ಕಿಸಿ ಅವರಿಗೆ ಗುಜರಿ ವಸ್ತುಗಳನ್ನು ತಂದು ಮಾರುವ ಕಾರ್ಮಿಕರ ಪಟ್ಟಿ ತಯಾರಿಸಲಾಗುತ್ತಿದೆ. ಈ ಮೂಲಕ ಚಿಂದಿ ಆಯುವ ಮಂದಿಯನ್ನು ಒಟ್ಟುಗೂಡಿಸಿ ಅವರಿಗೆ ಜೂನ್ 11ರಂದು ತರಬೇತಿ ನೀಡಲಾಗುತ್ತದೆ. ಚಿಂದಿ ಆಯುವ ಸಂದರ್ಭ ಅನುಸರಿಸಬೇಕಾದ ವಿಧಾನಗಳು, ಆರೋಗ್ಯ ಸಂರಕ್ಷಣೆ ಕಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆ ಅಂಶಗಳನ್ನು ತರಬೇತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.
Advertisement
ಜೂ. 11ರಂದು ಸಮಾರೋಪ ಜೂನ್ 11ರಂದು ಬೃಹತ್ ಸ್ವಚ್ಛತಾ ಜಾಥಾ ನಡೆಸುವ ಮೂಲಕ ಕಾರ್ಯಕ್ರಮ ಸಮಾಪನಗೊಳ್ಳಲಿದೆ. ಅಂದು ಬೊಳುವಾರು ವೃತ್ತದಿಂದ ದರ್ಬೆ ವೃತ್ತದವರೆಗೆ ಜಾಥಾ ನಡೆಯಲಿದೆ. ನಗರಸಭೆ ಅಧಿಕಾರಿಗಳು, ಸಿಬಂದಿ, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುವರು. ಸ್ವಚ್ಛತೆಯ ಸಂದೇಶ ಸಾರುವ ಫಲಕಗಳ ಪ್ರದರ್ಶನ, ಕರಪತ್ರ ವಿತರಣೆ ಇತ್ಯಾದಿ ನಡೆಯಲಿದೆ ಎಂದು ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುರಂದರ ತಿಳಿಸಿದ್ದಾರೆ.