ವಾಡಿ: ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗದ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿಯಲ್ಲೇ ಸಾಗಿತು ಸುಕ್ಷೇತ್ರ ಕೊಂಚೂರು ಶ್ರೀ ಹನುಮಾನ ದೇವರ ರಥೋತ್ಸವ.
ರವಿವಾರ ಸಂಜೆ 6 ಗಂಟೆಗೆ ದೇವಸ್ಥಾನದ ಅರ್ಚಕರು ತೇರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತಾಲೂಕು ಆಡಳಿತದ ಆದೇಶದಂತೆ ಕೇವಲ ಹತ್ತು ಅಡಿ ದೂರ ಎಳೆದು ಸಂಪ್ರದಾಯ ಪಾಲಿಸಲಾಯಿತು. ಪ್ರತೀತಿಯಂತೆ ಪಾದಗಟ್ಟೆ ವರೆಗೂ ಸಾಗಬೇಕಿದ್ದ ಹನುಮಾನ ದೇವರ ತೇರು ಕೊರೊನಾ ಮಾರ್ಗಸೂಚಿ ಅನ್ವಯ ಈ ವರ್ಷವೂ ಮೂಲಸ್ಥಳ ಬಿಟ್ಟು ಮುಂದೆ ಸಾಗಲಿಲ್ಲ. ಈ ವೇಳೆ ಭಕ್ತರು ತೇರಿಗೆ ಬಾರೆ ಹಣ್ಣು ಮತ್ತು ಬಾಳೆ ಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು. ಹನುಮಾನ ದೇವಸ್ಥಾನದ ಮುಂದಿನ ವಿಶಾಲ ಮೈದಾನದಲ್ಲಿ ನಿಂತಿದ್ದ ರಥಕ್ಕೆ ಹೂ ಮತ್ತು ರಂಗುರಂಗಿನ ಕೊಡಗಳಿಂದ ಶೃಂಗರಿಸಲಾಗಿತ್ತು.
ನೂರಾರು ಭಕ್ತರು ತೇರು ಎಳೆಯಲು ಶುರುಮಾಡಿದಂತೆ ಪೊಲೀಸರು ರಥಬೀದಿಯಲ್ಲಿ ವಾಹನವನ್ನು ಅಡ್ಡಲಾಗಿ ನಿಲ್ಲಿಸಿ ಕಾನೂನು ಪಾಲಿಸಿದರು. ಸಿಪಿಐ ಕೃಷ್ಣಪ್ಪ ಕಲ್ಲೆದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ ನೇತೃತ್ವದಲ್ಲಿ ರಥದ ಸುತ್ತಲೂ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು. ಭಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರ ನಡುವೆಯೇ ಭಕ್ತರು ಹನುಮಾನ ದೇವರ ದೇವಸ್ಥಾನ ಪ್ರವೇಶ ಪಡೆದು ಕಾಯಿ, ಕರ್ಪೂರ ಅರ್ಪಿಸಿದರು. ಕೊಂಚೂರು-ವಾಡಿ ಮಾರ್ಗದ ಎರಡು ಕಿ.ಮೀ ರಸ್ತೆ ತೀರಾ ಇಕ್ಕಟ್ಟಿನಿಂದ ಕೂಡಿದ್ದರಿಂದ ಭಕ್ತರು ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸಬೇಕಾಯಿತು.
ಏಲಾಂಬಿಕೆಗೆ ಹಡ್ಡಲಗಿ ತುಂಬಿದ ಭಕ್ತರು
ಕೊಂಚೂರು ಪಕ್ಕದ ಬಳವಡಗಿ ಗ್ರಾಮದ ಶ್ರೀ ಏಲಾಂಬಿಕೆ ದೇವಿಗೆ ಭಕ್ತರು ಹಡ್ಡಲಗಿ ತುಂಬಿ ಸಂಪ್ರದಾಯ ಪಾಲಿಸಿದರು. ಮನೆಯಿಂದ ತರಲಾಗಿದ್ದ ಬುತ್ತಿಯಿಂದ ಜೋಳದ ಕಡಬು, ಪುಂಡಿಪಲ್ಲೆ, ಈರುಳ್ಳಿ, ಸಜ್ಜೆ ರೊಟ್ಟಿ, ಹೋಳಿಗೆ, ಜೋಳದ ಬಾನ, ವಿವಿಧ ರೀತಿಯ ತರಕಾರಿ ಪಲ್ಲೆಯಿಂದ ಕೂಡಿದ ಪದಾರ್ಥಗಳನ್ನು ಏಲಾಂಬಿಕೆ ದೇವಿಗೆ ಹಡ್ಡಲಗಿ ರೂಪದಲ್ಲಿ ಮಾತಂಗಿಯರಿಗೆ ಕೊಟ್ಟು ಭಕ್ತಿ ಸಮರ್ಪಿಸಿ ದರು. ಬಳವಡಗಿಯಿಂದ ಕೊಂಚೂರಿನ ವರೆಗೆ ಪಾದಯಾತ್ರೆ ಹೊರಟು ಹನುಮಾನ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಕಂಡುಬಂದಿತು.