Advertisement
ಹೌದು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಅವಘಡದಲ್ಲಿ ಕೋರಮಂಡಲ್ ಎಕ್ಸ್‌ಪ್ರಸ್ ರೈಲಿನ ಚಾಲಕನ ಯಾವುದೇ ಪಾತ್ರ ಇಲ್ಲ ಎಂಬುದು ಪ್ರಾಥಮಿಕ ತನಿಖೆಗಳಿಂದ ಸ್ಪಷ್ಟವಾಗಿದೆ. ಆದರೆ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ಹಾಗೂ ಪಾಯಿಂಟ್ ಮಷೀನ್‌ಗಳನ್ನು ಯಾರೋ ತಿರುಚಿರುವುದೇ ಈ ಅವಘಡಕ್ಕೆ ಕಾರಣ ಎಂದು ಸಚಿವರು ಹೇಳಿದ್ದಾರೆ. ಅವರ ಈ ಹೇಳಿಕೆಯು ಅವಘಡದ ಹಿಂದೆ ವಿಧ್ವಂಸಕ ಸಂಚಿನ ಶಂಕೆಮೂಡಿಸಿದೆ.
Related Articles
Advertisement
275 ಸಾವು
ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಒಡಿಶಾ ಸರಕಾರ 275ಕ್ಕೆ ಇಳಿಸಿದೆ. ಕೆಲವು ಶವಗಳನ್ನು ಎರಡೆರಡು ಬಾರಿ ಎಣಿಕೆ ಮಾಡಿದ್ದರಿಂದ ಈ ಹಿಂದೆ ಮೃತರ ಸಂಖ್ಯೆ 288 ಆಗಿತ್ತು ಎಂದು ಸ್ಪಷ್ಟನೆ ನೀಡಿದೆ.
ಹೊರಗಿನವರ ಕೈವಾಡ?
ದಿಲ್ಲಿಯಲ್ಲಿ ಮಾತನಾಡಿರುವ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಗಳು, ಪಾಯಿಂಟ್ ಮೆಷಿನ್ ಮತ್ತು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಈ ವ್ಯವಸ್ಥೆಯಲ್ಲಿ ಯಾವುದೇ ದೋಷವಿರಲಿಲ್ಲ ಮತ್ತು ಇದು ಅತ್ಯಂತ ಸುರಕ್ಷಿತ ಸಿಸ್ಟಂ ಆಗಿದೆ. ಹೀಗಾಗಿ ಕಾಣದ ಕೈಗಳು ಈ ವ್ಯವಸ್ಥೆಯನ್ನು ತಿರುಚಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದಿದ್ದಾರೆ. ವಿದ್ಯುನ್ಮಾನ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು “ಫೇಲ್ ಸೇಫ್ ಸಿಸ್ಟಂ’ ಎಂದು ಕರೆಯಲಾಗುತ್ತದೆ. ಅಂದರೆ ಈ ವ್ಯವಸ್ಥೆ ವಿಫಲಗೊಂಡರೂ ಎಲ್ಲ ಸಿಗ್ನಲ್‌ಗಳೂ ಒಮ್ಮೆಲೆ ಕೆಂಪು ಬಣ್ಣಕ್ಕೆ ತಿರುಗುತ್ತವೆ. ಹೀಗಾದಾಗ ಎಲ್ಲ ರೈಲುಗಳ ಕಾರ್ಯಾಚರಣೆಯೂ ಸ್ಥಗಿತಗೊಳ್ಳುತ್ತದೆ. ಹೀಗಾಗಿ ವ್ಯವಸ್ಥೆಯಲ್ಲಿ ಲೋಪವಾಗಿರುವ ಸಾಧ್ಯತೆ ಇಲ್ಲ. ಯಾರೋ ಉದ್ದೇಶಪೂರ್ವಕವಾಗಿ ಈ ಸಿಸ್ಟಮನ್ನು ತಿರುಚಿರಬಹುದು ಎಂದಿದ್ದಾರೆ. ಜತೆಗೆ ಈ ಕೆಲಸ ಒಳಗಿರುವವರಿಂದಲೂ ಆಗಿರಬಹುದು, ಹೊರಗಿನವರ ಕೈವಾಡವೂ ಇರಬಹುದು ಎಂದೂ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಬಾಲಸೋರ್ ರೈಲು
ನಿಲ್ದಾಣದ ಲೂಪ್ ಲೈನ್‌ನಲ್ಲಿ ಸರಕು ಸಾಗಣೆ ರೈಲು ನಿಂತಿತ್ತು. ಕೋರಮಂಡಲ್ ಎಕ್ಸ್‌ಪ್ರಸ್ ಮೈನ್ ಲೈನ್‌ನಲ್ಲಿ ಹೋಗಬೇಕಿತ್ತು. ಆದರೆ ಅದು ಮೈನ್ ಲೈನ್‌ನಲ್ಲಿ ಮುಂದುವರಿಯದೆ ಲೂಪ್ ಲೈನ್ ಪ್ರವೇಶಿಸಿ ಅಲ್ಲಿ ನಿಂತಿದ್ದ ಸರಕು ರೈಲಿಗೆ ಢಿಕ್ಕಿ ಹೊಡೆಯಿತು. ಇದರಿಂದ ಕೋರಮಂಡಲ್‌ನ 15-20 ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಗೆ ಬಿದ್ದವು. ಆ ಹಳಿಯಲ್ಲಿ ಸಾಗುತ್ತಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರಸ್‌ನ ಕೊನೆಯ ಎರಡು ಬೋಗಿಗಳಿಗೆ ಈ ಬೋಗಿಗಳು ಢಿಕ್ಕಿ ಹೊಡೆದ ಪರಿಣಾಮ ದೇಶದ ಇತಿಹಾಸದಲ್ಲೇ 3ನೇ ಅತೀ ದೊಡ್ಡ ರೈಲು ದುರಂತ ಸಂಭವಿಸಿ, ನೂರಾರು ಜೀವಗಳು ಬಲಿಯಾದವು.
ಚಾಲಕನಿಗೆ ಕ್ಲೀನ್‌ಚಿಟ್
ರೈಲು ಅವಘಡದಲ್ಲಿ ಕೋರಮಂಡಲ್ ಎಕ್ಸ್‌ಪ್ರಸ್ ರೈಲಿನ ಚಾಲಕನಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಅಪಘಾತದ ಸಮಯದಲ್ಲಿ ಈ ರೈಲು ಎಂದಿನ ವೇಗದಲ್ಲಿತ್ತು. ಅಲ್ಲದೆ ಗ್ರೀನ್ ಸಿಗ್ನಲ್ ಸಿಕ್ಕಿದ ಬಳಿಕವೇ ರೈಲಿನ ಚಾಲಕ ಮುಂದೆ ಸಾಗಿದ್ದರು ಎಂದು ರವಿವಾರ ಭಾರತೀಯ ರೈಲ್ವೇ ಹೇಳಿದೆ. “ಮೇಲ್ನೋಟಕ್ಕೆ
ಇಂಟರ್ ಲಾಕಿಂಗ್ ವ್ಯವಸ್ಥೆಯ ಸಮಸ್ಯೆಯೇ ದುರಂತಕ್ಕೆ ಕಾರಣ. ಚಾಲಕನಿಂದ ಅಚಾತುರ್ಯ ಸಂಭವಿಸಿಲ್ಲ. ಗ್ರೀನ್ ಸಿಗ್ನಲ್ ಸಿಕ್ಕಿತು ಎಂದರೆ ತನ್ನ ಮುಂದಿನ ಹಾದಿಯಲ್ಲಿ ಯಾವುದೇ ಅಡೆತಡೆಗಳಿಲ್ಲ ಮತ್ತು ಅನುಮತಿ ಇರುವ ಗರಿಷ್ಠ ವೇಗದಲ್ಲಿ ಮುಂದೆ ಸಾಗಬಹುದು ಎಂದರ್ಥ. ಕೋರಮಂಡಲ್ ಎಕ್ಸ್‌ಪ್ರಸ್‌ಗೆ ತಾಸಿಗೆ 130 ಕಿ.ಮೀ. ವೇಗದಲ್ಲಿ
ಸಂಚರಿಸಲು ಅನುಮತಿಯಿತ್ತು. ಲೋಕೋ ಲಾಗ್‌ನಲ್ಲಿ ನಮೂದಿಸಿದ ಪ್ರಕಾರ ರೈಲು ಗಂಟೆಗೆ 128 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು’ ಎಂದು ರೈಲ್ವೇ ಮಂಡಳಿಯ ಸಿಗ್ನಲಿಂಗ್‌ನ ಪ್ರಧಾನ ಕಾರ್ಯಕಾರಿ ನಿರ್ದೇಶಕ ಸಂದೀಪ್ ಮಾಥುರ್ ಮತ್ತು ಕಾರ್ಯಾಚರಣೆ ವಿಭಾಗದ ಸದಸ್ಯಜಯ ವರ್ಮಾ ಸಿನ್ಹಾ ಹೇಳಿದ್ದಾರೆ.
ಏನಿದು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್?
“ಇಂಟರ್‌ಲಾಕಿಂಗ್” ರೈಲ್ವೇ ಸಿಗ್ನಲಿಂಗ್‌ನ ಅವಿಭಾಜ್ಯ ಅಂಗ. ನಿಯಂತ್ರಿತ ವಲಯದಲ್ಲಿ ರೈಲುಗಳು ಸುರಕ್ಷಿತವಾಗಿ ಹಾದುಹೋಗುವಂತೆ ಮಾಡುವುದೇ ಇದರ ಕೆಲಸ. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಸುಧಾರಣೆ
ಗೊಂಡಂತೆ ರೈಲ್ವೇ ಸಿಗ್ನಲಿಂಗ್‌ನಲ್ಲೂ ಬದಲಾವಣೆಗಳಾದವು. ಹಾಗೆ ಬಂದದ್ದು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ. ಇದು ಮೈಕ್ರೋ ಪ್ರೊಸೆಸರ್ ಆಧರಿತ ಇಂಟರ್‌ಲಾಕಿಂಗ್ ವ್ಯವಸ್ಥೆ. ವಿಶೇಷವೆಂದರೆ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂನಲ್ಲಿರುವ ಇಂಟರ್‌ಲಾಕಿಂಗ್ ಲಾಜಿಕ್ ಸಾಫ್ಟ್ವೇರ್ ಆಧರಿಸಿರುತ್ತದೆ. ಹೀಗಾಗಿ ವೈರಿಂಗ್ ಮುಟ್ಟದೆ ಯಾವುದೇ ಬದಲಾವಣೆ ಮಾಡಬಹುದು. ಇದು ಮೈಕ್ರೋಪ್ರೊಸೆಸರ್ ಆಧರಿತ ವ್ಯವಸ್ಥೆಯಾಗಿದ್ದು, ಹೆಚ್ಚು ವಿಶ್ವಾಸಾರ್ಹ. ಇದು ವಿಫಲಗೊಳ್ಳುವ ಸಾಧ್ಯತೆಯೂ ಕಡಿಮೆ.