Advertisement

ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಠಾಕ್ರೆ “ರಿಮೋಟ್ ಕಂಟ್ರೋಲ್” ರಾಜಕಾರಣಿಯಾಗಿ ಬೆಳೆದದ್ದು ಹೇಗೆ

04:00 PM Dec 02, 2019 | Nagendra Trasi |

ಮುಂಬೈ:ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಬ್ಬರದ ಕಾಲದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಛತ್ರಪತಿ ಶಿವಾಜಿಮಹಾರಾಜ್ ಹೆಸರಿನಲ್ಲಿ 1966ರಲ್ಲಿ “ಶಿವಸೇನೆ” ಎಂಬ ಸಂಘಟನೆಯನ್ನು ಹುಟ್ಟುಹಾಕಿದ್ದರು. ಆದರೆ ಇದೊಂದು ರಾಜಕೀಯೇತರ ಸಂಘಟನೆ ಅಂತ ಠಾಕ್ರೆ ಬಹಿರಂಗವಾಗಿ ಹೇಳಿದ್ದರು.

Advertisement

ನಂತರದಲ್ಲಿ ಮರಾಠಿಗರ ಶ್ರೇಯೋಭಿವೃದ್ಧಿಗಾಗಿ ಹೋರಾಡಲು ರಾಜಕೀಯ ರಂಗ ಪ್ರವೇಶಿಸಿತ್ತು. ಹೀಗೆ ಶಿವಸೇನೆ ಮರಾಠಿ ಭಾಷಿಕರ ಬೆಂಬಲದೊಂದಿಗೆ ಪ್ರಬಲ ಪಕ್ಷವಾಗಿ ಬೆಳೆಯಲು ಆರಂಭಿಸಿತ್ತು. ಅದಕ್ಕೆ ಬಾಳಾ ಸಾಹೇಬ್ ಠಾಕ್ರೆ ಶಿವಸೇನಾದ ಪರಮೋಚ್ಛ ನಾಯಕರಾಗಿದ್ದರು.

ಮಹಾರಾಷ್ಟ್ರ ಟ್ರೇಡ್ ಯೂನಿಯನ್ ನ ಮುಖ್ಯ ಅಟಾರ್ನಿ ಮಾಧವ್ ಮೆಹ್ರೆ ಶಿವಸೇನೆಗೆ ಸೇರ್ಪಡೆಗೊಂಡಿದ್ದರು. ಪಕ್ಷದ ಮಾಸ್ಟರ್ ಮೈಂಡ್ ಆಗಿ ಕೆಲಸ ಮಾಡುತ್ತಿದ್ದವರು ಮಾಧವ್ ಗಜಾನನ ದೇಶಪಾಂಡೆ! 1970ರಲ್ಲಿ ಬಾಂಬೆಯ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚು ಸಾಧನೆ ತೋರಿಸಲು ಶಿವಸೇನೆಗೆ ಸಾಧ್ಯವಾಗಿಲ್ಲವಾಗಿತ್ತು. ಹಲವಾರು ಬಾರಿ ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಠಾಕ್ರೆ ಬೆಂಬಲ ನೀಡಿದ್ದರು.

1980ರ ಹೊತ್ತಿಗೆ ಹಿಂದುತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಶಿವಸೇನೆ 1995ರಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿಯೊಂದಿಗೆ ಕಣಕ್ಕಿಳಿಯುವ ಮೂಲಕ ಅಧಿಕಾರಕ್ಕೆ ಏರಿತ್ತು. ಇದರೊಂದಿಗೆ ತನ್ನನ್ನು ತಾನು “ರಿಮೋಟ್ ಕಂಟ್ರೋಲ್” ಮುಖ್ಯಮಂತ್ರಿ ಎಂಬುದನ್ನು ಬಾಳಾಸಾಹೇಬ್ ಠಾಕ್ರೆ ಸ್ವಯಂ ಆಗಿ ಘೋಷಿಸಿಕೊಂಡಿದ್ದರು.

ಈ ಮೊದಲು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ರಾಷ್ಟ್ರಪತಿ ಅಭ್ಯರ್ಥಿಯನ್ನು ಬೆಂಬಲಿಸಿದ್ದು, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರ ಎದುರು ಅಭ್ಯರ್ಥಿ ನಿಲ್ಲಿಸದೇ ಇದ್ದದ್ದು, ಕಟ್ಟರ್‌ ವಿರೋಧಿ ಎನ್ನಲಾಗಿದ್ದ ಮುಸ್ಲಿಂ ಲೀಗ್‌ ವಿರುದ್ಧವೂ ಸ್ಪರ್ಧಿಸದೇ ಇದ್ದ ಶಿವಸೇನೆ ಕೆಲವು ಹಂತಗಳಲ್ಲಿ ವಿಪಕ್ಷಗಳಿಗೂ ಆಪ್ತನಾಗಿ ಕಂಡಿತ್ತು. ಶಿವಸೇನೆಯ ಮುಖ್ಯಸ್ಥರೇ ಮುಖ್ಯಮಂತ್ರಿ ಹುದ್ದೆಗೇರಿಲ್ಲ. ಅದರ ನಾಯಕರನ್ನು ಹುದ್ದೆಗೇರಿಸಿ, ತಾವೇ ಹಿನ್ನೆಲೆಯಲ್ಲಿರುತ್ತಿದ್ದರು.

Advertisement

ಹೀಗೆ “ಮಾತೋಶ್ರಿಯಲ್ಲಿ ಕುಳಿತುಕೊಂಡೇ ಮಹಾರಾಷ್ಟ್ರ ರಾಜ್ಯರಾಜಕಾರಣದ ಮೇಲೆ ಬಾಳಾ ಸಾಹೇಬ್ ಠಾಕ್ರೆ ಹಿಡಿತ ಸಾಧಿಸಿದ್ದರು. ಆದರೆ ಠಾಕ್ರೆ ಅವರಾಗಲಿ, ಅವರ ಕುಟುಂಬದ ಸದಸ್ಯರಾಗಲಿ ಯಾರೂ ಕೂಡಾ ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿಲ್ಲವಾಗಿತ್ತು ಎಂಬುದು ಗಮನಾರ್ಹ ವಿಷಯ. ಸುಮಾರು 5 ದಶಕಗಳ ಕಾಲ ರಾಜಕೀಯ ಜೀವನ ನಡೆಸಿದ್ದ ಠಾಕ್ರೆ ರಿಮೋಟ್ ಕಂಟ್ರೋಲ್ ಆಗಿ ರಾಜಕೀಯದಲ್ಲಿ ಬೆಳೆದಿದ್ದರು.

ಧರ್ಮದ ಹೆಸರಿನಲ್ಲಿ ಮತಯಾಚಿಸಿದ್ದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಠಾಕ್ರೆಗೆ (1999ರಿಂದ 2005ರವರೆಗೆ) ಆರು ವರ್ಷಗಳ ಕಾಲ ಮತ ಚಲಾಯಿಸದಂತೆ ನಿಷೇಧ ಹೇರಿತ್ತು. ಹೀಗೆ ಹಲವು ಏಳು-ಬೀಳು, ವೈರುಧ್ಯಗಳ ನಡುವೆ ಶಿವಸೇನೆ ಮಹಾರಾಷ್ಟ್ರದಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆದಿತ್ತು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿ ಸಕ್ರಿಯ ರಾಜಕೀಯದಲ್ಲಿ ತೊಡಗಿಕೊಂಡಂತಾಗಿದೆ. ಅಲ್ಲದೇ ಪ್ರಾದೇಶಿಕ ಪಕ್ಷವಾದ ಶಿವಸೇನೆ ಮಹಾರಾಷ್ಟ್ರದ ಚುಕ್ಕಾಣಿ ಹಿಡಿಯುವಂತಾಗಿದೆ.

ಕಾರ್ಟೂನಿಷ್ಟ್ ಆಗಿ ವೃತ್ತಿ ಆರಂಭಿಸಿದ್ದ ಬಾಳಾ ಠಾಕ್ರೆ:

ಬಾಳಾ ಸಾಹೇಬ್ ಠಾಕ್ರೆ ಅವರು ಫ್ರೀ ಪ್ರೆಸ್ ಜರ್ನಲ್ ನಲ್ಲಿ ವ್ಯಂಗ್ಯಚಿತ್ರಕಾರರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಾಂಬೆಯ ದ ಟೈಮ್ಸ್ ಆಫ್ ಇಂಡಿಯಾದ ಆವೃತ್ತಿಯಲ್ಲಿ ಠಾಕ್ರೆಯ ವ್ಯಂಗ್ಯ ಚಿತ್ರಗಳು ಪ್ರಕಟವಾಗುತ್ತಿದ್ದವು. 1960ರಲ್ಲಿ ತನ್ನದೇ ಆದ ಸ್ವಂತ ಕಾರ್ಟೂನ್ ವಾರಪತ್ರಿಕೆ “ಮಾರ್ಮಿಕ್ “ ಅನ್ನು ಹೊರತಂದಿದ್ದರು. ನಂತರ ಫ್ರಿ ಪ್ರೆಸ್ ಜರ್ನಲ್ ಜತೆ ಭಿನ್ನಾಭಿಪ್ರಾಯ ತಳೆದ ನಂತರ ಠಾಕ್ರೆ, ಜಾರ್ಜ್ ಫೆರ್ನಾಂಡಿಸ್ ಸೇರಿದಂತೆ ನಾಲ್ಕೈದು ಮಂದಿ ಫ್ರಿ ಫ್ರೆಸ್ ಜರ್ನಲ್ ನಿಂದ ಹೊರಬಂದು ನ್ಯೂಸ್ ಡೇ ಎಂಬ ದೈನಿಕ ಆರಂಭಿಸಿದ್ದರು. ಈ ಪತ್ರಿಕೆ ಕೇವಲ ಎರಡು ತಿಂಗಳ ಕಾಲ ಮಾತ್ರ ಪ್ರಸಾರವಾಗಿತ್ತು. 1989ರಲ್ಲಿ ಠಾಕ್ರೆ ಸಾಮ್ನಾ ಮರಾಠಿ ಪತ್ರಿಕೆಯನ್ನು ಆರಂಭಿಸಿದ್ದರು. 2012ರ ನವೆಂಬರ್ 17ರಂದು ಬಾಳಾ ಸಾಹೇಬ್ ಠಾಕ್ರೆ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next