ಪಡುಬಿದ್ರಿ: ವಿದ್ಯಾರ್ಥಿಗಳು ಸಮತೂಕದ ಆಹಾರವನ್ನು ಸೇವಿಸಬೇಕು. ಆಗ ಕ್ರೀಡೆಗಳಿಗಾಗಿ ಉತ್ತಮ ದೇಹಾರೋಗ್ಯವಿರುತ್ತದೆ. ಪಾಠ – ಆಟ ಸಮಾನವಾಗಿ ಪರಿಗಣಿಸಲ್ಪಡಬೇಕು. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಅರೋಗ್ಯ ಉತ್ತಮವಾಗುತ್ತದೆ ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಪ. ಪೂರ್ವ ಶಿಕ್ಷಣ ಇಲಾಖೆ ಹಾಗೂ ಅದಮಾರು ಪ. ಪೂರ್ವ ಕಾಲೇಜು ಸಂಯುಕ್ತವಾಗಿ ಅದಮಾರು ಶಿಕ್ಷಣ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಹಾಗೂ ಶಿಕ್ಷಕ-ರಕ್ಷಕ ಸಂಘದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅದಮಾರು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನ್ಯಾಯವಾದಿ ಪ್ರದೀಪ್ ಕುಮಾರ್ ಮಾತನಾಡಿದರು. ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ | ಎಂ.ಆರ್. ಹೆಗ್ಡೆ, ರಾಷ್ಟ್ರೀಯ ವಾಲಿಬಾಲ್ ಆಟಗಾರ ಅಕ್ಷತ್ ಶೆಟ್ಟಿ, ಸ್ವಯಂ ನಿವೃತ್ತಿ ಹೊಂದಿದ ಕಾಲೇಜಿನ ಶಿಕ್ಷಕೇತರ ಸಿಬಂದಿ ನಾರಾಯಣ ಬೆಲ್ಚಡ ಅವರನ್ನು ಸ್ವಾಮೀಜಿ ಸಮ್ಮಾನಿಸಿದರು.
ಜಿ. ಪಂ. ಸದಸ್ಯ ಶಶಿಕಾಂತ ಪಡುಬಿದ್ರಿ, ಅದಮಾರು ಅದರ್ಶ ಯುವಕ ಮಂಡಲ ಅಧ್ಯಕ್ಷ ಸಂತೋಷ್ ಜೆ. ಶೆಟ್ಟಿ ಬರ್ಪಾಣಿ, ಉಪ ಪ್ರಾಂಶುಪಾಲೆ ಡಾ | ಒಲಿವಿಟಾ ಡಿ’ಸೋಜಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಪೈ ಸ್ವಾಗತಿಸಿದರು. ಉಪನ್ಯಾಸಕ ಡಾ | ಜಯಶಂಕರ ಕಂಗಣ್ಣಾರು ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ ಶೆಟ್ಟಿ ವಂದಿಸಿದರು.
ಉತ್ತೀರ್ಣ ಅನುತ್ತೀರ್ಣತೆ ಕಡ್ಡಾಯ
1ರಿಂದ 9 ನೇ ತರಗತಿವರೆಗೆ ನಿರಂತರವಾಗಿ ಉತ್ತೀರ್ಣತೆ ಮಾಡುವ ಪದ್ಧತಿ ಕೈ ಬಿಟ್ಟು, ಉತ್ತೀರ್ಣ-ಅನುತ್ತೀರ್ಣತೆಯನ್ನು ಪ್ರತಿ ತರಗತಿಯಲ್ಲಿಯೂ ಕಡ್ಡಾಯ ಗೊಳಿಸಬೇಕು. ಮಗುವಿಗೆ ಶಿಕ್ಷಣದ ಮೂಲಕ ಸುಂದರ ರೂಪ ಕೊಡಲು ಅಧ್ಯಾಪಕರು ಕೈಗೊಳ್ಳುವ ಕಠಿನ ನಿರ್ಧಾರಗಳಿಗೆ ಪಾಲಕರು ಕೈಜೋಡಿಸಬೇಕು ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.