Advertisement
ನೀನೊಬ್ಬ ಗುಡ್ ಡ್ರೈವರ್ ಅನ್ನಿಸಿಕೊಳ್ಳಬೇಕಾದರೆ ಗಾಡಿಯನ್ನು ಮುಂದೆ ಓಡಿಸುವಷ್ಟೇ ಚುರುಕಾಗಿ ರಿವರ್ಸ್ ತೆಗೆದುಕೊಳ್ಳಲೂ ಬರಬೇಕಾಗುತ್ತದೆ. ಹಿಂದು-ಮುಂದಿನ ಒಂದು ಒಳ್ಳೇ ಬ್ಯಾಲೆನ್ಸೇ ಅದ್ಭುತ ಡ್ರೈವಿಂಗ್! ಸಿಂಹ ಕೂಡ ತಾನು ನಡೆದುಬಂದ ದಾರಿಯನ್ನು ಆಗಾಗ್ಗೆ ತಿರುಗಿ ನೋಡುತ್ತದೆ. ನಾನು ಎಷ್ಟು ನಡೆದೆ? ಬಂದ ದಾರಿಯಲ್ಲಿ ಏನಿತ್ತು? ಏನಿರಲಿಲ್ಲ? ಎಂಬುದರ ಕುರಿತಾದ, ಒಂದು ಸಣ್ಣ ಟೆಸ್ಟ್ ಅದು. ನಮ್ಮಪ್ಪ- “ಯಾವುದನ್ನೇ ಆಗಲಿ ತಿಪ್ಪೆಗೆ ಹಾಕಿದ್ರು ಲೆಕ್ಕ ಇಡಬೇಕು’ ಅಂತ ಯಾವಾಗಲೂ ಹೇಳ್ತಿದ್ರು. ವಚನಕಾರರು “ಹಿಂದಣ ಹೆಜ್ಜೆಯನ್ನರಿತಲ್ಲದೆ ಮುಂದಣ ಹೆಜ್ಜೆಯನ್ನು ಇಡಲಾಗದು’ ಎನ್ನುತ್ತಾರೆ. ಇದೆಲ್ಲವನ್ನೂ ಯಾಕೆ ಹೇಳ್ತೀದೀನಿ ಎಂದರೆ, ಮತ್ತೂಂದು ವರ್ಷದ ಹೊಸ್ತಿಲ ಮೇಲೆ ಕೂತು ಹೊರಟು ಹೋದ ದಿನಗಳನ್ನು ಕೆದಕಿ ಸುಮ್ಮನೆ ಕಳೆದು ಹೋದದೆಷ್ಟು!? ದಕ್ಕಿದ್ದೆಷ್ಟು? ಅಂತ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ. ನಡೆದು ಬಂದ ದಾರಿಯನ್ನು ತಿರುಗಿ ನೋಡುವವನಿಗೆ, ಮುಂದಿನ ಹೆಜ್ಜೆಗಳ ಬಗ್ಗೆ ಒಂದು ಪ್ಲಾನ್ ಇರಬೇಕಾಗುತ್ತದೆ. ಬಿಡು, ನಾನು ಹೇಗೋ ಬದುಕಿಕೊಳ್ತೀನಿ ಅನ್ನುವವರಿಗೆ ನನ್ನ ತಕರಾರಿಲ್ಲ, ಆದರೆ, ಬಾಳನ್ನು ಹೀಗೆಯೇ ಬದುಕಬೇಕು ಅಂದುಕೊಂಡವರ ಬಗ್ಗೆ ನನಗೊಂದು ಕಾಳಜಿ. ಅವರ ಪಕ್ಕ ಕೂತು, ಹಳೆ ಕ್ಯಾಲೆಂಡರ್ ತೆಗೆದು, ಹೊಸ ಕ್ಯಾಲೆಂಡರ್ ಸಿಕ್ಕಿಸುವಂತೆ, ನಮ್ಮ ದಿನಗಳಲ್ಲಿ ಇರಬೇಕಾದ್ದು ಯಾವುದು? ಇರಬಾರದ್ದು ಯಾವುದು? ಎಂಬುದೊಂದು ಆಡಿಟ್ ನಡೆಯಬೇಕು. ಬ್ಯಾಲೆನ್ಸ್ ಶೀಟ್ ಅನ್ನು ರೆಡಿ ಮಾಡಿಟ್ಟುಕೊಳ್ಳಬೇಕು.
ಹಾಗೆ ನೋಡಿದರೆ ಪ್ರತಿದಿನವೂ ಹೊಸದೇ! ಪ್ರತಿಕ್ಷಣವೂ ಒಳ್ಳೆಯದೇ. ಕೆಲವರು ಯಾವುದೋ ದಿನವೊಂದಕ್ಕೆ ಕಾಯದೇ ಪ್ರತಿದಿನವೂ ಒಳ್ಳೆಯ ದಿನವೇ ಎಂದು ನಿರ್ಧರಿಸಿ, ಮುನ್ನುಗಿ ಗೆಲುವವನ್ನು ದಕ್ಕಿಸಿ ಕೊಳ್ಳುತ್ತಾ ಹೋಗುತ್ತಾರೆ. ಮಹತ್ವದ್ದನ್ನೇ ಸಾಧಿಸುತ್ತಾರೆ. ಅದು ಟೂ ಗುಡ್! ಇನ್ನು ಕೆಲವರು ಅದೆಲ್ಲವನ್ನು ಆರಂಭಿಸಲು “ಒಂದು ಒಳ್ಳೆಯ ದಿನ ಬೇಕು’ ಅಂತ ಕಾಯ್ತಾರೆ. ಹೌದು, ಎಷ್ಟೋ ಬಾರಿ ಹೀಗೆ ಕಾದು ಕಾದು ಕಾದು ಶುರುವಿಟ್ಟುಕೊಂಡ ನಿರ್ಧಾರಗಳು ಫಲ ಕೊಟ್ಟಿವೆ. ಹಾಗೊಂದು ವೇಳೆ ನೀವು ‘ಒಂದು ದಿನ ಬೇಕು…’ ಅಂತ ಹುಡುಕುತ್ತಿದ್ದರೆ, ಇದೋ ನೋಡಿ. ಕ್ಯಾಲೆಂಡರ್ ಬದಲಾವಣೆಯ ಈ ಮೊದಲ ದಿನವನ್ನು ಆಯ್ದುಕೊಳ್ಳಿ. ಮುನ್ನೂರ ಅರವ‚ತ್ತೈದು ದಿನಗಳ ಒಂದು ಪ್ಯಾಕನ್ನು ಕೈಯಲ್ಲಿಟ್ಟುಕೊಂಡು ಪ್ರತಿಯೊಂದನ್ನೂ ಸಾರ್ಥಕವಾಗಿ ಬಳಸಿಕೊಳ್ಳುತ್ತಾ ಹೊರಡಿ. ಆದರೆ ಅದಕ್ಕೊಂದು ಮನಸ್ಥಿತಿ ಬೇಕು. “ಇಂಥ ದಿನದಿಂದ…’ ಅಂತ ಅಂದುಕೊಂಡು ಹೊರಡುವವರಿಗೆ ಅದು ದಕ್ಕಬಹುದು. ಬೊಗಸೆಯಲ್ಲಿ ಉಳಿದಿದ್ದೆಷ್ಟು? ಜಾರಿದ್ದೆಷ್ಟು?
ಕಾಲ ನಿಲ್ಲುವುದಿಲ್ಲ. ಆದರೆ, ಅದು ಕೊಟ್ಟು ಹೋಗುವ ಉಡುಗೊರೆಗಳು ಮತ್ತು ಕಲೆಗಳು ಮಾತ್ರ ಉಳಿಯುತ್ತವೆ. ಕಾಲದ ಹರಿವಿನಿಂದ ತುಂಬಿಕೊಂಡ ಬೊಗಸೆಯಲ್ಲಿ ಉಳಿದಿದ್ದು ಮತ್ತು ಜಾರಿದ್ದನ್ನು ಲೆಕ್ಕ ಹಾಕಿಕೊಳ್ಳಬೇಕು. ಜಾರಿ ಹೋಗಿದ್ದರಲ್ಲಿ ಬೇಕಾದದೆಷ್ಟು? ಉಳಿದಿದ್ದರಲ್ಲಿ ಬೇಡವಾದ¨ªೆಷ್ಟು? ನೋಡಿಕೊಳ್ಳಿ. ಒಂದು ಸಣ್ಣ ಅವಲೋಕನ ನಾಳೆಯ ವರ್ಷಕ್ಕೆ ಒಂದು ದೊಡ್ಡ ಗೈಡ್ ಆಗುತ್ತದೆ. ಕಳೆದ ವರ್ಷ ಮೊದಲ ದಿನ ತೂಕ ಇಳಿಸಬೇಕು ಅಂದುಕೊಂಡಿದ್ದು ಎಷ್ಟರ ಮಟ್ಟಿಗೆ ಸಾಧ್ಯವಾಯಿತು? ಅವಳನ್ನು ಮರೆಯುತ್ತೇನೆ ಅಂದುಕೊಂಡು ಇನ್ನಷ್ಟು ಅವಳಿಗೆ ಹತ್ತಿರವಾಗಲು ಮಾಡಿದ ಪ್ರಯತ್ನ, ಹಠಕ್ಕೆ ಬಿದ್ದು ಪ್ರಯತ್ನಿಸಿದ್ದಕ್ಕೆ ಸಿಕ್ಕ ಒಂದು ಒಳ್ಳೆಯ ನೌಕರಿ.. ಹೀಗೆ ನೂರಾರು ಇರುತ್ತವೆ. ಬೇಡವಾದ್ದನ್ನು ಸುಮ್ಮನೆ ಡಿಲೀಟ್ ಮಾಡಿ. ಬೇಕಾದ್ದನ್ನು ಜತನ ಮಾಡಿಕೊಳ್ಳಿ. ನಾಳೆಗೆ ಬಂಡವಾಳದಂತೆ ಹೂಡಿ.
Related Articles
ನನಗೆ ಗೊತ್ತು, ಬಹುತೇಕರ ಮನಸ್ಸಿನಲ್ಲಿ ಈ ವರ್ಷ ನಾನು ಏನೆಲ್ಲಾ ಮಾಡಬೇಕು ಅನ್ನುವುದರ ಬಗ್ಗೆ ಒಂದು ಪ್ಲಾನ್ ಸಿದ್ಧವಾಗಿರುತ್ತದೆ. ಅಷ್ಟೇ ಏಕೆ, ಮೊದಲ ದಿನವೇ ಅದು ಯಶಸ್ವಿಯಾಗಿ ಜಾರಿಯಾಗಿರುತ್ತದೆ. ಎರಡನೇ ದಿನವೂ ಕೂಡ ಯಶಸ್ವಿ ಆಟವೇ. ಮೂರನೇ ದಿನ ಸ್ವಲ್ಪ ಕುಂಟುತ್ತದೆ. ಒಂದು ವಾರ ಕಳೆಯುವ ಹೊತ್ತಿಗೆ ಎಲ್ಲವನ್ನೂ ಕೈಬಿಟ್ಟು ಕೂರುತ್ತೇವೆ. ಇದನ್ನು “ಆರಂಭ ಶೂರತ್ವ ‘ ಅನ್ನುತ್ತಾರೆ. ಬಹುಪಾಲಿನವರು ಆರಂಭಶೂರರು. ಮೊದಲ ದಿನದ ನಿರ್ಧಾರವೇ ನಿರ್ಧಾರವೇ ಮೂನ್ನೂರ ಅರವತ್ತೈದೆನೆಯ ದಿನವೂ ಉಳಿಯಬೇಕು. ಅದೇನು ತುಂಬಾ ಸುಲಭವಲ್ಲ. ಹಾಗಂತ ಕಷ್ಟ ಕೂಡ ಏನಲ್ಲ! ನಿಮ್ಮನ್ನು ನೀವೇ ಆಗಾಗ್ಗೆ ಬಡಿದು ಎಬ್ಬಿಸಿ ಕೆಲಸಕ್ಕೆ ಹಚ್ಚಬೇಕು ಅಷ್ಟೇ! ಒಂದು ರೂಢಿ ದಕ್ಕಿದ ನಂತರ ತಾನೇ ಸಾಗುತ್ತದೆ.
Advertisement
ಖಂಡಿತ ಈ ಬಾರಿ ನನಗೊಂದು ಕೆಲಸ ದಕ್ಕುತ್ತದೆ. ಅಪ್ಪ -ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಸಂಸಾರಕ್ಕೆ ಇನ್ನಷ್ಟು ಸಮಯ ಕೊಡ್ತೀನಿ. ಈ ವರ್ಷದಲ್ಲಿ ಇಷ್ಟೆಲ್ಲವನ್ನು ಓದಿ ಮುಗಿಸಬೇಕು. ಇನ್ಮೆàಲೆ ಖಂಡಿತ ಬೆಳಗ್ಗೆ ಐದಕ್ಕೇ ಎದ್ದು ವಾಕ್ ಹೊರಡಬೇಕು. ಸಿಗರೇಟ್ ಬಿಡ್ತೀನಿ, ಮನೆಯ ಜವಾಬ್ದಾರಿ ತಗೋತೀನಿ, ಮಕ್ಕಳಿಗೆ ಇದಿಷ್ಟನ್ನು ಈ ವರ್ಷದಲ್ಲಿ ಕಲಿಸುತ್ತೀನಿ… ಈ ಥರಹದ ಪ್ಲಾನ್ ಗಳು ನಿಮ್ಮ ಮನಸ್ಸಿನಲ್ಲಿರುತ್ತವೆ. ಒಳ್ಳೆಯದು. ಈ ಪ್ರಯತ್ನ ಇಂದೇ ಶುರುವಾಗಲಿ. ಮನಸ್ಸಿಗೆ ಒದ್ದು ಬುದ್ಧಿ ಹೇಳಿ. ವರ್ಷಪೂರ್ತಿ ಸಹಕರಿಸಲು ತಾಕೀತು ಮಾಡಿ. ಆರಾಮಾಗಿ ಕೂತು ಒಮ್ಮೆ ಕೂತು ತಿರುಗಿ ನೋಡಿ. ಕಳೆದ ವರ್ಷದ ದಿನಗಳನ್ನು ಕಂಡು ನಿಮಗೆ ವಾವ್ ಅನಿಸದಿದ್ದರೆ ಕೇಳಿ…
ಸದಾಶಿವ ಸೊರಟೂರು