ಉಪ್ಪೂರು ತೆಂಕಬೆಟ್ಟುವಿನ ಶ್ರೀ ವಿನಾಯಕ ಯಕ್ಷಗಾನ ಸಂಘ ಇದರ ಸ್ಥಾಪಕ ದಿ.ಯು. ಶಿವರಾಮ ಕಲ್ಕೂರ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ಯಕ್ಷಗಾನದ ಪ್ರಸಾದನ ಕಲೆಯಲ್ಲಿ ಪಳಗಿದ ಬ್ರಹ್ಮಾವರ ಹಂದಾಡಿಯ ಬಾಲಕೃಷ್ಣ ನಾಯಕ್ ಇವರಿಗೆ ಫೆ.16ರಂದು ಪ್ರದಾನ ಮಾಡಲಾಗುತ್ತಿದೆ.
ಕಲಾವಿದರಿಗೆ ಮೆರುಗು ನೀಡುವ ವಿವಿಧ ವೇಷಭೂಷಣಗಳನ್ನು ತಯಾರಿಸಿ ಪ್ರಸಾದನ ಕಲೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು ಯಕ್ಷಗಾನ ಕ್ಷೇತ್ರದಲ್ಲಿ ಬಾಲಣ್ಣನೆಂದೇ ಖ್ಯಾತಿಯಾಗಿರುವ ಹಂದಾಡಿಯ ಬಾಲಕೃಷ್ಣ ನಾಯಕ್. ವೇಷಭೂಷಣ ತಯಾರಕ ಹಂದಾಡಿಯ ಸುಬ್ಬಣ್ಣ ಭಟ್ ಇವರ ಅಜಪುರ ಯಕ್ಷಗಾನ ಸಂಘದಲ್ಲಿ ವೇಷಭೂಷಣವನ್ನು ಕಲಿತರು. ಬಳಿಕ 1993ರಲ್ಲಿ ತಮ್ಮದೇ ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪ್ರಸ್ತುತ ನೂರಾರು ಸಂಘ-ಸಂಸ್ಥೆಗಳಿಗೆ ಮುಖವರ್ಣಿಕೆ, ವೇಷಭೂಷಣ ಸರಬರಾಜು ಮಾಡುತ್ತಿದ್ದಾರೆ.
ಮಂದಲೆ, ಕರ್ಣ ಕುಂಡಲ, ಕೇದಿಗೆ, ಕೊರಳು ಅಡ್ಡಿಗೆ, ಭುಜಕೀರ್ತಿ, ಎದೆಕಟ್ಟು, ಕೈಚಿನ್ನ, ತೋಳ್ ಚಿನ್ನ, ವೀರ ಕಸೆ, ಕಾಲ್‌ಕಡಗ, ಗೆಜ್ಜೆ ತಾವರೆ, ತುರಾಯಿ ಹೀಗೆ ಅನೇಕ ಪರಿಕರಗಳನ್ನು ಮನೆಯಲ್ಲಿಯೇ ತಯಾರಿಸಿ ಪ್ರಸಾದನ ಕಲೆಯಿಂದ ಯಕ್ಷಗಾನವನ್ನು ಆಕರ್ಷಕವಾಗಿ ಮಾಡಿದ್ದಾರೆ. ಯಕ್ಷಗಾನದ ವೇಷಭೂಷಣಗಳಲ್ಲಿಯೂ ಇಂದು ಆಧುನಿಕತೆಯನ್ನು ಕಾಣುತ್ತಿದ್ದರೂ, ಬಣ್ಣ ಹಚ್ಚುವ ಕಲೆಯಲ್ಲಿ ಏನೂ ಬದಲಾವಣೆಯಾಗಿಲ್ಲ ಎಂದು ಹೇಳುತ್ತಾರೆ.
ಪ್ರಸಾದನ ಕಲೆಯಲ್ಲಿ ಪಳಗಿರುವ ನಾಯಕ್ ಅವರು ಈ ಕಲೆಯು ತನ್ನ ಮುಂದಿನ ಪೀಳಿಗೆಗೂ ಉಳಿಯಬೇಕು ಎನ್ನುವ ಸಲುವಾಗಿ ತಮ್ಮ ಮಕ್ಕಳಾದ ನಾಗಭೂಷಣ, ಮಿಥುನ್ ಮತ್ತು ಜಯಂತ್ ಅವರಲ್ಲಿಯೂ ಯಕ್ಷಗಾನದ ಪ್ರಸಾದನ ಕಲೆಯಲ್ಲಿ ಆಸಕ್ತಿ ಮೂಡಿಸಿ ಅವರೂ ಈ ಕಲೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ರಾಘವೇಂದ್ರ ಭಟ್ ಮರ್ಣೆ