Advertisement

ಕಾಡಾ ಅಧ್ಯಕ್ಷ ಸ್ಥಾನ ಸ್ವೀಕರಿಸಿ; ಬಿಜೆಪಿ ಟಿಕೆಟ್‌ ಬಿಟ್ಟುಕೊಡಬೇಡಿ

04:09 PM Oct 13, 2019 | Naveen |

ಬಳಗಾನೂರು: ಬಿಜೆಪಿ ಪಕ್ಷಕ್ಕಾಗಿ ದುಡಿದ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ “ಕಾಡಾ’ ಅಧ್ಯಕ್ಷ ಸ್ಥಾನಕ್ಕೆ ನಿಮ್ಮನ್ನು ಸರ್ಕಾರ ಆಯ್ಕೆ ಮಾಡಿದೆ. ಕಾಡಾ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಿ. ಆದರೆ ಕಳೆದ ಬಾರಿ ಚುನಾವಣಾ ಫಲಿತಾಂಶ ಕುರಿತು ನ್ಯಾಯಾಲಯದಲ್ಲಿ ಹೂಡಿದ ದಾವೆಯನ್ನು ಯಾವುದೇ ಕಾರಣಕ್ಕೆ ಹಿಂದಕ್ಕೆ ಪಡೆಯಬೇಡಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ನೂ ಬಿಟ್ಟುಕೊಡಬೇಡಿ” ಇದು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬಿಜೆಪಿ ಜಿಲ್ಲಾಧ್ಯಕ್ಷ, ಮಸ್ಕಿ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆರ್‌. ಬಸನಗೌಡ ಅವರಿಗೆ ನೀಡಿದ ಸಲಹೆ.

Advertisement

ಬಳಗಾನೂರು ಪಟ್ಟಣ, ಜವಳಗೇರಾ ಹಾಗೂ ಗುಡದೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರ ಸಭೆ ಪಟ್ಟಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಅನೇಕ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಒಂದು ವೇಳೆ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸಿಗದಿದ್ದರೆ ನಿಮ್ಮೊಂದಿಗೆ ನಾವಿದ್ದೇವೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಿಮ್ಮನ್ನೇ ಗೆಲ್ಲಿಸುತ್ತೇವೆ. ಸದ್ಯಕ್ಕೆ ಕಾಡಾಅಧ್ಯಕ್ಷ ಸ್ಥಾನ ಸ್ವೀಕರಿಸಿ ಮುಂದಿನ ಬದಲಾವಣೆಗೆ ಕಾದು ನೋಡೋಣ ಎಂದು ಅಭಿಪ್ರಾಯ ತಿಳಿಸಿದರು.

ಅಭಿಮಾನಿಗಳು, ಪದಾಧಿಕಾರಿಗಳ ಸಲಹೆ ಆಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌. ಬಸನಗೌಡ ತುರ್ವಿಹಾಳ, ಕಳೆದ ಬಾರಿಯ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ತಮಗೆ ಕ್ಷೇತ್ರದ 60 ಸಾವಿರ ಮತದಾರರು, ಅಭಿಮಾನಿಗಳು ಮತ ಚಲಾಯಿಸಿ ಬೆಂಬಲಿಸಿದ್ದಾರೆ. ತಾವು ಚುನಾವಣೆಯಲ್ಲಿ ಸೋತರೂ
ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ಹೇಳಿದರು.

ರೈತನಾಗಿ ಬೆಳೆದ ನಾನು ಅ ಧಿಕಾರದ ಆಸೆಗಾಗಿ ಕ್ಷೇತ್ರದ ಹೃದಯವಂತ ಮತದಾರರನ್ನು ಕಳೆದುಕೊಳ್ಳಲು ಎಂದಿಗೂ ಇಷ್ಟಪಡುವುದಿಲ್ಲ. ಕಳೆದ ಬಾರಿ ಪಕ್ಷದ ವರಿಷ್ಠರು ಕ್ಷೇತ್ರದಲ್ಲಿ ಆಕಾಂಕ್ಷಿ ಅಭ್ಯರ್ಥಿಗಳ ಪರ ಸರ್ವೇ ಮಾಡುವ ಮೂಲಕ ಟಿಕೆಟ್‌ ನೀಡಿದ್ದರು. ಈ ಬಾರಿಯೂ ಅದನ್ನೇ ಮುಂದುವರಿಸುವಂತೆ ವರಿಷ್ಠರ ಗಮನಕ್ಕೆ ತರಲು ಕಾರ್ಯಕರ್ತರು ಮುಂದಾಗಬೇಕು. ಕ್ಷೇತ್ರದಲ್ಲಿ ಸರಕಾರದ ಅನುದಾನದಡಿ ಕೈಗೊಂಡ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಅನರ್ಹ ಶಾಸಕರು ಮತ್ತು ಅವರ ಬಳಗ ಕೋಟಿಗಟ್ಟಲೆ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ತಮಗೆ ಮಸ್ಕಿ ಕ್ಷೇತ್ರದ ಟಿಕೆಟ್‌ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿ ರಾಜ್ಯ ಮುಖಂಡರ ಮೇಲೆ ಒತ್ತಡ ಹಾಕಲು ಕ್ಷೇತ್ರದ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಹೇಳಿದರು.

Advertisement

ಸಭೆ ಉದ್ಘಾಟಿಸಿದ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಿಶ್ವನಾಥ ಪಾಟೀಲ, ಮಸ್ಕಿ ನಗರ ಬ್ಲಾಕ್‌ ಅಧ್ಯಕ್ಷ ಅಪ್ಪಾಜಿಗೌಡ, ಮುಖಂಡರಾದ ಹೂವಿನಬಾವಿ ಸಿದ್ದಣ್ಣ, ಶಿವಕುಮಾರ, ಮಾನಪ್ಪ ಮಟ್ಟೂರು, ರಾಮಣ್ಣ ವಕೀಲರು, ಬಸನಗೌಡ, ಬುಳ್ಳನಗೌಡ ಮಾತನಾಡಿದರು.

ಮುಖಂಡರಾದ ಬಸನಗೌಡ ಮುದೇಗೌಡ್ರು, ಅಮರಯ್ಯಸ್ವಾಮಿ, ಸಿದ್ದನಗೌಡ, ಲಿಂಗರಾಜ, ಮಲ್ಲಿಕಾರ್ಜುನ, ಮಲ್ಲಣ್ಣ, ಬಸವರಾಜಗೌಡ, ಮಲ್ಲರೆಡ್ಡೆಪ್ಪ, ಕರಿಯಪ್ಪ, ಶರಣಪ್ಪ ಸೇರಿದಂತೆ ಮುಖಂಡರು, ಕಾರ್ಯಕರ್ತರು ಬಿಜೆಪಿ ಬೆಂಬಲಿತ ಪಪಂ ಸದಸ್ಯರು, ಸುತ್ತಲಿನ ಗ್ರಾಮಗಳ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next