Advertisement

ಗೈರಾದ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹ

11:09 AM Sep 01, 2019 | Team Udayavani |

ಬಳಗಾನೂರು: ಪಟ್ಟಣದ ಸರಕಾರಿ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೃಷಭೇಂದ್ರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ವೇಳೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ವಿದ್ಯಾರ್ಥಿಗಳ ಪಾಲಕರು ಮುತ್ತಿಗೆ ಹಾಕಿ, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾದಾಗಿನಿಂದ ಕೆಲವೇ ದಿನ ಶಾಲೆಗೆ ಹಾಜರಾಗಿ ಅನಾರೋಗ್ಯ ರಜೆ ಪಡೆದಿರುವ ಶಿಕ್ಷಕಿ ಶಾಂತಾ ಜೋಗಿನಕಟ್ಟಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಶಿಕ್ಷಕಿ ಶಾಂತಾ ಜೋಗಿನಕಟ್ಟಿ ಶಾಲೆಗೆ ನೇಮಕವಾದಾಗಿನಿಂದಲೂ ಇಲ್ಲಿ ಕಾರ್ಯ ನಿರ್ವಹಿಸದೆ ಉಪಾಯವಾಗಿ ವೈದ್ಯಕೀಯ ರಜೆಯನ್ನು ಅಂಚೆಯೊಂದಿಗೆ ಕಳಿಸುವ ಮೂಲಕ ರಜೆ ಪಡೆದು ಸರಕಾರದ ಸೌಲಭ್ಯ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸತತ ಗೈರಾದ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಶಾಲೆಯಲ್ಲಿ ಖಾಲಿ ಇರುವ ಮುಖ್ಯಗುರು ಹುದ್ದೆ ಭರ್ತಿ ಮಾಡಬೇಕು. ಗೈರಾದ ಶಿಕ್ಷಕಿ ಬದಲಿಗೆ ಅತಿಥಿ ಶಿಕ್ಷಕರು ಅಥವಾ ಎರವಲು ಶಿಕ್ಷಕರನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಬಿಇಒ ವೃಷಭೇಂದ್ರಯ್ಯಸ್ವಾಮಿ, ಎರವಲು ಅಥವಾ ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಭಾರಿ ಮುಖ್ಯಗುರು ಸುವರ್ಣ ಕಟ್ಟಿಮನಿ ಅವರಿಗೆ ಸೂಚಿಸಲಾಗಿದೆ. ಗೈರಾದ ಶಿಕ್ಷಕಿ ಶಾಂತಾ ಜೋಗಿನಕಕಟ್ಟೆ ಅವರ ಮೇಲೆ ಕ್ರಮಕ್ಕೆ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಭಾರಿ ಮುಖ್ಯಗುರು ಸುವರ್ಣ ಕಟ್ಟಿಮನಿ, ಶಿಕ್ಷಣಾಧಿಕಾರಿಗಳ ನಿರ್ದೇಶನದಂತೆ ಗೈರಾದ ಶಿಕ್ಷಕಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖಂಡರಾದ ವಿರುಪಣ್ಣ ಗುತ್ತೇದಾರ, ಎಚ್.ಮಹಾಬಳೇಶ, ಎಚ್. ಪಂಪಾಪತಿ, ಅಮರಪ್ಪ ಉದ್ಬಾಳ, ಅಮರಪ್ಪ ಜವಳಗೇರಾ, ಗಣೇಶ ಡಿಶ್‌, ನಂದಪ್ಪ ಗೋಡಿಕಾರ, ಮಹೇಶ ಕೊಂಡಕುಂದಿ, ಜಡಿಯಪ್ಪ ಗದ್ದಿ, ಬಸವರಾಜ, ಮಲ್ಲರೆಡ್ಡಿ, ಶರಣಪ್ಪ ಕುಂಬಾರ, ಮಲ್ಲಯ್ಯಸ್ವಾಮಿ ಇತರರು ಇದ್ದರು. ಪ್ರಭಾರಿ ದೈಹಿಕ ಶಿಕ್ಷಣ ಪರೀವೀಕ್ಷಕ ಮಲ್ಲನಗೌಡ ಗುಡಗಲದಿನ್ನಿ, ಬಿಆರ್‌ಸಿ ಕೃಷ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next