ಬಳಗಾನೂರು:ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕೆರೆ ನಿರ್ಮಾಣ ಕಾಮಗಾರಿ ಅಪೂರ್ಣವಾಗಿದ್ದು, ಒಂದೂವರೆ ಕೋಟಿಗೂ ಅಧಿಕ ಹಣ ಮಣ್ಣು ಪಾಲಾದಂತಾಗಿದೆ.
ಬಳಗಾನೂರು ಗ್ರಾಪಂ ಆಗಿದ್ದಾಗ 2012-13ನೇ ಸಾಲಿನಲ್ಲಿ ಕೆರೆ ನಿರ್ಮಿಸಲು ಯೋಜನೆ ರೂಪಿಸಿ ಚಾಲನೆ ನೀಡಲಾಗಿತ್ತು. ನರೇಗಾ, ಜಿಪಂ ಅನುದಾನ ಸೇರಿ ಈವರೆಗೆ ಸುಮಾರು 1.5 ಕೋಟಿಗೂ ಅಧಿಕ ಹಣವನ್ನು ಕೆರೆ ಕಾಮಗಾರಿಗೆ ವ್ಯಯಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದೀಗ ಬಳಗಾನೂರು ಪಟ್ಟಣ ಪಂಚಾಯಿತಿ ಆಗಿದ್ದು, ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಅಧಿಕಾರಿಗಳ ಅಸಡ್ಡೆ, ಗುತ್ತಿಗೆದಾರರ ಬೇಜವಾಬ್ದಾರಿ ಪರಿಣಾಮ ಕಾಮಗಾರಿ ನಿರ್ಲಕ್ಷ್ಯಕ್ಕೊಳಗಾಗಿದೆ.
ಆಗಿದ್ದೇನು?: ಬಳಗಾನೂರು ಗ್ರಾಪಂ ಅವಧಿಯಲ್ಲಿ ನರೇಗಾ, ಜಿಪಂ ಸೇರಿ ವಿವಿಧ ಅನುದಾನದಡಿ ಅಂದಾಜು 1.50 ಕೋಟಿ ರೂ. ಖರ್ಚು ಮಾಡಿ ಕುಡಿಯುವ ನೀರಿನ ಕೆರೆ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನೀರು ಸಂಗ್ರಹಕ್ಕೆ ಯೋಗ್ಯವಾಗಿಲ್ಲ. ಈಗ ಮತ್ತೇ ಕೆರೆ ನಿರ್ಮಿಸಲು, ಪಟ್ಟಣದ 12 ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್ ಅಳವಡಿಕೆ ಸೇರಿ ವಿವಿಧ ಕಾಮಗಾರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 4.25 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಿ ರಾಯಚೂರು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆ ಪ್ರಕಾರ ಸರ್ವೇ ನಂ. 439 ರಲ್ಲಿ 8.36 ಎಕರೆಯಲ್ಲಿ ಅರೆಬರೆಯಾಗಿ ನಿರ್ಮಾಣವಾದ ಕೆರೆಯನ್ನೇ ವಿಸ್ತರಣೆ ಮಾಡಿ ಸುತ್ತಲೂ ಸಿಮೆಂಟ್ ಕಾಂಕ್ರಿಟ್ ಬೆಡ್ ಹಾಗೂ ಫಿಲ್ಟರ್ ಬೆಡ್ ನಿರ್ಮಿಸಿ 12 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿದೆ.
ಆದರೆ ಅಗತ್ಯ ಅನುದಾನ ಬಿಡುಯಗಡೆಯಾಗದೇ ಇರುವ ಕಾರಣಕ್ಕೆ ಕಾಮಗಾರಿ ಆರಂಭಕ್ಕೆ ಮುಹೂರ್ತ ಕೂಡಿಬಂದಿಲ್ಲ. ಮಂಡಳಿ ಆಕ್ಷೇಪ: ಬಾಕಿ ಕಾಮಗಾರಿಗೆ ಅನುದಾನ ಬಿಡುಗಡೆ ವಿಳಂಬದ ಜತೆಗೆ ಈ ಕಾಮಗಾರಿ ನಿರ್ವಹಣೆಗೆ ಕರ್ನಾಟಕ ಜಲಮೂಲ ಮಂಡಳಿ ಅಧಿಕಾರಿಗಳು ಆಕ್ಷೇಪ ಎತ್ತಿದ್ದಾರೆ. ಬಳ್ಳಾರಿ
ವಿಭಾಗದ ಎಂಜಿನೀಯರ್‌ಗಳ ಪ್ರಕಾರ ಈಗ ತಯಾರಿಸಿದ ಕ್ರಿಯಾ ಯೋಜನೆ ಪ್ರಕಾರ ಪಟ್ಟಣದ 12 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲು ಆಗುವುದಿಲ್ಲ. 4.25 ಕೋಟಿ ರೂ.ನಲ್ಲಿ ಕೇವಲ 12 ವಾರ್ಡ್‌ಗಳಿಗೆ ಪೈಪ್‌ಲೈನ್ ಮಾಡಬಹುದಾಗಿದೆ. ಆದರೆ ಕೆರೆ ವಿಸ್ತರಣೆ, 2036ರಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ನೀರು ಸಂಗ್ರಹ, ಸರಬರಾಜು ಯೋಜನೆಗೆ ಇನ್ನು 7.60 ಕೋಟಿ ರೂ. ಹೆಚ್ಚಿನ ಅನುದಾನ ಅಗತ್ಯವಿದೆ ಎಂದು ಪಪಂ ಆಡಳಿತ ಮಂಡಳಿಗೆ ತಿಳಿಸಿದೆ.
2 ಕೋಟಿ ರೂ. ಬಿಡುಗಡೆ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಒತ್ತಾಸೆ ಮೇರೆಗೆ ಕೆರೆ ನಿರ್ಮಾಣ ಕಾಮಗಾರಿಗಾಗಿ ಪಟ್ಟಣ ಪಂಚಾಯಿತಿಗೆ ವಿಶೇಷ ಅನುದಾನದಡಿ 2 ಕೋಟಿ ರೂ. ಮಂಜೂರು ಮಾಡಲಾಗಿದೆ ಎನ್ನಲಾಗಿದೆ. ಆದರೆ ಈ ಕುರಿತು ಡಿ.11ರಂದು ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಕೆರೆ ನಿರ್ಮಾಣ ಕಾಮಗಾರಿ ಆರಂಭಿಸಲು 2 ಕೋಟಿ ರೂ. ಸಾಲುವುದಿಲ್ಲ. ಕಾಮಗಾರಿ ಆರಂಭಿಸಿದರೂ ಮತ್ತೇ ಅಪೂರ್ಣ ಆಗುತ್ತದೆ. ಹೀಗಾಗಿ ಈ ಅನುದಾನವನ್ನು ವಾರ್ಡ್ಗಳ ಅಭಿವೃದ್ಧಿಗೆ ಸದಸ್ಯರು ಸಮ್ಮತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆ ಕಾಮಗಾರಿ ಮತ್ತೆ ನನೆಗುದಿಗೆ ಬೀಳುವ ಲಕ್ಷಣಗಳು ಗೋಚರಿಸಿವೆ. ಮತ್ತೇ ಮುಂದಿನ ಬೇಸಿಗೆಯಲ್ಲಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಅನುಭವಿಸುವ ಸ್ಥಿತಿ ಎದುರಾಗಲಿದೆ.
ಫಿಲ್ಟರ್ ಬೆಡ್ ಟ್ಯಾಂಕ್ ನಿರುಪಯುಕ್ತ
ಬಳಗಾನೂರು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೆರೆ ನಿರ್ಮಿಸುವ ಜತೆಗೆ ನೀರು ಶುದ್ಧೀಕರಿಸಿ ಪೂರೈಸಲು ಫಿಲ್ಟರ್ ಬೆಡ್ ನಿರ್ಮಿಸಲಾಗಿದೆ. ಅಲ್ಲದೇ ಯಂತ್ರ ಅಳವಡಿಕೆಗೆ ಕೊಠಡಿ ನಿರ್ಮಿಸಲಾಗಿದೆ. ಆದರೆ ಕೆರೆ ಕಾಮಗಾರಿ ನನೆಗುದಿಗೆ ಬಿದ್ದಿದ್ದರಿಂದ ಇವೆರಡೂ ನಿರುಪಯುಕ್ತವಾಗಿ ಹಾಳಾಗಿವೆ. ಇನ್ನು 2012-13ನೇ ಸಾಲಿನಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ 5 ಲಕ್ಷ ಲೀಟರ್ ಸಾಮರ್ಥಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಿಸಲಾಗಿದ್ದು, ಇದು ಕೂಡ ನೀರು ಕಾಣದೇ ನಿರುಪಯುಕ್ತವಾಗಿದೆ.
ಪಟ್ಟಣ ಪಂಚಾಯಿತಿಗೆ ವಿಶೇಷ ಅನುದಾನದಡಿ 2 ಕೋಟಿ ರೂ.
ಮಂಜೂರು ಮಾಡಲಾಗಿದೆ. ಅದನ್ನು ಪಟ್ಟಣದ ಕುಡಿಯುವ ನೀರಿನ ಕೆರೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಆಡಳಿತ ಮಂಡಳಿಗೆ ಸೂಚಿಸಿದ್ದೇನೆ. ಈ ಕುರಿತು ಚರ್ಚಿಸಲಾಗುವುದು.
ಪ್ರತಾಪಗೌಡ ಪಾಟೀಲ,
ಮಾಜಿ ಶಾಸಕರು, ಮಸ್ಕಿ
ಹನುಮೇಶ ಕಮ್ಮಾರ