Advertisement

ತೃತೀಯ ಲಿಂಗಿ ಮಕ್ಕಳಿಗೆ ಬಾಲ ಮಂದಿರ

01:47 PM Apr 16, 2023 | Team Udayavani |

ಬೆಂಗಳೂರು: ಸಮಾಜದ ಅವಗಣನೆಗೆ ತುತ್ತಾಗಿ ಶೋಷಣೆ ಅನುಭವಿಸುತ್ತಿರುವ ತೃತೀಯ ಲಿಂಗಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಗಳಿಗೆ ಇದೀಗ ಮತ್ತೂಂದು ಸೇರ್ಪಡೆಗೊಂಡಿದ್ದು, ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿ ಬಾಲಕ ಮತ್ತು ಬಾಲಕಿಯರ ಅರೈಕೆಗೆ ಪ್ರತ್ಯೇಕ ಬಾಲ ಮಂದಿರಗಳನ್ನು ಪ್ರಾರಂಭಿಸಲಾಗಿದೆ.

Advertisement

ತೃತೀಯ ಲಿಂಗಿ ಸಮುದಾಯವನ್ನು ಕುಟುಂಬಸ್ಥರು ಸೇರಿದಂತೆ ಸಮಾಜ ಸಹ ಕೀಳಾಗಿ ಕಾಣುತ್ತದೆ. ಇದರ ಪರಿಣಾಮ ಅವರು ಸಮಾಜದ ಮುಖ್ಯ ವಾಹಿನಿಯಿಂದ ಈಗಲೂ ದೂರ ಉಳಿದಿದ್ದಾರೆ. ಇದರ ಪರಿಣಾಮವಾಗಿ ಆ ಸಮುದಾಯದವರು ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದಾಗಿ, ಮಕ್ಕಳ ರಕ್ಷಣಾ ನಿರ್ದೇಶನಾಲಯವು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ತೃತೀಯ ಲಿಂಗಿ ಬಾಲಕರು ಮತ್ತು ಬಾಲಕಿಯರ ಬಾಲ ಮಂದಿರಗಳನ್ನು ಪ್ರಾರಂಭಿಸಿದೆ.

ನಗರದ ಕಿದ್ವಾಯಿ ಆಸ್ಪತ್ರೆಯ ಆವರಣದಲ್ಲಿ ತೃತೀಯ ಲಿಂಗಿ ಮಕ್ಕಳಿಗೆ ಈ ಬಾಲಮಂದಿರವನ್ನು ನಿರ್ಮಿಸಲಾಗಿದ್ದು, ಇವರಿಗೂ ಸಾಮಾನ್ಯ ಮಕ್ಕಳಂತೆ ಶಿಕ್ಷಣ, ವಸತಿ, ವೃತ್ತಿಪರ ತರಬೇತಿ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನೂ ಒದಗಿಸಲಾಗುತ್ತದೆ. ಈಗಾಗಲೇ ಕೆಲವು ಮಕ್ಕಳನ್ನು ಗುರುತಿಸಿದ್ದು, ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಈ ವಿಶೇಷ ಬಾಲಮಂದಿರವನ್ನು ಅಧಿಕೃತವಾಗಿ ಪ್ರಾರಂಭಿಸಿ ತೃತೀಯ ಲಿಂಗಿ ಮಕ್ಕಳಿಗೆ ವಿವಿಧ ಸವಲತ್ತುಗಳೊಂದಿಗೆ ಆಶ್ರಯ ನೀಡಲಾಗುತ್ತದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.

ಹೊರ ರಾಜ್ಯದವರೇ ಹೆಚ್ಚು: ರಾಜ್ಯದಲ್ಲಿ ನಿರ್ಲಕ್ಷ್ಯಕೊಳಗಾದ ಪರಿತ್ಯಜಿಸಲ್ಪಟ್ಟ, ಕುಟುಂಬದಿಂದ ಬೇರ್ಪಟ್ಟ, ಬಾಲಕಾರ್ಮಿಕತೆ, ಬಾಲ್ಯವಿವಾಹ, ಪೋಕ್ಸೋ ಹಾಗೂ ಇನ್ನಿತರೆ ದೌರ್ಜನ್ಯ ಮತ್ತು ಶೋಷಣೆಗೊಳಗಾದ ಮಕ್ಕಳಿಗೆ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಬಾಲಮಂದಿರಗಳಲ್ಲಿ ಆಶ್ರಯ, ಶಿಕ್ಷಣ, ವಸತಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಇರುವ ಒಟ್ಟು 62 ಬಾಲಕ ಮತ್ತು ಬಾಲಕಿಯರ ಬಾಲಮಂದಿರಗಳಲ್ಲಿ ಒಟ್ಟು 2,047 ಮಕ್ಕಳು ಆಶ್ರಯ ಪಡೆಯುತ್ತಿದ್ದಾರೆ. ಈ ಪೈಕಿ ಹೊರ ರಾಜ್ಯದ ಮಕ್ಕಳೇ ಹೆಚ್ಚಿದ್ದಾರೆ. ಬೆಂಗಳೂರಿನಲ್ಲಿರುವ 3 ಬಾಲಕರ ಬಾಲಮಂದಿ ರದಲ್ಲಿ 159 ಮಕ್ಕಳು ಮತ್ತು ಒಂದು ಬಾಲಕಿಯರ ಬಾಲಮಂದಿರದಲ್ಲಿ 46 ಬಾಲಕಿಯರು ಇದ್ದಾರೆ.

ಇವರಲ್ಲಿ ನೆರೆ ರಾಜ್ಯಗಳಾದ ಬಿಹಾರ, ಪಶ್ಚಿಮಬಂಗಾಳ, ಜಾರ್ಖಂಡ್‌, ನಾಗಲ್ಯಾಂಡ್‌ ಸೇರಿದಂತೆ ಅನ್ಯರಾಜ್ಯಗಳ ಮಕ್ಕಳೇ ಹೆಚ್ಚು. ಇಂತಹ ಮಕ್ಕಳಿಗೆ ಮೂರು ತಿಂಗಳ ಕಾಲ ಆಪ್ತಸಮಾಲೋಚನೆ ನಡೆಸಿದ ನಂತರ, ಆ ಮಕ್ಕಳ ಪೋಷಕರು ಅಥವಾ ಮೂಲ ವಿಳಾಸ ತಿಳಿದಿದ್ದೇ ಆದಲ್ಲಿ ಆ ಮಗುವನ್ನು ಕುಟುಂಬಸ್ಥರೊಂದಿಗೆ ಸೇರಿಸಲಾಗುತ್ತದೆ. ಇಲ್ಲವಾದಲ್ಲಿ ಬಾಲಮಂದಿರದಲ್ಲಿಯೇ 18 ವರ್ಷದವರೆಗೆ ಆಶ್ರಯ ನೀಡಲಾಗುತ್ತದೆ. ನಗರದಲ್ಲಿ ಸುಮಾರು 20 ಬುದ್ಧಿಮಾಂಧ್ಯ ಮಕ್ಕಳಿಗೂ ಆಶ್ರಯ ನೀಡಲಾಗಿದೆ. ಉಳಿದಂತೆ ಜಿಲ್ಲಾವಾರು ಬಾಲಮಂದಿರಗಳಲ್ಲಿ ಕುಟುಂಬದ ಆರ್ಥಿಕ ವ್ಯವಸ್ಥೆ, ಪೋಷಕರ ಹಿಂಸೆ ಅಥವಾ ಇನ್ನಿತರೆ ಕಾರಣಗಳಿಂದ ಮಕ್ಕಳನ್ನು ಬಾಲಮಂದಿರಗಳಿಗೆ ಸೇರಿಸಲಾಗುತ್ತದೆ. ಇಲ್ಲಿ ಅನಾಥ ಮಕ್ಕಳೂ ವಾಸವಾಗಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

“ಕಾಮನಬಿಲ್ಲು’, “ಮುಗ್ಧ’ ಕಿರುಚಿತ್ರ ಪ್ರದರ್ಶನ: ತಮ್ಮದಲ್ಲದ ತಪ್ಪಿಗೆ ಅಥವಾ ಇನ್ನಾವುದೊ ಸಮಸ್ಯೆಗೆ ಸಿಲುಕಿಕೊಂಡು ಕಾನೂನು ಸಂಘರ್ಷಕ್ಕೊಳಗಾಗಿ ಬಾಲ ಮಂದಿರಗಳಲ್ಲಿ ಆರೈಕೆ ಪಡೆದುಕೊಳ್ಳುತ್ತಿ ರುವ ಮಕ್ಕಳ ಮನಃಪರಿವರ್ತನೆಗೆಂದು “ಕಾಮನಬಿಲ್ಲು ಮತ್ತು “ಮುಗ್ಧ’ ಎಂಬ ಎರಡು ಕಿರುಚಿತ್ರಗಳನ್ನೂ ನಿರ್ಮಿಸಲಾಗಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರುವ ಬಾಲ ಮಂದಿರಗಳಲ್ಲಿನ ಮಕ್ಕಳಿಗೆ ಈ ಎರಡು ಚಿತ್ರಗಳನ್ನು ಪ್ರದರ್ಶಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಮುಂದಾಗಿದೆ. ಸುಮಾರು 50 ನಿಮಿಷ ಇರುವ ಕಾಮನಬಿಲ್ಲು ಮತ್ತು ಮುಗ್ಧ ಕಿರುಚಿತ್ರಗಳು ಮಕ್ಕಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಚಿತ್ರಗಳಾಗಿವೆ. ಕಾಮನಬಿಲ್ಲು ಕಿರುಚಿತ್ರವನ್ನು ನಗರದ ನಿಮ್ಹಾನ್ಸ್‌ ಆಸ್ಪತ್ರೆಯ ಸಿಬ್ಬಂದಿ ರಚಿಸಿದ್ದು, ಭೌತಿಕ ಹಾಗೂ ಮಾನಸಿಕ ದೃಢತೆಯ ಬಗ್ಗೆ ಮತ್ತು ಸಮಾಜದಲ್ಲಿ ಎದುರಿಸಬೇಕಾದ ಪರಿಸ್ಥಿತಿಗಳ ಕುರಿತ ಚಿತ್ರವಾಗಿದೆ. ಇನ್ನೂ “ಮುಗ್ಧ’ ಕಿರುಚಿತ್ರವನ್ನು ಕಾಮಿಡಿ ಕಿಲಾಡಿಯ ಲೋಕೇಶ್‌ ನಿರ್ದೇಶನ ಮಾಡಿದ್ದು, ಈ ಚಿತ್ರದಲ್ಲಿ ಮಕ್ಕಳ ಭಿಕ್ಷಾಟನೆ ಮತ್ತು ಮಕ್ಕಳ ಸಾಗಾಣಿಕೆಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಜಾಗೃತಿ ಮೂಡಿಸಲಾಗಿದೆ.

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next