ಗಂಗಾವತಿ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಾಮೂಹಿಕ ಪ್ರಾರ್ಥನೆ ವೇಳೆ ಯಾವುದೇ ರಾಜಕಾರಣಿಗಳು ಭಾಷಣ ಮಾಡಲು ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ ಅಲಿಖಾನ್ ಅಭಿಪ್ರಾಯ ವ್ಯಕ್ತಪಡಿಸುವ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಎಸ್. ಬಿ .ಖಾದ್ರಿ ಹಾಗೂ ಅವರ ಸಂಗಡಿಗರು ಅಲಿಖಾನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದ ಘಟನೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪೂರ್ವಭಾವಿ ಶಾಂತಿ ಸಭೆಯ ಸಂದರ್ಭದಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಲು ಪೊಲೀಸರವರು ಅವಕಾಶ ಕೊಟ್ಟಿದ್ದರು.
ಈ ಸಂದರ್ಭದಲ್ಲಿ ಎಸ್.ಬಿ. ಖಾದ್ರಿ ಮಾತನಾಡಿ, ಹಬ್ಬವನ್ನು ಶಾಂತಿ ಸೌರ್ಯದ ಆಚರಿಸಲು ಮನವಿ ಮಾಡಿದರು. ನಂತರ ಅಲಿ ಖಾನ್ ಅವರು ಮಾತನಾಡುವ ವೇಳೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಹೊರತುಪಡಿಸಿ ರಾಜಕೀಯ ಭಾಷಣಕ್ಕೆ ಅವಕಾಶ ಕಲ್ಪಿಸಬಾರದು .ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾರ್ಥನೆ ಅವಧಿಯನ್ನು ಬದಲಾಯಿಸಬೇಕು ಎಂದು ಅಭಿಪ್ರಾಯ ಹೇಳಿದರು. ಆಗ ಎಸ್ ಬಿ ಖಾದ್ರಿ ಹಾಗೂ ಅವರ ಸಂಗಡಿಗರು ಆಕ್ಷೇಪ ವ್ಯಕ್ತಪಡಿಸಿ ಅಲಿಖಾನವರು ಗಂಗಾವತಿಯ ಸ್ಥಳಿಯರಲ್ಲ ಅವರು ಗಂಗಾವತಿ ಈದ್ಗಾ ಮೈದಾನದ ಕಾರ್ಯ ಚಟುವಟಿಕೆ ಬಗ್ಗೆ ಮಾತನಾಡಬಾರದು ಎಂದು ಗಲಾಟೆ ಶುರು ಮಾಡಿದರು. ಆಗ ಡಿವೈಎಸ್ಪಿ ಸಿದ್ದಲಿಂಗನಗೌಡ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಎಲ್ಲರನ್ನೂ ಶಾಂತ ಗೊಳಿಸಿದರು.
ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಯಾರು ಸಹ ವಾಗ್ವಾದ ಮಾತುಗಳ ನಾಡಬಾರದು ಎಂದು ಸೂಚನೆ ನೀಡಿದರು. ಶಾಂತಿ ಸಭೆಯನ್ನು ಮೊಟಕುಗೊಳಿಸಿ ಎಲ್ಲರನ್ನೂ ಮನೆಗೆ ಕಳಿಸಲಾಯಿತು.