Advertisement
ಪ್ರವಾದಿ ಇಬ್ರಾಹಿಮರಿಗೆ ಬೀವಿ ಹಾಜಿರಾ ಮತ್ತು ಬೀವಿ ಸಾರಾ ಎಂಬೀರ್ವರು ಪತ್ನಿ ಯಂದಿರು. ಬದುಕಿನ ಬಹುಕಾಲ ಸಂದುಹೋಗಿ, ಇಳಿವಯಸ್ಸಾದರೂ ಅವರಿಗೆ ಸಂತಾನ ಪ್ರಾಪ್ತಿ ಯಾಗಲಿಲ್ಲ. ಸಂತಾನದ ಹಂಬಲ ಅವರನ್ನು ಎಷ್ಟು ಕಾಡುತ್ತಿತ್ತೆಂದರೆ, ತನಗೆ ಸಂತಾನ ಪ್ರಾಪ್ತಿಯಾದರೆ, ಆ ಕಂದನನ್ನು ಪರಮ ಕೃಪಾಳು ಅಲ್ಲಾಹನೇ ಕೇಳಿದರೂ, ಕೊಡಲು ತಾನು ಸದಾ ಸಿದ್ಧ- ಎಂದು ಪ್ರವಾದಿ ಇಬ್ರಾಹಿಮರು ಭಾವೋ ದ್ವೇಗದಿಂದ ನುಡಿದಿದ್ದರು. ಕೊನೆಗೂ ದೈವಾನು ಗ್ರಹದಿಂದ, ಬೀವಿ ಹಾಜಿರಾ ಇಸ್ಮಾಯಿಲ್ ಎಂಬ ಮಗುವನ್ನೂ, ಬೀವಿ ಸಾರಾ, ಇಸ್‌ಹಾಕ್ ಎಂಬ ಕಂದನನ್ನೂ ಹಡೆದರು. ಮಗು ಇಸ್ಮಾಯಿಲ್ ಮಾತಾಪಿತರ ಪ್ರೀತಿಯ ಕಣ್ಮಣಿಯಾಗಿ ಬೆಳೆಯುತ್ತಾ, ಇಬ್ಬರಿಗೂ ಪಂಚಪ್ರಾಣ ಎನಿಸಿ ಕೊಂಡರು.
Related Articles
Advertisement
ಪ್ರವಾದಿ ಇಬ್ರಾಹಿಮರಿಗೆ ಕಾದಿದ್ದ ಸತ್ವಪರೀಕ್ಷೆ ಇಷ್ಟರಲ್ಲಿಯೇ ಮುಕ್ತಾಯವಾಗಲಿಲ್ಲ. ಒಂದು ರಾತ್ರಿ ಪ್ರವಾದಿ ಇಬ್ರಾಹಿಮರಿಗೆ ಕನಸಿನಲ್ಲಿ ದೇವದೂತ ಜಿಬ್‌ರೀಲರು ಹಾಜರಾಗಿ, “ಇಬ್ರಾಹಿಮರೇ, ನಿಮ್ಮ ಮುದ್ದು ಕಂದ ಇಸ್ಮಾಯಿಲರನ್ನು ಅಲ್ಲಾಹನ ಹೆಸರಿನಲ್ಲಿ ಬಲಿ ನೀಡುವಂತೆ ದೈವಾಜ್ಞೆಯಾಗಿದೆ” ಎಂದರು. ಪ್ರವಾದಿ ಇಬ್ರಾಹಿಮರು ಮಾತ್ರ ದುರಂತಕ್ಕೆ ಎಳ್ಳಷ್ಟೂ ಅಳುಕದೆ, ಆಗ ತಾನೇ ಜಗತ್ತನ್ನು ಕಾಣುತ್ತಿದ್ದ ಧೀರ ಬಾಲಕ ಇಸ್ಮಾಯಿಲರಿಗೆ ದೈವಾಜ್ಞೆಯನ್ನರುಹಿದಾಗ, ಇಸ್ಮಾಯಿಲ್ ಎಳ್ಳಷ್ಟು ಅಳುಕದೆ, ದೈವಾಜ್ಞೆಗೆ ತಲೆ ಬಾಗಿ, ಬಲಿದಾನಕ್ಕೆ ಸೀಮಿತವಾದ “ಮೀನಾ” ಪ್ರದೇಶಕ್ಕೆ ಹೊರಡಲು ಮುಂದಾಗುತ್ತಾರೆ. “ಮೀನಾ’ ತಲುಪುತ್ತಲೇ ಬಾಲಕ ಇಸ್ಮಾಯಿಲ್ ಶಿಲೆಯೊಂದರ ಮೇಲೆ ತಲೆ ಯಿಟ್ಟು, ನಿರ್ವಿಕಾರ ಚಿತ್ತದಿಂದ ಮಲಗಲು, ಪ್ರವಾದಿ ಇಬ್ರಾಹಿಮರು ತನ್ನ ಕಣ್ಣಿಗೆ ವಸ್ತ್ರ ಕಟ್ಟಿ, ಅಲ್ಲಾಹನ ನಾಮದೊಂದಿಗೆ, ಹರಿತವಾದ ಕತ್ತಿ ಯನ್ನು, ತನ್ನ ಪ್ರೀತಿಯ ಕಂದ ಇಸ್ಮಾಯಿಲರ ಕತ್ತಿನಲ್ಲಿ ಕ್ಷಣಾರ್ಧದಲ್ಲಿ ಹಾಯಿಸಿದರು.
ಕರ್ತವ್ಯವನ್ನು ನಿರ್ವಹಿಸಿದ ಆತ್ಮ ಸಂತೃಪ್ತಿಯಿಂದ, ಪ್ರವಾದಿ ಇಬ್ರಾಹಿಮರು ಕಣ್ಣಿಗೆ ಕಟ್ಟಿದ ವಸ್ತ್ರವನ್ನು ಬಿಚ್ಚಿ ನೋಡಲು, ಅದೇನು ಅದ್ಭುತವೋ ಎಂಬಂತೆ, ಬಲಿದಾನದ ಸ್ಥಳದಲ್ಲಿ ಟಗರೊಂದು ರುಂಡ-ಮುಂಡ ಬೇರೆ ಬೇರೆ ಯಾಗಿ ಬಿದ್ದಿತ್ತು. ಪಕ್ಕದಲ್ಲಿಯೇ ಇಸ್ಮಾಯಿಲರು ನಿರ್ವಿಕಾರ ಚಿತ್ತದಿಂದ ನಿಂತಿದ್ದರು. ಅಲ್ಲಾಹನಿಗೆ ಬೇಕಾದುದು ಪ್ರವಾದಿ ಇಬ್ರಾಹಿಮರ ಸತ್ವ ಪರೀ ಕ್ಷೆಯೇ ಹೊರತು ಬಾಲಕ ಇಸ್ಮಾಯಿಲರ ಪ್ರಾಣವಲ್ಲ.
ಪ್ರವಾದಿ ಇಬ್ರಾಹಿಮರು ಈ ಅಭೂತಪೂರ್ವ ಸತ್ವ ಪರೀಕ್ಷೆಯಲ್ಲಿ ಜಯಿಸಿ, “ಖಲೀಲುಲ್ಲಾ’ ಎಂದು ಅಲ್ಲಾಹ ನಿಂದ ಸಂಬೋ ಧಿಸಲ್ಪಟ್ಟಿತು. ಪ್ರವಾದಿ ಇಬ್ರಾಹಿಮರ ಪುತ್ರ ಬಲಿದಾನದ ನೆನಪನ್ನು ಶಾಶ್ವತ ವಾಗಿರಿಸಲು ಬಕ್ರೀದಿನಂದು ಪ್ರಾಣಿ ಬಲಿ ನೀಡುವ (ಕುರ್ಬಾನಿ) ಪದ್ಧತಿಯಿದ್ದು, ಪ್ರಾಣಿ ಬಲಿ ಎಂಬುದು ಕೇವಲ ಸಾಂಕೇತಿಕವಾಗಿದೆ. ಇಂದು ಪ್ರಾಣಿ ಬಲಿ ನೀಡಲು ಸಿದ್ಧರಾದವರು, ಮುಂದೆ ತಮ್ಮ ಜೀವನದಲ್ಲಿ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂಬುದೇ ಈ ಬಲಿದಾನದ ಸಂದೇಶ. ಕರ್ತವ್ಯದ ಮುಂದೆ ತಡೆಯಾಗಿ ಬರುವ ಸರ್ವ ಪ್ರಾಪಂಚಿಕ ಮೋ ಹಗಳ ವಿರುದ್ಧ ನಡೆಸಿದ ಸತ್ವ ಪರೀಕ್ಷೆಯಾಗಿದೆ.
ಪ್ರವಾದಿ ಇಬ್ರಾಹಿಮರು ಹಾಗೂ ಇಸ್ಮಾಯಿಲರು ಮನುಕುಲದ ಕಲ್ಯಾಣಕ್ಕಾಗಿ, ಅಪೂರ್ವ ತ್ಯಾಗದ ಮೂಲಕ, ವಿಶ್ವದ ಜನತೆಗೆ ಉದಾತ್ತ ಮೇಲ್ಪಂಕ್ತಿಯೊಂದನ್ನು ಹಾಕಿ ಕೊಟ್ಟರು. ಪ್ರವಾದಿ ಇಬ್ರಾಹಿಮ್ ಹಾಗೂ ಇಸ್ಮಾಯಿಲರು, ಪವಿತ್ರ ಮಕ್ಕಾದಲ್ಲಿ ನಿರ್ಮಿಸಿದ, ಭವ್ಯ ಕಾಬಾ ಪ್ರಾರ್ಥನಾ ಮಂದಿರ, ಪ್ರತೀ ವರ್ಷವೂ ವಿಶ್ವದೆಲ್ಲೆಡೆಗಳಿಂದ ಅಸಂಖ್ಯಾತ ಮುಸ್ಲಿಮರನ್ನು ಹಜ್ ಮತ್ತು ಉಮ್ರಾ ನಿರ್ವಹಣೆಗಾಗಿ, ತನ್ನೆಡೆಗೆ ಆಕರ್ಷಿಸುತ್ತದೆ. ವಿವಿಧ ರಾಷ್ಟ್ರಗಳ, ವಿವಿಧ ಭಾಷೆಗಳನ್ನಾಡುವ ಮುಸ್ಲಿಮರೆಲ್ಲರೂ ಮಕ್ಕಾದಲ್ಲಿ ಒಂದಾಗುತ್ತಾರೆ. ಪವಿತ್ರ ಕಾಬಾ, ಮಾನವೀಯ ಏಕತೆಯ ಮಹಾದ್ಯೋತಕ ಹಾಗೂ ವಿಶ್ವ ಬಾಂಧವ್ಯದ ಪ್ರತೀಕವಾಗಿದೆ. ಮಕ್ಕಾದಲ್ಲಿನ ಈ ಹೃದಯಸ್ಪರ್ಶಿ ವಾತಾವರಣವು ಸಮಾನತೆ, ಏಕತೆ, ಸೌಹಾರ್ದತೆ ಮತ್ತು ವಿಶ್ವ ಬಾಂಧವ್ಯವನ್ನು ಮನುಕುಲಕ್ಕೆ ಸಾರುತ್ತದೆ.
ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದ್‌ನ ಇತಿಹಾಸ ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಆದರ್ಶ ಧ್ಯೇಯಗಳೊಂದಿಗೆ, ಇಂದು ಬಕ್ರೀದನ್ನು ವಿಶ್ವದಾದ್ಯಂತ ಮುಸ್ಲಿಮರೆಲ್ಲರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು