ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಶಿವಾಜಿನಗರ ಸುತ್ತಮುತ್ತ ಜಾನುವಾರುಗಳನ್ನು ವಧಿಸಲು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ವಕೀಲರನ್ನು ಕೋರ್ಟ್ ಕಮಿಷನರ್‌ಗಳಾಗಿ ಹೈಕೋರ್ಟ್ ನೇಮಿಸಿದೆ. ಅಕ್ರಮ ಜಾನುವಾರು ಸಂಗ್ರಹ ಹಾಗೂ ಸಾಗಾಣಿಕೆ ಆರೋಪದ ಕುರಿತು ಪರಿಶೀಲನೆ ನಡೆಸಿ ಸೆ.4ರಂದು ವರದಿ ನೀಡುವಂತೆಯೂ ಹೈಕೋರ್ಟ್ ಸೂಚನೆ ನೀಡಿದೆ.
ಜಾನುವಾರುಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆ.30ರಂದೇ ಶಿವಾಜಿನಗರ ಪೊಲೀಸರಿಗೆ ಆದೇಶಿಸಿದೆ. ಆದರೆ ಈವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಧೀನ ನ್ಯಾಯಾಲಯದ ಆದೇಶವನ್ನು ಪಾಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಗೋ ಗ್ಯಾನ್ ಫೌಂಡೇಷನ್ (ಎನ್‌ಜಿಒ) ಸದಸ್ಯರಾದ ಕವಿತಾ ಜೈನ್ ಹಾಗೂ ಜೊಶೀನ್ ಆ್ಯಂಟನಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯಪೀಠ, ವಕೀಲರಾದ ಚಂದ್ರನಾಥ್ ಅರಿಗ ಹಾಗೂ ಅಕ್ಷತಾ ಅವರನ್ನು ಕೋರ್ಟ್ ಕಮಿಷನರ್‌ಗಳನ್ನಾಗಿ ನೇಮಿಸಿ, ಜಾನುವಾರುಗಳ ಅಕ್ರಮ ಸಂಗ್ರಹಣೆ ಹಾಗೂ ಸಾಗಾಣೆ ಆರೋಪದ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.
ಒಂದು ವೇಳೆ ಅಕ್ರಮವಾಗಿ ಜಾನುವಾರುಗಳ ಸಂಗ್ರಹಣೆ ಮಾಡಿರುವುದು ಕಂಡುಬಂದಲ್ಲಿ ತಕ್ಷಣ ಅವುಗಳನ್ನು ಅರ್ಜಿದಾರ ಎನ್‌ಜಿಒ ವೆಚ್ಚದಲ್ಲಿ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು. ಸ್ಥಳ ಪರಿಶೀಲನೆ ನಡೆಸುವ ಕೋರ್ಟ್ ಕಮಿಷನರ್‌ಗಳೊಂದಿಗೆ ಅರ್ಜಿದಾರರೂ ತೆರಳಬಹುದಾಗಿದ್ದು, ಪರಿಶೀಲನೆ ವೇಳೆ ಸೂಕ್ತ ಭದ್ರತೆ ಒದಗಿಸಬೇಕೆಂದು ಶಿವಾಜಿನಗರ ಪೊಲೀಸರಿಗೆ ನ್ಯಾಯಪೀಠ ಸೂಚಿಸಿತು.
ಅರ್ಜಿ ವಿಚಾರಣೆ ವೇಳೆ, ಅಧೀನ ನ್ಯಾಯಾಲಯದ ಆದೇಶವನ್ನು ಏಕೆ ಪಾಲಿಸಲಾಗಿಲ್ಲ ಎಂದು ಸರ್ಕಾರಿ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ಅಭಿಯೋಜಕ ರಾಚಯ್ಯ, ಆದೇಶ ಪಾಲನೆಯ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು.