ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಭಜರಂಗ್ 65 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಜೋರ್ಡಾನ್ ಒಲಿವರ್ ಅವರನ್ನು 12-3 ಭಾರೀ ಅಂತರದಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಈ ಪದಕವನ್ನು ಪಾಕಿಸ್ಥಾನದ ಕೈಯಿಂದ ಸುರಕ್ಷಿತವಾಗಿ ತವರಿಗೆ ಮರಳಿದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅರ್ಪಿಸಿ ಕ್ರೀಡಾಸ್ಫೂರ್ತಿ ಮೆರೆದರು. ಈ ಚಿನ್ನದೊಂದಿಗೆ ಭಜರಂಗ್ ಗರಿಷ್ಠ ರ್‍ಯಾಂಕಿಂಗ್ ಅಂಕ ಗಳಿಸಿದ್ದಾರೆ.
Advertisement
“ಈ ಚಿನ್ನವನ್ನು ನಾನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅರ್ಪಿಸುತ್ತೇನೆ. ಅವರೇ ನನಗೆ ಸ್ಫೂರ್ತಿ. ಮುಂದೊಂದು ದಿನ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಬೇಕೆಂಬ ಆಸೆಯಿದೆ’ ಎಂದು ಭಜರಂಗ್ ಹೇಳಿದ್ದಾರೆ. ಇದು ಭಜರಂಗ್ ಗೆದ್ದ 10ನೇ ಅಂತಾರಾಷ್ಟ್ರೀಯ ಪದಕವಾಗಿದೆ. ಕಳೆದ ವರ್ಷ ಭಜರಂಗ್ ಕಾಮನ್ವೆಲ್ತ್ ಮತ್ತು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕಳೆದ 5 ಟೂರ್ನಿಗಳಲ್ಲಿ ಅವರು ಒಟ್ಟು 4 ಚಿನ್ನ, ಒಂದು ಬೆಳ್ಳಿ ಪದಕ ಗೆದ್ದಂತಾಯಿತು. ಪುರುಷರ 61 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಂದೀಪ್ ತೋಮರ್ ಬೆಳ್ಳಿ ಪದಕ ಜಯಿಸಿದರು.
ಇದಕ್ಕೂ ಮುನ್ನ ನಡೆದ ವನಿತೆಯರ 59 ಕೆಜಿ ವಿಭಾಗ ಸ್ಪರ್ಧೆಯಲ್ಲಿ ಪೂಜಾ ದಂಡಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಮತ್ತು 59 ಕೆಜಿ ವಿಭಾಗದಲ್ಲಿ ಸರಿತಾ ಮೋರ್ ಬೆಳ್ಳಿ ಪದಕ ಗೆದ್ದರು. ವಿನೇಶ್ ಪೋಗಟ್ ಚಿನ್ನದ ಭರವಸೆ
ಭಾರತಕ್ಕೆ ವಿನೇಶ್ ಪೋಗಟ್ ಅವರಿಂದ ಮತ್ತೂಂದು ಚಿನ್ನದ ಪದಕ ಸಿಗುವ ಸಾಧ್ಯತೆ ಇದೆ. ವಿನೇಶ್ 53 ಕೆಜಿ ವಿಭಾಗದ ಫೈನಲ್‌ನಲ್ಲಿ ಚೀನದ ಖೀನ್ಯು ಪಾಂಗ್ ಅವರನ್ನು ಎದುರಿಸಲು ಸಿದ್ಧರಾಗಿದ್ದಾರೆ. ಸೆಮಿಫೈನಲ್‌ನಲ್ಲಿ ವಿನೇಶ್ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಸಾರಾ ಹಿಲೆ ಬ್ರಾಂಡ್ ವಿರುದ್ಧ ಜಯಿಸಿದ್ದರು.
50 ಕೆಜಿ ವಿಭಾಗದಿಂದ 53 ಕೆಜಿಗೆ ಬದಲಾಯಿಸಿಕೊಂಡ ಬಳಿಕ ವಿನೇಶ್‌ಗೆ ಸ್ಪರ್ಧಿಸಿದ ಮೊದಲ ಕೂಟ ಇದಾಗಿದೆ.