Advertisement

ಭಜರಂಗ ಪೂನಿಯಾ ಬಂಗಾರದ ಯುಗ 

03:25 AM Oct 27, 2018 | |

ನಾಡಹಬ್ಬ ದಸರಾ ವೇಳೆ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ದಸರಾ ಕುಸ್ತಿ ಸ್ಪರ್ಧೆ ನಡೆದವು. ಚಿನ್ನದ ಬಳೆ, ಅಖಾಡ ಬಳೆ, ಗದೆ, ಬೆಳ್ಳಿ ಕಡಗ ಮೊದಲಾದವುಗಳನ್ನು ಕ್ರಮವಾಗಿ ಕುಸ್ತಿ ಪಟುಗಳು ತಮ್ಮದಾಗಿಸಿಕೊಂಡರು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ದೂರದ ಹಂಗೇರಿಯಾದಲ್ಲಿನ  ಬುಡಾಫೆಸ್ಟ್‌ನಲ್ಲಿ ಭಾರತದ ಭರವಸೆ ಭಜರಂಗ್‌ ಪೂನಿಯಾ ಕೂಡ ಇದೇ ಪ್ರೀಸ್ಟೈಲ್‌ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿ ಬೆಳ್ಳಿ ಪದಕ ಗೆದ್ದರು. 

Advertisement

ವಿಶ್ವ ಚಾಂಪಿಯನ್‌ಶಿಪ್‌ನ 65 ಕೆ.ಜಿ ವಿಭಾಗದಲ್ಲಿ ಜಪಾನ್‌ನ 19 ವರ್ಷದ ತಕುಟೋ ಒಟೊಗೊರೋ ಎದುರು ಪೂನಿಯಾ ಪರಾಭವಗೊಂಡರು ಎಂದು ಪರಿಗಣಿಸಬೇಕಿಲ್ಲ. ಆ ಪಂದ್ಯದ ಹಿನ್ನೆಡೆಯ ನಂತರವೂ ಭಜರಂಗ್‌ ಪೂನಿಯಾ ಭಾರತದ ಕುಸ್ತಿ ಇತಿಹಾಸದ ಪ್ರೀಸ್ಟೈಲ್‌ ವಿಭಾಗದಲ್ಲಿ ವಿಶ್ವ ಮಟ್ಟದ ಎರಡೆರಡು ಪದಕ ಗೆಲ್ಲುವ ಮೂಲಕ ಚರಿತ್ರಾರ್ಹ ಸಾಧನೆ ಮಾಡಿದ್ದಾರೆ ಎನ್ನುವುದು ವಿಶೇಷ. 

ಚಿನ್ನದ ಹಾದಿ!
ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಭಜರಂಗ್‌ ಪೂನಿಯಾ ಚಿನ್ನದ ಪದಕವನ್ನೇ ತಂದಿದ್ದವರು, ಫೈನಲ್‌ನಲ್ಲಿ ಅವರೇ ಗೆದ್ದಿದ್ದರು. ಕೊನೆಯ 10 ತಿಂಗಳಿನಲ್ಲಿ ಹಂಗೇರಿ, ದಕ್ಷಿಣ ಕೊರಿಯ, ಮಂಗೋಲಿಯ ಹಾಗೂ ಕ್ಯೂಬಾಗಳಲ್ಲಿ 4 ಅಂತಾರಾಷ್ಟ್ರೀಯ ಸ್ಪರ್ಧೆಗಳ ಚಿನ್ನದ ಪದಕ ಗೆಲ್ಲುವುದು ಕಡಿಮೆ ಸಾಧನೆಯಲ್ಲ. ಆ ಮಟ್ಟಿಗೆ 2018 ಚಿನ್ನದ ವರ್ಷ, ಬುಡಾಫೆಸ್ಟ್‌ನಲ್ಲಿಯೂ ಸೆಮಿಫೈನಲ್‌ನಲ್ಲಿ ಚೂರು ತಿಣುಕಿದ್ದು ಬಿಟ್ಟರೆ ಫೈನಲ್‌ ಹಂತ ತಲುಪುವಲ್ಲಿ ಅವರಿಗೆ ಸ್ಪರ್ಧೆಯೇ ಎದುರಾಗಿರಲಿಲ್ಲ. 

ಐದು ವರ್ಷಗಳ ಹಿಂದೆ 2013ರಲ್ಲಿ ಇದೇ ಜಾಗದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಪಾದಾರ್ಪಣೆಗೈದು ಕಂಚಿನ ಪದಕ ಸಂಪಾದಿಸಿದ್ದ ಭಜರಂಗ್‌ ಅದೇ ವರ್ಷ ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಬೆಳ್ಳಿ  ಗೆದ್ದಿದ್ದರು. 2014ರಲ್ಲಿ ಅವರನ್ನು ಕಾಮನ್‌ವೆಲ್ತ್‌, ಏಷ್ಯಾಡ್‌ನ‌ಲ್ಲಿ ಬೆಳ್ಳಿ ಹುಡುಕಿಕೊಂಡು ಬಂದಿತ್ತು. 2017ರಲ್ಲಿನ ಏಷ್ಯನ್‌ ಚಾಂಪಿಯನ್‌ಶಿಪ್‌ನ ಚಿನ್ನದ ಪದಕದಿಂದ ಹಳದಿ ಲೋಹದ ಮೋಹ ಆರಂಭವಾಗಿದ್ದು 2018ರಲ್ಲಿ ಮುಂದುವರೆದಿತ್ತು. ಕುಸ್ತಿಯಲ್ಲಿ ದೇಹದ ತೂಕವನ್ನು ಅವಲಂಬಿಸಿ ಸ್ಪರ್ಧಾ ವರ್ಗ ನಿಗದಿಯಾಗುವುದರಿಂದ ಎದುರಾಳಿಗಳು ಬದಲಾಗುತ್ತಿರುತ್ತಾರೆ. ಕಳೆದ ವರ್ಷ 62 ಕೆ.ಜಿಯಿದ್ದ ಭಜರಂಗ್‌ ಈಗ 65 ಕೆಜಿ!

ನೆಲದ ಪರಂಪರೆಯ ಮುಂದುವರಿಕೆ!
ಮೂರು ಬಾರಿಯ ಒಲಿಂಪಿಯನ್‌ ಚಾಂಪಿಯನ್‌ ಗಾರ್ಜಿಯಾದ ಶಾಕೋ ಬೆನಿಟಿನಿಡಿಸ್‌ ಪ್ರಸ್ತುತ ಪೂನಿಯರ ಕೋಚ್‌. ಹರ್ಯಾಣದಲ್ಲಿನ ಗೊಹಾನಾದ ಯೋಗೇಶ್ವರ ದತ್‌ ಟ್ರೆçನಿಂಗ್‌ ಸೆಂಟರ್‌ ಭಜರಂಗ್‌ರ ತರಬೇತಿ ಅಖಾಡ. ಮಾಜಿ ಕುಸ್ತಿ ಪಟು, ಒಲಿಂಪಿಕ್ಸ್‌ನ ಕಂಚಿನ ಪದಕ ಸಾಧಕ ದತ್‌ ಅವರು ಪೂನಿಯಾರ ಆದರ್ಶ, ಕೋಚ್‌, ಬೆಂಬಲಿಗ… ಎಲ್ಲ. ಬೆನಿಟಿನಿಡಿಸ್‌ ಪರಿಶೀಲಿಸಿದಂತೆ, ಪೂನಿಯಾ ಅವರ ಕಾಲುಗಳ ಸಾಮರ್ಥ್ಯದ್ದೆ ಸಮಸ್ಯೆ, ಅವರ ಕಾಲಿಗೆ ಕೈಹಾಕಿದ ಎದುರಾಳಿ ಪಂದ್ಯದ ಮೇಲೆ ಹಿಡಿತ ಸಾ ಧಿಸುತ್ತಾರೆ. ಕೊನೆಯ ಕೆಲ ಕ್ಷಣಗಳಲ್ಲಿ ವಿಪರೀತ ಪಾಯಿಂಟ್‌ ಕೊಡುವುದು ಪೂನಿಯಾ ಲೋಪ. ಯಾರೋ ಹೇಳುತ್ತಿದ್ದರು, ಭಾರತದ ಬೌಲರ್‌ ಕಡೆಯ ಸ್ಲಾಗ್‌ ಓವರ್‌ನಲ್ಲಿ ರನ್‌ ಬಿಟ್ಟುಕೊಡುವುದು, ಹಾಕಿ ತಂಡ ಕಡೆಯ ಕೆಲ ನಿಮಿಷಗಳಲ್ಲಿ ಗೋಲುಗಳನ್ನು ಮುಕ್ತವಾಗಿ ಆಹ್ವಾನಿಸುವುದು ಈ ನೆಲದ ಪರಂಪರೆ!

Advertisement

ಎರಡು ತಿಂಗಳ ಹಿಂದಿನ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಪದಕ ಪಟ್ಟಿಯಲ್ಲಿ ಮೊತ್ತಮೊದಲ ಚಿನ್ನದ ಪದಕ ದಾಖಲಾದದ್ದು ಪೂನಿಯಾ ಸಾಹಸದಿಂದ. ಫೈನಲ್‌ನಲ್ಲಿ ಜಪಾನ್‌ನ ಡೈಚಿ ಟಕಟಾನಿ ಎದುರು 6-0ಯ ಮುನ್ನಡೆ ಪಡೆದಿದ್ದ ಭಜರಂಗ್‌ ಕಡೆಯ ಕೆಲ ಕ್ಷಣಗಳಲ್ಲಿ ಕಾಲಿಗೆ ಕೈ ಹಾಕಿದ ಎದುರಾಳಿಯಿಂದ ತತ್ತರಿಸಿದ್ದರು. ಅಂತೂ 10-8ರಿಂದ ಹಣಾಹಣಿಯಲ್ಲಿ ಗೆದ್ದಿದ್ದರಾದರೂ ಅಪಾಯದ ಕೆಂಪು ದೀಪ ಉರಿಯುತ್ತಲೇ ಇದೆ. ಬೆನಿಟಿನಿಡಿಸ್‌ ತಮಾಷೆ ಮಾಡುತ್ತಾರೆ, ಪುನಿಯ ಕಾಲುಗಳಿಗೆ ಕತ್ತರಿ ಹಾಕುವುದೇ ಸೈ!

ಒಲಿಂಪಿಕ್ಸ್‌ ಭರವಸೆ!
ಹೋಗಲಿ ಬಿಡಿ, ಇನ್ನು ಮುಂದಿನ ಎರಡು ತಿಂಗಳು ಪುನಿಯಗೆ ಸ್ಪರ್ಧಾಕಣದಿಂದ ವಿಶ್ರಾಂತಿ. ಈ ವೇಳೆಯಲ್ಲಿ ಕಾಲಿನ ರಕ್ಷಣೆಯ ದೌರ್ಬಲ್ಯಗಳನ್ನು ಮುಚ್ಚುವಂತಹ ತರಬೇತಿ ಕೊಡಬೇಕಾಗಿದೆ ಎಂದು ದತ್ತ ಹೇಳುತ್ತಾರೆ. ಮುಂದಿನ ವರ್ಷ ಅಸ್ಟಾನಾದಲ್ಲಿ ಒಲಿಂಪಿಕ್ಸ್‌ನ ಅರ್ಹತೆ ಒದಗಿಸಿಕೊಡುವ ವಿಶ್ವ ಚಾಂಪಿಯನ್‌ಶಿಪ್‌ ಸ್ಪರ್ಧೆ ನಡೆಯಲಿದೆ. ಅಲ್ಲಿಗೆ ತೆರಳಲು ಪೂನಿಯಾ ಸಿದ್ದರಾಗುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಪೂನಿಯಾ ಹೆಜ್ಜೆಗಳು ಮೂಡಿಸಿದ ಹುಮ್ಮಸ್ಸು ಕಡಿಮೆ. ಆದರೆ ಉತ್ತರ ಭಾರತದಲ್ಲಿ ತೊಡೆ ತಟ್ಟುವವರು ಹೆಚ್ಚುತ್ತಿದ್ದಾರೆ!

ದೇಶಿ ಕುಸ್ತಿ ಪಟ್ಟುಗಳೇ ಭಿನ್ನ!
ಭಾರತದ ಕುಸ್ತಿಪಟುಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ ಕೋಚ್‌ ವ್ಯವಸ್ಥೆ, ಹವಾಮಾನ ಇಲ್ಲಿನ ಸಮಸ್ಯೆ. ಸಾಮರ್ಥ್ಯ ಹೆಚ್ಚಿಸುವ ತರಬೇತಿಗೆ ಒತ್ತು ನೀಡಲಾಗುತ್ತದೆಯೇ ವಿನಃ ತಂತ್ರಗಾರಿಕೆಗೆ ಅಲ್ಲ. ಬೆಳಿಗ್ಗೆ ಏಳಕ್ಕೆ ಕುಸ್ತಿ ಅಕಾಡೆಮಿಗಳಲ್ಲಿ ತರಬೇತಿ ಆರಂಭವಾಗುತ್ತದೆ. ದೇಹ ಸನ್ನದ್ಧವಾಗದೆ ಅಭ್ಯಾಸ ಕೂಡದು. ವಿಶ್ವದೆಲ್ಲೆಡೆ ಬೆಳಿಗ್ಗೆ 11ರಿಂದ ತರಬೇತಿಗೆ ಸಿದ್ದರಾಗುತ್ತಾರೆ. ಭಾರತದಲ್ಲಿ ದೇಹ 10ರ ವೇಳೆಗಷ್ಟೇ ತರಬೇತಿಗೆ ಯುಕ್ತವಾಗುತ್ತದೆ. ಭಾರತೀಯ ಕುಸ್ತಿ ದಂಗಲ್‌ಗ‌ೂ ವಿಶ್ವದ ಫ್ರೀಸ್ಟೆçಲ್‌ ಕುಸ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೋಲಿಕೆಯೇ ಸಮ್ಮತವಲ್ಲ. ಇಲ್ಲಿನ ಕುಸ್ತಿ ಪಟುಗಳನ್ನು ವಿಶ್ವ ಸ್ಪರ್ಧೆಯ ಪಟುಗಳನ್ನಾಗಿ ಮಾರ್ಪಡಿಸುವುದು ಬಹಳ ಕಷ್ಟದ ಕೆಲಸ ಎಂದು ಗಾರ್ಜಿಯಾದ ಶಾಕೋ ಬೆನಿಟಿನಿಡಿಸ್‌ ದೃಢವಾಗಿ ಪ್ರತಿಪಾದಿಸುತ್ತಾರೆ.

ಗುರು ಸಾಗರ 

Advertisement

Udayavani is now on Telegram. Click here to join our channel and stay updated with the latest news.

Next