ಹೊಸದಿಲ್ಲಿ: ಏಶ್ಯನ್ ಚಾಂಪಿಯನ್ ಭಜರಂಗ್ ಪೂನಿಯ ನ್ಯೂಯಾರ್ಕ್‌ನ ಪ್ರತಿಷ್ಠಿತ “ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೇ 6ರಂದು ನಡೆಯಲಿರುವ ಈ ಕೂಟಕ್ಕೆ ಅಮೆರಿಕ ಆಡಳಿತ ಮಂಡಳಿ ಆಯ್ಕೆ ಮಾಡಿದ ಅಗ್ರ ಕುಸ್ತಿಪಟುಗಳಲ್ಲಿ ಭಜರಂಗ್ ಕೂಡ ಒಬ್ಬರಾಗಿದ್ದಾರೆ.
ಭಜರಂಗ್ ಈ ಕೂಟದಲ್ಲಿ 65 ಕೆಜಿ ವಿಭಾಗದಲ್ಲಿ 2 ಬಾರಿಯ ಯುಎಸ್ ಚಾಂಪಿಯನ್ ಯಿಯಾನ್ನಿ ಡೈಕೊ ಮಲಿಸ್ ಅವರನ್ನು ಎದುರಿಸಲಿದ್ದಾರೆ. ಡೈಕೊಮಲಿಸ್ 47 ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿದ್ದಾರೆ. ಭಜರಂಗ್ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, 9 ಅಂತಾರಾಷ್ಟ್ರೀಯ ಕೂಟಗಳಲ್ಲಿ 8 ಚಿನ್ನದ ಪದಕ ಗೆದ್ದ ಹೆಗ್ಗಳಿಕೆ ಹೊಂದಿದ್ದಾರೆ.
ಬಾಕ್ಸಿಂಗ್‌ನಲ್ಲಿ ವಿಕಾಸ್
“ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ಭಾರತದ ಕುಸ್ತಿಪಟು ಇದೇ ಮೊದಲ ಸಲ ಕಣಕ್ಕಿಳಿಯುತ್ತಿರ ಬಹುದು, ಆದರೆ ಬಾಕ್ಸಿಂಗ್‌ನಲ್ಲಿ ವಿಕಾಸ್ ಕೃಷ್ಣನ್ ಈಗಾಗಲೇ ಇಲ್ಲಿ ಸ್ಪರ್ಧಿಸಿದ್ದಾರೆ. ಅಮೆರಿಕದ ನೊಹ್ ಕಿಡ್ ವಿರುದ್ಧ ಮೊದಲ ವೃತ್ತಿಪರ ಬೌಟ್ ಗೆದ್ದಿದ್ದರು.
ಖುಷಿ ಜತೆಗೆ ಹೆದರಿಕೆ!
“ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ವಿಶ್ವದಲ್ಲೇ ಅತೀ ದೊಡ್ಡದಾದ ಮತ್ತು ಪ್ರಖ್ಯಾತ ಒಳಾಂಗಣ ಕ್ರೀಡಾಂಗಣ. ಇಲ್ಲಿ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ. ಈ ಆಹ್ವಾನ ಉತ್ತಮ ಕುಸ್ತಿಪಟುವಾಗಲು ನೆರವಾಗಲಿದೆ. ಇಲ್ಲಿ ಆಹ್ವಾನ ಪಡೆದ ಮೊದಲ ಭಾರತೀಯ ಎಂಬ ಸಂಗತಿ ಖುಷಿ ಕೊಟ್ಟಿದೆ. ಆದರೆ ನನ್ನ ದೇಶದ ಕ್ರೀಡಾಪ್ರಿಯರ ನಿರೀಕ್ಷೆಯನ್ನು ಸಾಕಾರಗೊಳಿಸಬಲ್ಲೆನೇ ಎಂಬ ಹೆದರಿಕೆ ಕೂಡ ಶುರವಾಗಿದೆ’ ಎಂದು ಭಜರಂಗ್ ಹೇಳಿದ್ದಾರೆ.