ಅಹಮದಾಬಾದ್: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ಸದಸ್ಯರು ಗುಜರಾತ್ ನ ಅಹಮದಾಬಾದ್ ನಲ್ಲಿ ಬುಧವಾರ (ಜನವರಿ 4) ಮಾಲ್ ನಲ್ಲಿ ‘ಪಠಾಣ್’ ಚಲನಚಿತ್ರವನ್ನು ಬಿಡುಗಡೆ ಮಾಡುವುದನ್ನು ವಿರೋಧಿಸಿದರು.
ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರು ವಸ್ತ್ರಪುರ ಮಾಲ್ ನಲ್ಲಿ ಚಿತ್ರ ಬಿಡುಗಡೆಯನ್ನು ಪ್ರತಿಭಟಿಸಿದರು. ಚಲನಚಿತ್ರದ ಪೋಸ್ಟರ್ ಗಳು ಮತ್ತು ಇತರ ಪ್ರಚಾರ ಸಾಮಗ್ರಿಗಳನ್ನು ಹರಿದು ಹಾಕಿದರು. ಘಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿ ಪ್ರತಿಭಟನಾಕಾರರು ಪೋಸ್ಟರ್ ಗಳನ್ನು ಹರಿದು ಹಾಕುವಾಗ ’ಜೈ ಶ್ರೀ ರಾಮ್’ ಘೋಷಣೆ ಕೂಗುತ್ತಿದ್ದಾರೆ.
ಈ ಚಿತ್ರ ಗುಜರಾತ್ ನಲ್ಲಿ ಬಿಡುಗಡೆಯಾಗಲು ನಾವು ಬಿಡುವುದಿಲ್ಲ. ಇಂದು ಅಹಮದಾಬಾದ್ ನಲ್ಲಿ ನಡೆದ ಈ ಪ್ರತಿಭಟನೆಯು ರಾಜ್ಯದ ಎಲ್ಲಾ ಚಿತ್ರ ಮಂದಿರ ಮಾಲಿಕರಿಗೆ ಒಂದು ಎಚ್ಚರಿಕೆಯಾಗಿದೆ. ಅವರು ಪಠಾಣ್ ಚಿತ್ರವನ್ನು ಬಿಡುಗಡೆ ಮಾಡಲು ಮುಂದೆ ಬರಬಾರದು ಎಂದು ವಿಎಚ್ ಪಿ ವಕ್ತಾರ ಹಿತೇಂದ್ರ ಸಿಂಗ್ ರಾಜಪೂತ್ ಎಚ್ಚರಿಕೆ ನೀಡಿದ್ದಾರೆ.
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್, ಜಾನ್ ಅಬ್ರಾಹಂ, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಿಸಿದ್ದಾರೆ.