ಬಜಪೆ: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೆಂಜಾರುನಲ್ಲಿರುವ ಕಾಲೇಜಿನ ಹಾಸ್ಟೆಲ್ನ ಕೊಳಚೆ ನೀರನ್ನು ಪೈಪ್ ಮೂಲಕ ಸುಂದರಿ ಶೆಡ್ತಿ ಎಂಬವರಿಗೆ ಸೇರಿದ ಜಾಗಕ್ಕೆ ಬಿಡುತ್ತಿರುವ ಬಗ್ಗೆ ಅವರು ದೂರು ನೀಡಿದ್ದು ಪಂಚಾಯತ್ ನೋಟೀಸ್ ನೀಡಿದರೂ ಸಂಬಂಧಪಟ್ಟ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊಳಚೆ ನೀರು ತೆರೆದ ಪ್ರದೇಶದಲ್ಲಿ ಹರಿಯುತ್ತಿದ್ದು ಸೊಳ್ಳೆಗಳ ಆವಾಸ ತಾಣವಾಗಿದ್ದು ರೋಗ ಹರಡುವ ಭೀತಿ ಎದುರಾಗಿದೆ. ಅಲ್ಲದೇ ಸುತ್ತಲಿನ ಪರಿಸರದಲ್ಲಿ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಸ್ಟೆಲ್ ಕಟ್ಟಡದ ಕೊಳಚೆ ನೀರನ್ನು ಬೇರೆಯವರ ಜಾಗಕ್ಕೆ ಬಿಡಲು ಅವಕಾಶವಿಲ್ಲದ್ದರಿಂದ ಪಂಚಾಯತ್ ಗೆ ನೀಡಿರುವ ದೂರಿನ ಆಧಾರದಲ್ಲಿ ಸಂಸ್ಥೆಗೆ ಹಲವು ಬಾರಿ ನೋಟಿಸ್ ನೀಡಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕೊಳಚೆ ನೀರು ಹರಿಯುವುದನ್ನು ತಡೆಯಲು ಇಂಗು ಗುಂಡಿ ಅಥವಾ ಎಸ್ಟಿಪಿ, ಟ್ರೀಟ್ ಮೆಂಟ್ ಪ್ಲಾಂಟ್ ಅನ್ನು ಅಳವಡಿಸುವಂತೆ ಪಂಚಾಯತ್ ಅಧಿಕಾರಿಗಳು ಹೇಳಿದ್ದರೂ ಕಾಲೇಜಿನ ಆಡಳಿತ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ಅಲ್ಲಿನವರು ದೂರಿದ್ದಾರೆ.
ಕೂಡಲೇ ಕಾಲೇಜಿನ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾದೀತು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.