Advertisement

ಬಜಪೆ: ಅಕ್ಕಿಮುಡಿಗೆ ಹೆಚ್ಚಿದ ಬೇಡಿಕೆ; ಕೃಷಿಕರಲ್ಲಿ ಆಶಾವಾದ

11:12 PM Jan 15, 2021 | Team Udayavani |

ಬಜಪೆ: ಬೆಳೆಯುತ್ತಿರುವ ಆಧುನಿಕತೆಯಿಂದಾಗಿ ಹಳ್ಳಿಗಳಲ್ಲಿ ಜೀವನ- ಕೃಷಿ-ಸಂಸ್ಕೃತಿ ನಶಿಸುತ್ತಿದೆ ಎಂಬ ಅಪವಾದದ ನಡುವೆಬಜಪೆ ವ್ಯಾಪ್ತಿಯ ದಿನಸಿ ಅಂಗಡಿಗಳಲ್ಲಿ ಕೃಷಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಕ್ಕಿ ಮುಡಿಗೆ ಬೇಡಿಕೆ ಹೆಚ್ಚಿದೆ. ನಿಜಕ್ಕೂ ಇದು ಆಶಾದಾಯಕ ಸಂಗತಿಯಾಗಿದ್ದು, ನಗರದ ಜನತೆ ಅಕ್ಕಿಮುಡಿ ಖರೀದಿಸಲು ಹಳ್ಳಿಗಳಿಗೆ ಬರುತ್ತಿರುವುದು ಗಮನಾರ್ಹ.

Advertisement

ಹಿಂದೆ ಹಳ್ಳಿಗಳಲ್ಲಿ ಮದುವೆ, ಶುಭ-ಸಮಾರಂಭಗಳಿಗೆ ಸಂಪ್ರದಾಯದಂತೆ ಅಕ್ಕಿ ಮುಡಿಯ ಬಳಕೆ ಹೇರಳವಾಗಿತ್ತು. ಕಾಲ ಕಳೆದಂತೆ ಇದು ಕಡಿಮೆಯಾಯಿತು. ಇದೀಗ ಬಜಪೆ ದಿನಸಿ ಅಂಗಡಿಗಳಲ್ಲಿ ಶುಭ-ಸಮಾರಂಭಗಳಿಗೆಂದೇ ಸಿದ್ಧಪಡಿಸುವ ಅಕ್ಕಿ ಮುಡಿಗಳಿಗೆ ಬೇಡಿಕೆ ಕುದುರಿದ್ದು, ಗ್ರಾಹಕರು ಖರೀದಿಗೆ ಮುಂದಾಗುತ್ತಿದ್ದಾರೆ.

ಅಕ್ಕಿ ಮುಡಿ ಕಟ್ಟುವವರ ಸಂಖ್ಯೆ ವಿರಳ :

ಅಕ್ಕಿ ಮುಡಿಗೆ ಬೇಡಿಕೆ ಹೆಚ್ಚಳವಾಗಿದೆ. ಆದರೆ ಅದನ್ನು ಕಟ್ಟುವ ಕೈಗಳು ಮಾತ್ರ ವಿರಳ. ಕೃಷಿ ಕಾರ್ಮಿಕರು ಅದರಲ್ಲೂ ವಯಸ್ಕರು ಮಾತ್ರ ಅಕ್ಕಿಮುಡಿ ಕಟ್ಟುತ್ತಿದ್ದಾರೆ. ಜನರ ಬೇಡಿಕೆ ತಕ್ಕಂತೆ ಒಳ್ಳೆಯ ಅಕ್ಕಿ ಮುಡಿ ಕಟ್ಟುವವರನ್ನು ಪೆರಾರ, ಅದ್ಯಪಾಡಿ, ಪೊರ್ಕೋಡಿ, ಬಾಳ, ಕಳವಾರು, ಕರಂಬಾರು ಪ್ರದೇಶದಲ್ಲಿ ಕಾಣಬಹುದು.

10 ಕೆ.ಜಿ. ತೂಕದ ಅಕ್ಕಿಮುಡಿ 750 ರೂ.ಗೆ ಮಾರಾಟವಾಗುತ್ತಿದ್ದು, ಇದರಲ್ಲಿ 275 ರೂ. ಅಕ್ಕಿಮುಡಿ ಕಟ್ಟುವವನಿಗೆ ಸಿಗುತ್ತಿದೆ. ಬೈ ಹುಲ್ಲು, ಹಗ್ಗ ಅವರದ್ದಾಗಿರುತ್ತದೆ. ಅಕ್ಕಿಮುಡಿ ಕಟ್ಟಲು ಇಬ್ಬರು ಬೇಕಾಗುತ್ತದೆ. ದಿನವೊಂದಕ್ಕೆ 10ರಿಂದ 12 ಕಟ್ಟಬಹುದು. ಬೆಳ್ತಿಗೆ, ಕುಚ್ಚಲಕ್ಕಿ ಹೀಗೇ ಪ್ರತ್ಯೇಕ ಅಕ್ಕಿಮುಡಿ ತಯಾರಿಸಲಾಗುತ್ತಿದ್ದು, ಅವುಗಳಿಗೆಲ್ಲ ಉತ್ತಮ ಬೇಡಿಕೆ ಇದೆ.

Advertisement

ಗುತ್ತಿನ ಮನೆಯಲ್ಲಿ ದಾಸ್ತಾನು ಇಡುವ ಅಕ್ಕಿಮುಡಿ ಈಗ ಕಡಿಮೆಯಾಗುತ್ತಿದೆ. ಅಂಗಡಿಯವರು ಜನರ ಬೇಡಿಕೆಗೆ ತಕ್ಕಂತೆ ಅಕ್ಕಿಮುಡಿಗಳನ್ನು ಅಂಗಡಿಯಲ್ಲಿ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದಾರೆ.

ಶುಭ ಸಮಾರಂಭಗಳಿಗೆ  ಮೊದಲ ಆದ್ಯತೆ! :

ಗೃಹ ಪ್ರವೇಶ, ಉಪನಯನ, ಗೌಡ ಸಾರಸ್ವತರಲ್ಲಿ ಮನೆ ತುಂಬಿಸುವಲ್ಲಿ, ಕ್ರೈಸ್ತರ ರೋಸ್‌, ಬ್ರಹ್ಮಕಲಶೋತ್ಸವ, ದೈವ -ದೇವಸ್ಥಾನಗಳ ಹೊರೆಕಾಣಿಕೆ ಮೆರವಣಿಗೆ, ಶುಭ ಸಮಾರಂಭಗಳಿಗೆ, ಪೂಜೆ ಕಾರ್ಯಗಳಿಗೆ ಹಾಗೂ ಇತರ ಕಾರ್ಯಕ್ರಮಗಳಿಗೆ ಅಕ್ಕಿಮುಡಿಯನ್ನು ಮುಖ್ಯವಾಗಿ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next