Advertisement

Bajpe: 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಮರಣೋತ್ತರ ಪರೀಕ್ಷೆ ಕೇಂದ್ರವಿಲ್ಲ

11:55 AM Nov 18, 2023 | Team Udayavani |

ಬಜಪೆ: ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಸೌಕರ್ಯದ ಹಾಗೂ ತರಬೇತಿಯ ಕೊರತೆಯಿಂದಾಗಿ ಹೆಚ್ಚಿನ ಯುಡಿಆರ್‌ ಪ್ರಕರಣದ ಶವ ಪರೀಕ್ಷೆ ಮಂಗಳೂರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಇದು ಸಂಬಂಧಿತ ನೊಂದ ಕುಟುಂಬಗಳ ಅಲೆದಾಟಕ್ಕೆ ಕಾರಣವಾಗಿದೆ.

Advertisement

ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿ ಹೆಚ್ಚು ಗ್ರಾಮಾಂತರ ಪ್ರದೇಶವನ್ನೊಳಗೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಂಎಸ್‌ಈ ಝಢ್‌, ಗಂಜಿಮಠದ ಐಟಿ ಪಾರ್ಕ್‌, ಕಟೀಲು ದೇವಸ್ಥಾನ, ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಜತೆಗೆ ಮುಚ್ಚಾರು , ಬಡಗ ಎಡಪದವು, ಎಡಪದವು, ಕುಪ್ಪೆಪದವು, ಮುತ್ತೂರು, ಗಂಜಿಮಠ, ಪಡುಪೆರಾರ, ಕಂದಾವರ, ಗುರುಪುರ,
ಪೆರ್ಮುದೆ, ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿ, ಕೊಂಡೆಮೂಲ, ನಡುಗೋಡು ಗ್ರಾಮಾಂತರ ಪ್ರದೇಶವೂ ಈ ವ್ಯಾಪ್ತಿಗೆ
ಬರುತ್ತದೆ.

ಬಜಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಜಪೆ, ಕಟೀಲು, ಗಂಜಿಮಠ, ಕೊಂಪದವು, ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರ
ಕೇಂದ್ರಗಳು ಈ ವ್ಯಾಪ್ತಿಯಲ್ಲಿದೆ. ಬೊಂದೇಲ್‌ ಹಾಗೂ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳು ಈ ವ್ಯಾಪ್ತಿಗೆ ಬರುತ್ತದೆ.

2ರಲ್ಲಿ ಮಾತ್ರ ಮರಣೋತ್ತರ ಪರೀಕ್ಷೆ ಕೇಂದ್ರ: ಈ 5 ಪ್ರಾಥಮಿಕ ಆರೋಗ್ಯ ಕೇಂಂದ್ರದಲ್ಲಿ ಗಂಜಿಮಠ ಹಾಗೂ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಶವಪರೀಕ್ಷೆಯ ಕೊಠಡಿ ಇದೆ. ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದರಲ್ಲಿ ಮಾತ್ರ ಶವ ಪರೀಕ್ಷೆ ನಡೆಯುತ್ತಿದೆ. ಇಲ್ಲಿ ಡಿ’ಗ್ರೂಪ್‌ನ ನೌಕರ ಇದ್ದ ಕಾರಣ ಇಲ್ಲಿ ನಡೆಯುತ್ತಿದೆ. ಅದರೂ ಕೂಡ ಹೆಚ್ಚಿನ ಶವ ಪರೀಕ್ಷೆಗಳು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆಯುತ್ತವೆ.

ಮನೆಯವರ ಸಂಕಟ ಕೇಳುವವರಿಲ್ಲ: ಅತ್ಮಹತ್ಯೆ ಹಾಗೂ ಇನ್ನಿತರ ಪ್ರಕರಣ ಸಾವನ್ನಿಪ್ಪಿದ ಶವಗಳಿಗೆ ಬಜಪೆ ಪೊಲೀಸ್‌
ಠಾಣಾ ವ್ಯಾಪ್ತಿಯಲ್ಲಿ ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ಸಾಧ್ಯವಿಲ್ಲದ ಕಾರಣ ಮಂಗಳೂರು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಿ ಇರಬೇಕಾಗುತ್ತದೆ. ಬಜಪೆ ಪೊಲೀಸರಿಗೂ ಶವ ಪರೀಕ್ಷೆಗಾಗಿ ಅಲೆದಾಟ  ಮಾಡಬೇಕಾಗಿರುತ್ತದೆ. ರಾತ್ರಿಯಾದರೆ ಮರುದಿನದವರೆಗೆ ಶವ ಪರೀಕ್ಷೆಗಾಗಿ ಕಾಯಬೇಕಾಗುತ್ತದೆ. ಮಂಗಳೂರು ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗಾಗಿ ಕೆಲವೊಮ್ಮೆ ಸರತಿ ಸಾಲು ಕಂಡು ಬರುವ ಕಾರಣ ಕುಟುಂಬದವರು ಬೆಳಗ್ಗೆಯಿಂದ ಸಂಜೆ ತನಕ ಕಾಯಬೇಕು.

Advertisement

ಮೂಲ ಸೌಲಭ್ಯ ನೀಡಬೇಕು: ಬಜಪೆ ಹಾಗೂ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆಗೆ ಹೆಚ್ಚು ಸೌಲಭ್ಯವನ್ನು ನೀಡಬೇಕು. ಶವ ಪರೀಕ್ಷೆ ಗೊತ್ತಿರುವ ಡಿಗ್ರೂಪ್‌ ನೌಕರರನ್ನು ನೇಮಿಸಿ, ಇಲ್ಲಿಯೇ ಶವ ಪರೀಕ್ಷೆ ಆಗುವಂತೆ ಇಲಾಖೆ ಕ್ರಮ ವಹಿಸಬೇಕು.

ಅಂಕಿ ಅಂಶದ ಪ್ರಕಾರ ತಿಂಗಳಿಗೆ 4ರಿಂದ 5 ಯುಡಿಆರ್‌ ಪ್ರಕರಣಗಳು ಬಜಪೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಡಿಗ್ರೂಪ್‌ ನೌಕರರಿಗೆ ತರಬೇತಿ ನೀಡಬೇಕು. ಡಿಗ್ರೂಪ್‌ ನೌಕರರು ಶವ ಪರೀಕ್ಷೆಗಾಗಿ ಒಂದೆಡೆಯಿಂದ ಇನ್ನೊಂದೆಡೆ ಹೋಗುವಂತಾಗಬೇಕು. ಬಜಪೆ ಪೊಲೀಸ್‌ ಠಾಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪದಲ್ಲಿಯೇ ಇರುವ ಕಾರಣ ಇಲ್ಲಿ ಶವ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿದರೆ ಜನರಿಗೂ ಅನುಕೂಲ, ಅಲೆದಾಟ ತಪ್ಪುತ್ತದೆ.

ಬಜಪೆಯಲ್ಲಿ ನಡೆಯುತ್ತಿಲ್ಲ
ಬಜಪೆಯಲ್ಲಿ ಈ ಹಿಂದೆ ಶವ ಪರೀಕ್ಷೆ ಆಗುತ್ತಿತ್ತು. ಈಗ ಡಿಗ್ರೂಪ್‌ ನೌಕರರಿಗೆ ಸಮರ್ಪಕ ತರಬೇತಿ ಇಲ್ಲದ ಕಾರಣ ನಡೆಯುತ್ತಿಲ್ಲ. ಗಂಜಿಮಠದಲ್ಲೂ ಕೆಲವೊಮ್ಮೆ ಬಜಪೆ ಪೊಲೀಸರೇ ಮೂಡಬಿದಿರೆಯಿಂದ ಶವ ಪರೀಕ್ಷೆಗೆ ನಿವೃತ್ತರಾದ ಓರ್ವರನ್ನು ಕರೆ ತಂದು ಶವ ಪರೀಕ್ಷೆ ಮಾಡಲಾಗುತ್ತದೆ. ವೈದ್ಯರಿದ್ದರೂ ಶವ ಸೀಳುವ ಡಿಗ್ರೂಪ್‌ ನೌಕರರು ಬೇಕು.

ತರಬೇತಿ ಕೊರತೆ
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರ ಣೋತ್ತರ ಪರೀಕ್ಷೆ ನಡೆಸುವ ಕೊಠಡಿ ಇದೆ. ಆ ದರೆ ಶವ ಪರೀಕ್ಷೆ ನಡೆಸಲು ಬೇಕಾಗುವ ಮೂಲ ಸೌಲಭ್ಯ ಜತೆಗೆ ಸೂಕ್ತ ತರಬೇತಿ ಪಡೆದ ನೌಕರರು ಇಲ್ಲದ ಕಾರಣ. ಇಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿಲ್ಲ.

ಡಾ| ಶಂಕರ್‌ ನಾಗ್‌, ವೈದ್ಯಾಧಿಕಾರಿ,
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರ

*ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next