Advertisement

ಮಂಗಳೂರು ವಿಮಾನ ದುರಂತಕ್ಕೆ ಹತ್ತು ವರ್ಷ: ಮರುಜನ್ಮ ಪಡೆದೆ: ಪುತ್ತೂರಿನ ಅಬ್ದುಲ್ಲಾ

09:07 AM May 22, 2020 | mahesh |

ಉಳ್ಳಾಲ: ಇದು ಪವಾಡ, ನನಗೆ ಮರುಜನ್ಮ ಸಿಕ್ಕಿದಂತಾಗಿದೆ. ದೇವರು ನನ್ನ ಕೈಬಿಡಲಿಲ್ಲ, ಗುರುಹಿರಿಯರ ಆಶೀರ್ವಾದದಿಂದ ನಾನು ಬದುಕಿ ಉಳಿದಿದ್ದೇನೆ ಇದು ಶನಿವಾರ ಕೆಂಜಾರಿನಲ್ಲಿ ವಿಮಾನ ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿ ಬಂದ ಪುತ್ತೂರಿನ ಸಾಮೆತಡ್ಕ ನಿವಾಸಿ ಅಬ್ದುಲ್ಲ ಪುತ್ತೂರು ಭಾವಪರವಶರಾಗಿ ಹೇಳಿದ ಮಾತು.

Advertisement

ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ನಾವು ಮಂಗಳೂರು ತಲುಪಿದ್ದೇವೆ. ಎಲ್ಲರೂ ಸೀಟಿನ ಬೆಲ್ಟನ್ನು ಕಟ್ಟಿಕೊಳ್ಳಿ ಎಂದು ವಿಮಾನದಲ್ಲಿ ಅನೌನ್ಸ್ ಮೆಂಟ್‌ ಆಯಿತು. ನಾನು ವಿಮಾನದ 19(ಎ) ಸೀಟಿನಲ್ಲಿ ಕುಳಿತಿದ್ದೆ. ಬೆಲ್ಟನ್ನು ಕಟ್ಟಿಕೊಂಡು ಸುಮಾರು 15 ನಿಮಿಷಗಳಾಗಿತ್ತು 6.15ರ ಹೊತ್ತಿಗೆ ನಮ್ಮ
ವಿಮಾನದ ಎದುರಿನ ಟಯರ್‌ ಭೂಸ್ಪರ್ಶವಾದ ಅನುಭವವಾಯಿತು ಕೆಲವೇ ಸೆಕೆಂಡುಗಳಲ್ಲಿ ವಿಮಾನ ಒಂದೇ ಬದಿಗೆ ಜಾರಿದ ಅನುಭವ ಮತ್ತು ಸ್ಫೋಟದ ಸದ್ದು ಕೇಳಿತು ವಿಮಾನ ದಲ್ಲಿದ್ದ ಸಹಪ್ರಯಾಣಿಕರು ಬೊಬ್ಬೆ ಹಾಕಲು ಪ್ರಾರಂಭಿಸಿದರು. ನನ್ನ ಎದುರುಗಡೆಯ ಸೀಟಿನ ಕಡೆ ವಿಮಾನ ಇಬ್ಭಾಗವಾಯಿತು.

ನಾನು ಕುಳಿತ ಭಾಗ ಮೇಲ್ಗಡೆ ಇತ್ತು, ಕೆಳಗಡೆ ಬೆಂಕಿ ಉರಿಯಲು ಪ್ರಾರಂಭಿಸಿದಾಗ ನಾನು ವಿಮಾನದ ಮೇಲ್ಗಡೆ ಹತ್ತಿ ಹೊರಗಡೆ ಹಾರಲು ಪ್ರಯತ್ನಿಸಿದೆ. ಮೊದಲ ಬಾರಿಗೆ ಜಾರಿದರೂ ಎರಡನೇ ಬಾರಿಗೆ ಹೊಗೆಯ ನಡುವೆಯೇ ಹೊರಗೆ ಹಾರಿದೆ. ಸುಮಾರು 6 ಅಡಿ ಆಳಕ್ಕೆ ಹಾರಿದ್ದು ಮುಳ್ಳುಗಳಿದ್ದ ಪೊದೆಯೊಂದಕ್ಕೆ ಬಿದ್ದೆ. ಅಲ್ಲಿಂದ ಎದ್ದು ಓಡಲು ಪ್ರಾರಂಭಿಸಿದೆ. ಅಲ್ಲೇ ಹತ್ತಿರದಲ್ಲಿದ್ದ ರೈಲು ಹಳಿ ಬಳಿ ತಲುಪಿದಾಗ ನನ್ನೊಂದಿಗೆ ಪಾರಾಗಿ ಬಂದಿದ್ದ ಇನ್ನಿಬ್ಬರು ಅಲ್ಲಿ
ತಲುಪಿದ್ದರು. ಬಳಿಕ ಸ್ಥಳೀಯರ ಸಹಕಾರದಿಂದ ನನ್ನ ತಮ್ಮನಿಗೆ ಫೋನ್‌ ಕರೆ ಮಾಡಿ ನಾನಿದ್ದ ಸ್ಥಳಕ್ಕೆ ಕರೆಸಿಕೊಂಡೆ, ಬಳಿಕ ನನ್ನನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರು ಎಂದು ಅಬ್ದುಲ್ಲ ಬದುಕಿ ಉಳಿದ ಘಟನೆಯನ್ನು ವಿವರಿಸಿದರು.

ಸಾಮೆತಡ್ಕದ ಇಸ್ಮಾಯಿಲ್‌ ಹಾಗೂ ಖತೀಜಾ ದಂಪತಿಯ ಪುತ್ರನಾಗಿರುವ ಅಬ್ದುಲ್ಲಾ ಕಳೆದ 6 ವರ್ಷಗಳಿಂದ ದುಬಾೖಯ ಜಬಲ್‌ ಆಲಿಯ ಇಬೂ° ಬಕ್ರೂತ ಮಾಲ್‌ನಲ್ಲಿರುವ ಸ್ಕಾಟ್‌ಲ್ಯಾಂಡ್‌ ನ್ಪೋರ್ಟ್ಸ್ ಅಂಗಡಿಯಲ್ಲಿ ಸ್ಟಾಕ್‌ ಮೆನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. 5ತಿಂಗಳ ಹಿಂದೆ ರಜಾ ಸಮಯದಲ್ಲಿ ಊರಿಗೆ ಬಂದಿದ್ದ ಅವರು ಬಲಭುಜದ ನೋವಿಗಾಗಿ ನಿಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಡಾ| ಸಾಮಗ ಅವರಿಂದ ಚಿಕಿತ್ಸೆ ಪಡೆಯಲೆಂದು 10 ದಿನದ ವೈದ್ಯಕೀಯ ರಜೆಯಲ್ಲಿ ಊರಿಗೆ ಹೊರಟಿದ್ದರು. ಶುಕ್ರವಾರ ರಾತ್ರಿ ದೇರಾ ದುಬಾೖಯಲ್ಲಿರುವ ತನ್ನ ರೂಮಿನಿಂದ ಹೊರಟು 10.30ಕ್ಕೆ ಏರ್‌ಪೋರ್ಟು ತಲುಪಿದ್ದರು. ರಾತ್ರಿ
11 ಗಂಟೆಗೆ ಇಮಿಗ್ರೇಷನ್‌ ಮುಗಿಸಿ ರಾತ್ರಿ 1ಗಂಟೆ (ಭಾರತೀಯ ಕಾಲಮಾನ 2.30) ಹೊತ್ತಿಗೆ ವಿಮಾನದಲ್ಲಿ ಹೊರಟು ಮಂಗಳೂರಿಗೆ ತಲುಪಿದಾಗ ಈ ದುರ್ಘ‌ಟನೆ ಸಂಭವಿಸಿತ್ತು.

ಅಬ್ದುಲ್ಲಾ ಅವರ ಮುಖ, ಕೈಕಾಲಿಗೆ ತರಚಿದ ಗಾಯವಾಗಿದ್ದು ತಲೆ ಕೂದಲು ಮತ್ತು ಮೀಸೆ ಬೆಂಕಿಯಲ್ಲಿ ಕರಟಿಹೋಗಿತ್ತು. ಕೆ.ಎಸ್‌. ಹೆಗ್ಡೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದ ಬಳಿಕ ದೇರಳಕಟ್ಟೆಯ ಸೋದರ ಸಂಬಂಧಿಯೊಬ್ಬರ ಮನೆಯಲ್ಲಿ ವಿಶ್ರಾಂತಿ ಪಡೆದು ಪುತ್ತೂರಿನ ಮನೆಗೆ ತೆರಳಿದ್ದರು. ಸುದ್ಧಿ ತಿಳಿಯುತ್ತಿದ್ದಂತೆ ಅಬ್ದುಲ್ಲಾ ಅವರ ಪತ್ನಿ ಸಾಜಿದಾ ಹಾಗೂ ಪುತ್ರಿ ಒಂದೂವರೆ ವರ್ಷದ ಶೈಮಾಳೊಂದಿಗೆ ದೇರಳಕಟ್ಟೆ ಆಗಮಿಸಿದ್ದರು. ಅಬ್ದುಲ್ಲಾರ ಐವರು ಸೋದರರಲ್ಲಿ ಇಬ್ಬರು ವಿದೇಶದಲ್ಲಿದ್ದರು.

Advertisement

ವಿಶ್ರಾಂತಿಗೆ ಫೋನ್‌ ಕರೆ ಅಡ್ಡಿವಿಮಾನ ಅಪಘಾತದಿಂದ ಪಾರಾಗಿ ಬಳಲಿದ್ದ ಅಬ್ದುಲ್ಲಾ ಅವರಿಗೆ ಘಟನೆ ನಡೆದ ಬಳಿಕ ಮಧ್ಯಾಹ್ನದ ವರೆಗೆ ಇವರ ರೋಚಕ ಅನುಭವವನ್ನು ಕೇಳಿಕೊಂಡು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಹಿನಿಗಳಿಂದ ಮತ್ತು ಸಂಬಂಧಿಕರಿಂದ ಗೆಳೆಯರಿಂದ ನಿರಂತರ ಸಾವಿರಾರು ಕರೆಗಳು ಬಂದಿದ್ದು, ಆಯಾಸದ ನಡುವೆಯೂ ಎಲ್ಲರಿಗೂ ಘಟನೆಯ ವಿವರವನ್ನು ನೀಡುತ್ತಿದ್ದರು.

(ಹತ್ತು ವರ್ಷದ ಹಿಂದೆ ಉದಯವಾಣಿ ದೈನಿಕದಲ್ಲಿ ಪ್ರಕಟವಾದ ವರದಿ)

Advertisement

Udayavani is now on Telegram. Click here to join our channel and stay updated with the latest news.

Next