Advertisement

ಚಳಿಗಾಲದ ಸಂಜೆಗೆ ಬಜ್ಜಿ, ಪಕೋಡ, ರಿಂಗ್ಸ್‌…

12:30 AM Feb 13, 2019 | |

ಚಳಿಗಾಲದ ಸಂಜೆಗೆ ಹಸಿವು, ಬಾಯಿರುಚಿ ಹೆಚ್ಚು. ಸಂಜೆ ಹೊತ್ತು ಬೇಕರಿ ತಿನಿಸು ಮೆಲ್ಲುವ ಬದಲು, ಮನೆಮಂದಿಯೆಲ್ಲ ಇಷ್ಟಪಡುವಂಥ ಸ್ನ್ಯಾಕ್ಸ್‌ಗಳನ್ನು ಕೈಯಾರೆ ತಯಾರಿಸಬಹುದು. ಅಂಥ ಕೆಲವು ಕುರುಕಲು ತಿನಿಸುಗಳು ಇಲ್ಲಿವೆ. 

Advertisement

1. ಅಕ್ಕಿ ಹಿಟ್ಟಿನ ತಟ್ಟಿ
ಬೇಕಾಗುವ ಸಾಮಗ್ರಿ:
ಅಕ್ಕಿ ಹಿಟ್ಟು 1ಕಪ್‌, ಎಳ್ಳು 1 ಚಮಚ, ಜೀರಿಗೆ 1 ಚಮಚ, ಓಮ ಕಾಳು 1 ಚಮಚ, ಜೀರಿಗೆ ಮೆಣಸಿನ ಪುಡಿ/ಅಚ್ಚ ಖಾರದಪುಡಿ 1/2 ಚಮಚ, ಬಿಸಿ ಎಣ್ಣೆ 2 ಚಮಚ, ಹೆಚ್ಚಿದ ಕರಿಬೇವು, ಇಂಗು, ನೀರು (ಅಂದಾಜು 1/2ಕಪ್‌) ಉಪ್ಪು ರುಚಿಗೆ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿ ಹಿಟ್ಟಿಗೆ ಎಳ್ಳು, ಜೀರಿಗೆ, ಓಮ, ಮೆಣಸಿನ ಪುಡಿ, ಕರಿಬೇವು, ಉಪ್ಪು ಹಾಕಿ ಮಿಶ್ರಣ ಮಾಡಿ.
ಈ ಮಿಶ್ರಣಕ್ಕೆ ಬಿಸಿ ಎಣ್ಣೆ  ಹಾಕಿ ಬೆರೆಸಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಿ.ಆ ಹಿಟ್ಟಿನಿಂದ ಚಿಕ್ಕ ಗಾತ್ರದ ಉಂಡೆ ಮಾಡಿ. ನಂತರ ಪ್ಲಾಸ್ಟಿಕ್‌ ಶೀಟ್‌ ಅಥವಾ ಬೈಂಡಿಂಗ್‌ ಪೇಪರ್‌ನ ಮೇಲೆ ಒಂದೊಂದೇ ಉಂಡೆ ಇಟ್ಟು, ತೆಳುವಾಗಿ ತಟ್ಟಿ. ಎಣ್ಣೆ ಬಿಸಿ ಮಾಡಿ, ತಟ್ಟಿದ ರೊಟ್ಟಿ ಹಾಕಿ ಎರಡೂ ಬದಿ ಗರಿ ಗರಿಯಾಗುವವರೆಗೆ ಕರಿಯಿರಿ. ಬಿಸಿ ಅರಿದ ನಂತರ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಒಂದೆರಡು ವಾರ ಕೆಡುವುದಿಲ್ಲ. 

2. ಆನಿಯನ್‌ ರಿಂಗ್ಸ್‌…
ಬೇಕಾಗುವ ಸಾಮಗ್ರಿ: ಈರುಳ್ಳಿ- 3, ಜೋಳದ ಹಿಟ್ಟು (ಕಾರ್ನ್ ಫ್ಲೋರ್‌) 6 ಚಮಚ, ಮೈದಾಹಿಟ್ಟು 4 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೌಡರ್‌ 1 ಚಮಚ, ಖಾರದಪುಡಿ 1ಚಮಚ, ಉಪ್ಪು,  ಬ್ರೆಡ್‌ ಪೌಡರ್‌ (ಕ್ರಂಬ್ಸ್)- 1 ಕಪ್‌, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಈರುಳ್ಳಿಯನ್ನು ತೆಳುವಾಗಿ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು , ಮೈದಾ ಹಿಟ್ಟು, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ ಪೌಡರ್‌, ಖಾರದ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಹದವಾಗಿ ಕಲಸಿ. ಆ ಮಿಶ್ರಣಕ್ಕೆ ಈರುಳ್ಳಿಯನ್ನು ಅದ್ದಿ, ಬ್ರೆಡ್‌ ಕ್ರಂಬ್ಸ್ನಲ್ಲಿ ಉರುಳಿಸಿ, ತಟ್ಟೆಯಲ್ಲಿ ಜೋಡಿಸಿ (ಹೀಗೆ ತಯಾರಿಸಿದ ಈರುಳ್ಳಿಯನ್ನು ಫ್ರಿಡ್ಜ್ನಲ್ಲಿ ಒಂದು ತಿಂಗಳವರೆಗೆ ಇಟ್ಟು, ಬೇಕಾದಾಗ ಎಣ್ಣೆಯಲ್ಲಿ ಕರಿಯಬಹುದು) ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ, ಆನಿಯನ್‌ ರಿಂಗ್ಸ್ ಹಾಕಿ ಕೆಂಬಣ್ಣ ಬರುವವರೆಗೆ ಕರಿಯಿರಿ. ಇದನ್ನು ಕಾಫಿ ಜೊತೆಗೆ ಸ್ನ್ಯಾಕ್ಸ್‌ನಂತೆ, ಅನ್ನ ಹಾಗೂ ಬಿಸಿಬೇಳೆಬಾತ್‌ನೊಂದಿಗೆ ಚಿಪ್ಸ್ ನಂತೆ ಸವಿಯಬಹುದು. 

Advertisement

3. ಮಿರ್ಚಿ ಮಸಾಲ ಬಜ್ಜಿ
ಬೇಕಾಗುವ ಸಾಮಗ್ರಿ:
ಬಜ್ಜಿ ಮೆಣಸಿನ ಕಾಯಿ 6, ಎಣ್ಣೆ. ಹಿಟ್ಟು ತಯಾರಿಸಲು- ಕಡಲೆಹಿಟ್ಟು 1 ಕಪ್‌, ಅಕ್ಕಿ ಹಿಟ್ಟು 1/4 ಕಪ್‌, ಖಾರದ ಪುಡಿ 1 ಚಮಚ, ಅರಶಿನ 1/2 ಚಮಚ, ಇಂಗು ಚಿಟಿಕೆ, ಉಪ್ಪು ರುಚಿಗೆ, ನೀರು 1/4 ಕಪ್‌, ಸೋಡ ಚಿಟಿಕೆ. ಸ್ಟಫಿಂಗ್‌ ತಯಾರಿಸಲು- ಬೇಯಿಸಿದ ಆಲೂಗಡ್ಡೆ 2, ಹೆಚ್ಚಿದ ಹಸಿ ಮೆಣಸು,  ಶುಂಠಿ ಒಂದಿಂಚು, ಕೊತ್ತಂಬರಿ ಸೊಪ್ಪು, ಈರುಳ್ಳಿ 1, ಅರಶಿನ 1/4 ಚಮಚ, ಖಾರದ ಪುಡಿ 1/2ಚಮಚ, ಉಪ್ಪು, ಜೀರಿಗೆ 1/2 ಚಮಚ, ಇಂಗು, ಆಮ್‌ ಚೂರ್‌ ಪೌಡರ್‌ 1/2 ಚಮಚ.

ಮಾಡುವ ವಿಧಾನ: ಮೆಣಸಿನ ಕಾಯಿಯ ಮಧ್ಯಭಾಗವನ್ನು ಸೀಳಿ ಒಳಗಿರುವ ಬೀಜ ತೆಗೆಯಿರಿ. ಬೇಯಿಸಿದ ಆಲೂಗಡ್ಡೆಯನ್ನು ನುಣ್ಣಗೆ ಮಾಡಿ, ಜೊತೆಗೆ ಮೇಲೆ ಹೇಳಿರುವ ಸ್ಟಫಿಂಗ್‌ ಪದಾರ್ಥಗಳನ್ನು ಸೇರಿಸಿ, ಚೆನ್ನಾಗಿ ನಾದಿ ಮು¨ªೆ ತಯಾರಿಸಿ. ನಂತರ ಕಡಲೆಹಿಟ್ಟಿನ ಜೊತೆಗೆ ಉಳಿದ ಪದಾರ್ಥಗಳನ್ನು ಹಾಕಿ, ನೀರು ಹಾಕಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಆಲೂಗಡ್ಡೆ ಸ್ಟಫಿಂಗ್‌ ಅನ್ನು ಸೀಳಿದ ಮೆಣಸಿನ ಕಾಯಿಯ ಒಳಗೆ ಹೊರ ಬರದಂತೆ ತುಂಬಿ, ಕಡಲೆಹಿಟ್ಟಿನಲ್ಲಿ ಅದ್ದಿ ಬಿಸಿಯಾದ ಎಣ್ಣೆಯಲ್ಲಿ ಕರಿಯಿರಿ. ಬೇಕಿದ್ದರೆ ಬಜ್ಜಿಯನ್ನು ಉದ್ದಕ್ಕೆ ಸೀಳಿ, ಹೆಚ್ಚಿದ ನೀರುಳ್ಳಿ ತುಂಡುಗಳನ್ನು ಹಾಕಿ ತಿನ್ನಬಹುದು.

4.ಕಂದಾ ಬಜ್ಜಿ/ಈರುಳ್ಳಿ ಪಕೋಡ
ಬೇಕಾಗುವ ಸಾಮಗ್ರಿ:
ಈರುಳ್ಳಿ (ಕಂದಾ)- 4, ಕಡಲೆಹಿಟ್ಟು 3/4 ಕಪ್‌, ಅಕ್ಕಿ ಹಿಟ್ಟು 3ಚಮಚ, ಉಪ್ಪು ರುಚಿಗೆ,  ಎಣ್ಣೆ ಕರಿಯಲು, ಖಾರದಪುಡಿ 1ಚಮಚ, ಅರಶಿನ 1/4 ಚಮಚ, ಧನಿಯಾ ಪುಡಿ 1/2 ಚಮಚ, ಜೀರಿಗೆ ಪುಡಿ 1/2 ಚಮಚ, ಅಜವಾನ/ಓಮಕಾಳು 1/2ಚಮಚ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಹಸಿ ಮೆಣಸಿನಕಾಯಿ, ಚಾಟ್‌ ಮಸಾಲೆ 1ಚಮಚ, ಕತ್ತರಿಸಿದ ಶುಂಠಿ ಒಂದಿಂಚು. 

ಮಾಡುವ ವಿಧಾನ: ಈರುಳ್ಳಿಯನ್ನು ತೆಳುವಾಗಿ ಉದ್ದುದ್ದ ಕತ್ತರಿಸಿ, ಎಳೆಎಳೆಯಾಗಿ ಬಿಡಿಸಿ ಒಂದು ಬೌಲ್‌ಗೆ ಹಾಕಿ. ನಂತರ ಉಪ್ಪು ಮಿಶ್ರಣ ಮಾಡಿ, ಹದಿನೈದು ನಿಮಿಷ ಇಡಿ. (ಆಗ ಈರುಳ್ಳಿಯಲ್ಲಿರುವ ನೀರು ಬಿಟ್ಟುಕೊಳ್ಳುತ್ತದೆ) ಈಗ ಧನಿಯಾ, ಜೀರಿಗೆ, ಖಾರದ ಪುಡಿ, ಅರಶಿನ, ಅಜವಾನ, ಹಸಿಮೆಣಸು, ಶುಂಠಿ, ಕೊತ್ತಂಬರಿ, ಕರಿಬೇವು ಹಾಕಿ. ನಂತರ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಆ ಮಿಶ್ರಣವನ್ನು ಉದುರುದುರಾಗಿ ಎಣ್ಣೆಗೆ ಬಿಡಿ. ಎರಡೂ ಬದಿ ಕೆಂಬಣ್ಣ ಬರುವವರೆಗೆ ಕರಿಯಿರಿ. ತಯಾರಿಸಿದ ಬಜ್ಜಿಗೆ ಚಾಟ್‌ ಮಸಾಲೆ ಹಾಕಿದರೆ ಪಕೋಡ ರೆಡಿ. 

ವೇದಾವತಿ ಎಚ್‌. ಎಸ್‌ 

Advertisement

Udayavani is now on Telegram. Click here to join our channel and stay updated with the latest news.

Next