ಮಣಿಪಾಲ: ನೆಲದ ಕಾನೂನಿಗೆ ಗೌರವ ನೀಡಿ ಜಿಲ್ಲಾಧಿಕಾರಿಗಳಿಗೆ ಹಲವು ಮನವಿ ನೀಡಿದ್ದರೂ ಯಾವುದೇ ಸ್ಪಂದನೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಫೆ. 22ರಂದು ಬಜೆ ಡ್ಯಾಂನ ಪಂಪ್‌ಹೌಸ್‌ಗೆ ಮುತ್ತಿಗೆ ಹಾಕಿ ಉಡುಪಿ ನಗರಕ್ಕೆನೀರು ಪೂರೈಕೆ ತಡೆಯಲಾಗುವುದು. 20 ದಿನಗಳಿಂದ ನೀರಿಲ್ಲದೆ ಒಣಗಿರುವ ಕೃಷಿಗೆ ಡೀಸೆಲ್ ಪಂಪ್ ಮೂಲಕ ನೀರುಣಿಸಿ ರೈತರ ಕಾನೂನನ್ನು ಜಾರಿ ಗೊಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ತಿಳಿಸಿದ್ದಾರೆ.
ಬಜೆ ಹಿನ್ನೀರಿನ ಬಳಕೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಭತ್ತ ಸಹಿತ ಕೃಷಿ ನಾಶವಾಗುತ್ತಿದೆ. ವಾರದಲ್ಲಿ ಒಮ್ಮೆಯಾದರೂ ನೀರು ಕೊಡಿ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ರೈತರ ಪರವಾಗಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರೂ ಜಿಲ್ಲಾಧಿಕಾರಿಗಳಿಗೆ ವಸ್ತು ಸ್ಥಿತಿಯನ್ನು ವಿವರಿಸಿದ್ದರು. ಬುಧವಾರದ ಒಳಗೆ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದ ಜಿಲ್ಲಾಧಿಕಾರಿ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಬಜೆಯಲ್ಲಿ ಸಾಕಷ್ಟು ನೀರಿದ್ದರೂ ಜಿಲ್ಲಾಧಿಕಾರಿ ರೈತರಿಗೆ ನೀರು ನೀಡುತ್ತಿಲ್ಲ. ನೀರು ಸೋರಿ ಹೋಗುತ್ತಿದ್ದರೂ ಕೃಷಿಗೆ ನೀಡದ ಅವರ ನಿಲುವು ರೈತ ವಿರೋಧಿ ಎಂದು ರೈತ ಮುಖಂಡ ಕುದಿ ಶ್ರೀನಿವಾಸ ಭಟ್ ತಿಳಿಸಿದ್ದಾರೆ.
ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ವಾರಕ್ಕೆ ಒಮ್ಮೆ ಯಾದರೂ ನೀರು ನೀಡಿ ಎಂಬ ರೈತರ ಬೇಡಿಕೆಗೆ ಜಿಲ್ಲಾಧಿಕಾರಿ ಕರುಣೆ ತೋರಿಲ್ಲ. ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ, ಹೂದೋಟಕ್ಕೆ ನೀರು ಕೊಡಲಾಗುತ್ತಿದೆ. ಡ್ಯಾಂನಲ್ಲಿ ಹೂಳು ತುಂಬಿದರೂ ತೆಗೆಯುವುದಿಲ್ಲ. ರೈತರಿಗೆ ಮಾತ್ರ ನಿರ್ಬಂಧದ ಶಿಕ್ಷೆ ಏಕೆ?
– ರಾಮಕೃಷ್ಣ ಶರ್ಮಾ,
ಜಿಲ್ಲಾಧ್ಯಕ್ಷ, ಕೃಷಿಕ ಸಂಘ
ಡ್ಯಾಂ ಹಿನ್ನೀರಿಗೆ ಸಂಬಂಧಿಸಿ ಫೆ. 22ರಂದು ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳು, ಅಭಿಯಂತರು, ಜಿಪಂ ಸಿಇಒ, ಎಸಿ, ಪಿಡಿಒ, ಕೃಷಿ ಇಲಾಖಾ ಅಧಿಕಾರಿಗಳ ಸಭೆ ಕರೆದಿದ್ದಾರೆ.
– ಆನಂದ ಸಿ. ಕಲ್ಲೋಳಿಕರ್,
ಆಯುಕ್ತರು, ನಗರಸಭೆ