ಬೆಳ್ತಂಗಡಿ: ಊರಿನ ಸಂಪರ್ಕ ಕಲ್ಪಿಸಲು ನಾಡದೋಣಿ ವ್ಯವಸ್ಥೆ ಕಲ್ಪಿಸುವಂತೆ ಊರಿನ ಮಂದಿ ಕೇಳಿ ಕೊಂಡಿದ್ದರು. ಅದರಂತೆ ಮಳೆಗಾಲಕ್ಕೆ ತಾತ್ಕಾಲಿಕ ನಾಡದೋಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್-19 ಲಾಕ್‌ಡೌನ್‌ನಿಂದ ಸೇತುವೆ ಕಾಮಗಾರಿ ತಡವಾಗಿದೆ. ಮುಂದಿನ ವರ್ಷ ಬಹುಬೇಡಿಕೆಯ ಸೇತುವೆ ಕಾಮಗಾರಿ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.
ಬಂದಾರು ಗ್ರಾ.ಪಂ. ವ್ಯಾಪ್ತಿಯ ಬಜತ್ತೂರು-ಮೊಗೇರಡ್ಕ ತೂಗು ಸೇತುವೆ ಕುಸಿತಗೊಂಡಿದ್ದರಿಂದ ನೇತ್ರಾವತಿ ನದಿ ದಾಟಲು ಶಾಸಕರ ಶ್ರಮಿಕ ನೆರವು ಕಾರ್ಯ ಕ್ರಮದಡಿ ನೀಡಿದ ನಾಡದೋಣಿಗೆ ಚಾಲನೆ ನೀಡಿ ಮಾತನಾಡಿದರು. ದೋಣಿ ನಿರ್ವಹಣೆಗಾಗಿ ಸ್ಥಳೀಯರೊಬ್ಬರನ್ನು ನೇಮಿಸಲಾಗಿದೆ. ಅವರಿಗೆ ಸಂಬಳ ನಿಗದಿಪಡಿಸಿ ಸ್ಥಳೀಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ.
ಕೃಷಿಕರು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು ಎಂದರು.
ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್, ಮುಗೇರಡ್ಕ ದೈವಸ್ಥಾನ ಆಡಳಿತ ಮೊಕ್ತೇಸರ ರಾಮಣ್ಣ ಗೌಡ, ಬಂದರು ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಬಿಜೆಪಿ ಮಂಡಲ ಪ್ರ. ಕಾರ್ಯದರ್ಶಿ ಸುಬ್ರಹ್ಮಣ್ಯ ಗೌಡ ಕೈಕುರೆ, ಸಿ.ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ, ಸಿ.ಎ.ಬ್ಯಾಂಕ್ ನಿರ್ದೇಶಕಿ ಶೀಲಾವತಿ, ಗ್ರಾ.ಪಂ. ಸದಸ್ಯೆ ಚಂದ್ರಕಲಾ, ಬಿಜೆಪಿ ಮೊಗ್ರು ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಬಾಲಕೃಷ್ಣ ಗೌಡ, ಸ್ಥಳೀಯರಾದ ಕೇಶವ ಗೌಡ ಜಾಲಾಡೆ ಮತ್ತಿತರರಿದ್ದರು.
ಮುಗೇರಡ್ಕ ಸೇತುವೆ ನಿರ್ಮಾಣಕ್ಕೆ ಡಿಪಿಆರ್
ಮುಗೇರಡ್ಕದಲ್ಲಿ ಶಾಶ್ವತ ಸೇತುವೆ ನಿರ್ಮಾಣ ಆವಶ್ಯಕತೆ ಪರಿಗಣಿಸಿ ಈಗಾಗಲೇ 40ಲಕ್ಷ ರೂ. ವೆಚ್ಚದಲ್ಲಿ ಡಿಪಿಆರ್ ನಡೆಸಲು ಟೆಂಡರ್ ಕರೆಯಲಾಗಿದೆ. ಮಳೆಗಾಲ ಕಳೆದು ದೊಡ್ಡ ಮಟ್ಟದ ಸೇತುವೆಯೊಂದಿಗೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿ ಜತೆ ಮಾತುಕತೆ ನಡೆಸಿದ್ದೇನೆ.
-ಹರೀಶ್ ಪೂಂಜ, ಶಾಸಕರು