Advertisement
ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆಯವರ ಅಧ್ಯಕ್ಷತೆಯಲ್ಲಿ ಹೊಸಗದ್ದೆ ಹಿ.ಪ್ರಾ. ಶಾಲೆಯಲ್ಲಿ ಮಾ. 15ರಂದು ನಡೆದ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಎಚ್. ಚರ್ಚಾ ನಿಯಂತ್ರಣಾಧಿಕಾರಿ ಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಗೋಪಾಲಕೃಷ್ಣ ನಾಯಕ್ ಪುರೋಳಿ, ಕಡಬ ತಾಲೂಕು ರಚನೆ ಯಾದಲ್ಲಿ ಬಜತ್ತೂರು ಗ್ರಾಮವೂ ಕಡಬ ತಾಲೂಕಿಗೆ ಸೇರಲಿದೆ. ಬಜತ್ತೂರಿನಿಂದ ಪುತ್ತೂರಿಗೆ 15 ಕಿ.ಮೀ. ದೂರ ಇದ್ದು, ಕಡಬಕ್ಕೆ 30 ಕಿ.ಮೀ. ದೂರವಿದೆ. ನಮಗೆ ಕಡಬಕ್ಕಿಂತ ಪುತ್ತೂರು ತಾಲೂಕು ಕೇಂದ್ರವಾಗಿರುವುದು ಹೆಚ್ಚು ಅನುಕೂಲಕರ. ಆದ್ದರಿಂದ ಬಜತ್ತೂರು ಗ್ರಾಮವನ್ನು ಕಡಬಕ್ಕೆ ಸೇರ್ಪಡೆಗೊಳಿಸುವುದು ಬೇಡ ಎಂದರು. ಇದಕ್ಕೆ ಇತರೇ ಗ್ರಾಮಸ್ಥರು ಬೆಂಬಲ ಸೂಚಿಸಿದ್ದು ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಶಿಕ್ಷಕರ ಕೊರತೆಯಿಂದಾಗಿಯೇ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಆದರೆ ಇದೂ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ. ಎಪ್ರಿಲ್ ತಿಂಗಳಿನಲ್ಲಿ ಶಿಕ್ಷಕ ವರ್ಗಾವಣೆ ಪ್ರಕ್ರಿಯೆ ಮುಗಿಸಿ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಶಿಕ್ಷಕರ ನೇಮಕ ಮಾಡಬೇಕೆಂದು ಗ್ರಾಮಸ್ಥರಾದ ಗೋಪಾಲಕೃಷ್ಣ ನಾಯಕ್, ಜಗದೀಶ್ ರಾವ್ ಮಣಿಕ್ಕಳ, ಗಣೇಶ್ ಕುಲಾಲ್ ಮತ್ತಿತರರು ಒತ್ತಾಯಿಸಿದರು. ಶಿಕ್ಷಕರ ತರಬೇತಿಯನ್ನು ಕಡಿಮೆ ಮಾಡುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ರೈತರಿಗೆ ತರಬೇತಿ ಕೊಡಿ
ಕೃಷಿ ಇಲಾಖೆಯಿಂದ ರೈತರಿಗೆ ಹಲವು ಸವಲತ್ತು ಸಿಗುತ್ತದೆ. ಆದರೆ ಅದರ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ಕೃಷಿ ಇಲಾಖೆಯ ವತಿಯಿಂದ ಹಳ್ಳಿಯ ರೈತರಿಗೆ ಸರಿಯಾದ ಮಾಹಿತಿ ನೀಡುವ ಕೆಲಸ ಆಗಬೇಕೆಂದು ಜಗದೀಶ್ ರಾವ್ ಮಣಿಕ್ಕಳ ಹೇಳಿದರು. ಕೃಷಿ ಅಧ್ಯಯನ ಪ್ರವಾಸಕ್ಕೆ ಜನಪ್ರತಿನಿಧಿಗಳೇ ಹೋಗುತ್ತಾರೆ. ಈ ಸೌಲಭ್ಯ ಕೃಷಿಕರಿಗೆ ಸಿಗುತ್ತಿಲ್ಲ ಎಂದು ಗೋಪಾಲಕೃಷ್ಣ ನಾಯಕ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಹಾಯಕ ಭರಮಣ್ಣ, ಕೃಷಿ ಅಧ್ಯಯನ ಪ್ರವಾಸದ ಕುರಿತಂತೆ ಆಯಾ ಕ್ಷೇತ್ರದ ಜಿ.ಪಂ. ಸದಸ್ಯರಿಗೆ ಮಾಹಿತಿ ನೀಡಿದ್ದು ತಲಾ ಇಬ್ಬರು ರೈತರನ್ನು ಆಯ್ಕ ಮಾಡಿ ಕಳಿಸಿಕೊಡುವಂತೆ ಸೂಚಿಸಲಾಗಿದೆ ಎಂದರು.
Related Articles
ಪ್ರಾಕೃತಿಕ ವಿಕೋಪದಿಂದ ಅಡಿಕೆ, ತೆಂಗಿನ ಮರಗಳಿಗೆ ಹಾನಿಯಾದಲ್ಲಿ ತೋಟಗಾರಿಕೆ ಇಲಾಖೆಯಿಂದ ಕೊಡುವ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಈ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಗ್ರಾ.ಪಂ. ಮಾಜಿ ಸದಸ್ಯ ಗಂಗಾಧರ ಗೌಡ ನೆಕ್ಕರಾಜೆ, ಜಯಂತ ಪೊರೋಳಿ, ಜಗದೀಶ್ ರಾವ್, ಗಣೇಶ್ ಕುಲಾಲ್ ಮತ್ತಿತರರು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ಅಡಿಕೆ ಮರವೊಂದಕ್ಕೆ ರೂ.150, ತೆಂಗಿನ ಮರವೊಂದಕ್ಕೆ ರೂ. 500ರಂತೆ ಪರಿಹಾರ ಕೊಡಬೇಕು. ಪರಿಹಾರ ಮೊತ್ತ ತಿಂಗಳೊಳಗೆ ರೈತರ ಕೈ ಸೇರುವಂತಾಗಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
Advertisement
ಬಿಲ್ ಪಾವತಿಗೆ ಆಕ್ಷೇಪಬೆದ್ರೋಡಿ ಅಂಗನವಾಡಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ಬಿಲ್ ಪಾವತಿಗೆ ಸಾರ್ವಜನಿಕರ ಆಕ್ಷೇಪಣೆ ಇತ್ತು. ಆದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಿರುವುದು ಯಾಕೆ? ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಸಂತೋಷ್ ಕುಮಾರ್, ಇಲ್ಲಿ 14,000 ರೂ. ಕಾಮಗಾರಿ ನಡೆದಿದೆ. ಲಿಖೀತವಾಗಿ ಗ್ರಾಮಸ್ಥರಿಂದ ಆಕ್ಷೇಪಣೆ ಬಂದಿಲ್ಲ. ಚರಂಡಿ ದುರಸ್ತಿಯಾಗಬೇಕಾಗಿದ್ದು ಮುಂದುವರಿದ ಕಾಮಗಾರಿಯಲ್ಲಿ ಅನುದಾನ ಮೀಸಲಿಟ್ಟು ದುರಸ್ತಿ ಮಾಡಲಾಗುವುದು ಎಂದರು. ವಾರ್ಡ್‌ನ ಸದಸ್ಯೆ ಪ್ರಸಿಲ್ಲಾ ಡಿ’ಸೋಜಾ ಅವರು ಮಾತನಾಡಿ, ಸದ್ರಿ ರಸ್ತೆಯಲ್ಲಿ 14 ಸಾವಿರ ರೂ. ವೆಚ್ಚದಲ್ಲಿ ಕಾಮಗಾರಿ ನಡೆದಿದೆ. ಎಂಜಿನಿಯರ್ ಪರಿಶೀಲನೆ ಬಳಿಕವೇ ಬಿಲ್ ಪಾವತಿಯಾಗಿದೆ ಎಂದರು. ಪ್ಲಾಸ್ಟಿಕ್‌ನಲ್ಲಿರುವ ತಿಂಡಿ ನಿಷೇಧಿಸಿ
ಗ್ರಾಮದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದೆ. ಆದರೆ ಇದು ಸಮರ್ಪಕವಾಗಿ ಜಾರಿಗೊಂಡಿಲ್ಲ. ಫ್ಲೆಕ್ಸ್ ಅಳವಡಿಕೆಗೆ ಮಾತ್ರ ಅನುಮತಿ ನೀಡುತ್ತಿಲ್ಲ. ಉಳಿದಂತೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಲೇಸ್, ಕುರ್‌ಕುರೆಯಂತಹ ತಿಂಡಿಗಳು ಪ್ಲಾಸ್ಟಿಕ್ ಲಕೋಟೆಯಲ್ಲಿಯೇ ಮಾರುಕಟ್ಟೆಗೆ ಬರುತ್ತಿವೆ. ಗ್ರಾಮದಲ್ಲಿ ಇವುಗಳ ಮಾರಾಟ ನಿಷೇಧಿಸಬೇಕೆಂದು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಗಣೇಶ್‌ಕುಲಾಲ್ ಒತ್ತಾಯಿಸಿದರು. ಶ್ಮಶಾನ ಅಭಿವೃದ್ಧಿಗೆ ಕ್ರಮ
ಗಾಣದಮೂಲೆಯಲ್ಲಿ ಶ್ಮಶಾನ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 6 ಲಕ್ಷ ರೂ.ಅನುದಾನ ಮೀಸಲಿಟ್ಟಿದ್ದು, ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕೆಂದು ಪಿಡಿಒ ಪ್ರವೀಣ್ ಕುಮಾರ್ ತಿಳಿಸಿ ದರು. ವಿದ್ಯಾನಗರ-ಮಣಿಕ್ಕಳ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಬರಪೀಡಿತ ತಾಲೂಕೆಂದು ಘೋಷಿಸಿ
ಪುತ್ತೂರು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ತಾಲೂಕಿನಲ್ಲಿ ಬೋರ್‌ವೆಲ್ ಕೊರೆಯಲು ಅನುಮತಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಬಜತ್ತೂರು ಗ್ರಾಮಕ್ಕೆ ಕಿರಿಯ ಆರೋಗ್ಯ ಸಹಾಯಕಿ ನೇಮಕಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಪಶುಸಂಗೋಪನಾ ಇಲಾಖೆಯ ರಾಮ್‌ಪ್ರಕಾಶ್, ಸಿಆರ್‌ಪಿ ಗಣೇಶ್ ನಡುವಾಲ್, ಕೃಷಿ ಸಹಾಯಕ ಭರಮಣ್ಣನವರ್, ತೋಟಗಾರಿಕೆ ಸಹಾಯಕ ಬಸವರಾಜ, ಶಿಶುಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಬಿ. ಹರಿಣಾಕ್ಷಿ, ಮೆಸ್ಕಾಂ ಜೆಇ ಸುಂದರ್, ಗ್ರಾಮಕರಣಿಕರಾದ ಸುಪ್ರೀತಾ ಅವರು ಇಲಾಖಾವಾರು ಮಾಹಿತಿ ನೀಡಿದರು. ತಾ.ಪಂ. ಸದಸ್ಯ ಮುಕುಂದ ಗೌಡ ಬಜತ್ತೂರು, ಚರ್ಚಾ ನಿಯಂತ್ರಣಾಧಿಕಾರಿ ವಿನಯ ಭಂಡಾರಿ, ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಅವರು ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ ಎನ್., ಸದಸ್ಯರಾದ ರಾಜೇಶ್ ಪಿ., ನಝೀರ್ ಬೆದ್ರೋಡಿ, ಪ್ರಸಿಲ್ಲಾ ಡಿ’ಸೋಜಾ, ತೇಜಕುಮಾರಿ, ನವೀನ, ಸೇಸಪ್ಪ ಗೌಡ ಡಿ., ಲೀಲಾವತಿ, ಆನಂದ ಕೆ.ಎಸ್., ಮಾಧವ ಪೂಜಾರಿ, ಶಶಿತಾ, ಗಣೇಶ್ ಕೆ., ಕಮಲಾಕ್ಷಿ, ಚಂಪಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುದ್ಯದಲ್ಲಿ ಸಬ್‌ಸ್ಟೇಷನ್‌ಗೆ ಜಾಗ
ಮುದ್ಯ ದೇವಸ್ಥಾನದ ಸಮೀಪ 4 ಎಕ್ರೆ ಸರಕಾರಿ ಜಾಗವಿದ್ದು ಇಲ್ಲಿ ಮೆಸ್ಕಾಂ ಸಬ್‌ಸ್ಟೇಷನ್‌ಗೆ ಅವಶ್ಯವಿರುವಷ್ಟು ಜಾಗವನ್ನು ಮಂಜೂರುಗೊಳಿಸಬೇಕೆಂದು ಗ್ರಾಮಸ್ಥ ಗಣೇಶ್ ಕುಲಾಲ್ ಒತ್ತಾಯಿಸಿದರು. ಇದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತಗೊಂಡ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬಜತ್ತೂರು ಗ್ರಾಮದಲ್ಲಿ 16 ಎಕ್ರೆ ಡಿಸಿ ಮನ್ನಾ ಜಾಗವಿದ್ದು ಇದರಲ್ಲಿ ಈಗ ಕೆಸಿಡಿಸಿಯ ಗೇರುತೋಟವಿದೆ. ಇದನ್ನು ಅವರು ಬಿಟ್ಟುಕೊಡಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗೋಪಾಲಕೃಷ್ಣ ನಾಯಕ್ ಒತ್ತಾಯಿಸಿದರು.