ಪೆರ್ಲ: ಕುಡಿಯುವ ನೀರಿಗಾಗಿ ಜನತೆ ಪಡುತ್ತಿರುವ ಪರದಾಟ ಭವಿಷ್ಯದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಜಲಸಂರಕ್ಷಣೆ-ಜನಜಾಗೃತಿ ಕಾರ್ಯಕ್ರಮದಲ್ಲಿ ಜನರನ್ನು ಒಟ್ಟು ಸೇರಿಸುವ ನಿಟ್ಟಿನಲ್ಲಿ ಪೆರ್ಲ ಸನಿಹದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ ಈ ಒಂದು ಜಲ ಅಭಿಯಾನ ಆರಂಭಿಸಿದೆ.
ಮಳೆನೀರು ಸಂರಕ್ಷಣೆ, ನೀರಿಂಗಿಸುವಿಕೆ, ಹೆಚ್ಚು ಸಸಿ ಗಳನ್ನು ನೆಡಲು ಜನರನ್ನು ಪ್ರಚೋದಿಸುವುದು ಇವೇ ಮುಂತಾದ ಕಾರ್ಯಗಳನ್ನು ಆಂದೋಲನದಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚು ಜಲಸಮೃದ್ಧಿಗೆ ಹೆಸರಾಗಿರುವ ಪಡ್ರೆ ಬಯಲು ಮತ್ತು ಬಜಕೂಡ್ಲು ಬಯಲಿನಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡಿರುವುದು ಇಲ್ಲಿನ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಈಗಾಗಲೇ ಪಡ್ರೆ ಪ್ರದೇಶದಲ್ಲಿ ಜಲತಜ್ಞ, ಅಂಕಣಕಾರ ಶ್ರೀಪಡ್ರೆ ಅವರ ಮಾರ್ಗದರ್ಶನದಲ್ಲಿ ನೂರಾರು ಮಂದಿ ಯುವಕರು ಜಲಸಂರಕ್ಷಣೆ ಬಗ್ಗೆ ಜನರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
‘
ಬನ್ನಿ ನೀರಿಂಗಿಸೋಣ, ಭವಿಷ್ಯದ ಜೀವನ ಸುಂದರವಾಗಿಸೋಣ’
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್ ವತಿಯಿಂದ ರವಿವಾರ ಈ ರೀತಿಯ ಅಭಿ ಯಾನ ಆರಂಭಿಸಲಾಗಿದೆ. ಕ್ಲಬ್ ಅಧ್ಯಕ್ಷ ದಾಮೋದರ್ ಬಜಕೂಡ್ಲು ಅವರ ನೇತೃತ್ವ ದಲ್ಲಿ ‘ಬನ್ನಿ ನೀರಿಂಗಿಸೋಣ, ಭವಿಷ್ಯದ ಜೀವನ ಸುಂದರವಾಗಿಸೋಣ’ ಎಂಬ ಘೋಷಣೆಯೊಂದಿಗೆ ಮನೆ ಮನೆಗೆ ತೆರಳಿ ಜಲಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ವರ್ಷ ಪೂರ್ತಿ ಹರಿಯುತ್ತಿದ್ದ ಬಜಕೂಡ್ಲು ತೋಡು ಕಳೆದ ಕೆಲವು ವರ್ಷಗಳಿಂದ ಫೆಬ್ರವರಿ ತಿಂಗಳಲ್ಲೇ ಬತ್ತಿ ಬರಡಾಗುತ್ತಿರುವ ಬಗ್ಗೆ ಚಿಂತನೆ ನಡೆಸುವಂತೆ ಹಾಗೂ ಮನೆ ವಠಾರದಲ್ಲಿ ಬೀಳುವ ಮಳೆನೀರನ್ನು ಭೂಮಿಗೆ ಇಂಗಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.
ಕ್ಲಬ್ಬಿನ ಯೋಜನೆ : ಜಲ ಸಂರಕ್ಷಣಾ ಕಾರ್ಯದಲ್ಲಿ ಊರಿನ ಜನರನ್ನು ತೊಡಗಿಸಿಕೊಳ್ಳಲು ಕ್ಲಬ್ ಅಭಿಯಾನ ಹಮ್ಮಿಕೊಂಡಿದೆ. ಮಳೆ ನೀರನ್ನು ಆಯಾ ಪ್ರದೇಶದಲ್ಲಿ ಭೂಮಿಗೆ ಇಂಗುವಂತೆ ಮಾಡಲು ಇಂಗುಗುಂಡಿಗಳ ನಿರ್ಮಾಣ, ಪಾಳುಬಾವಿ, ಉಪಯೋಗಶೂನ್ಯ ಕೊಳವೆಬಾವಿಗಳಿಗೆ ಜಲ ಮರುಪೂರಣ, ವ್ಯಾಪಕ ಸಸಿ ನೆಡುವಿಕೆ ಜತೆಗೆ ತಜ್ಞರಿಂದ ಮಾಹಿತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ಲಬ್ ಯೋಜನೆಯಿರಿಸಿಕೊಂಡಿದೆ.
ಜಲಸಂರಕ್ಷಣಾ ಜಾಗೃತಿ ಕಾರ್ಯದಲ್ಲಿ ಕೈ ಜೋಡಿಸುವಂತೆ ನಾಗರಿಕರಲ್ಲಿ ಕ್ಲಬ್ ಸದಸ್ಯರು ಮನವಿ ಮಾಡಿಕೊಂಡರು.