ಚನ್ನಮ್ಮನ ಕಿತ್ತೂರು: ಪ್ರಗತಿಪರ ಚಿಂತಕರ ಸಂಖ್ಯೆ ಸಾಕಷ್ಟಿದೆ. ದೈಹಿಕವಾಗಿ ಅವರನ್ನು ಕೊಲ್ಲಬಹುದು. ಆದರೆ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲವೆಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೈಲೂರು ನಿಷ್ಕಲ ಮಂಟಪದಲ್ಲಿ ಸಂಶೋಧಕ ಎಂ. ಎಂ. ಕಲಬುರ್ಗಿ ಅವರ ಹೆಸರಿನಲ್ಲಿ ಲಂಡನ್ ಬಸವ ಅಂತರಾಷ್ಟ್ರೀಯ ಪ್ರತಿಷ್ಠಾನ ನೀಡುವ ಪ್ರಗತಿಪರ ಚಿಂತಕ ಪ್ರಶಸ್ತಿಯನ್ನು ರವಿವಾರ ಸ್ವೀಕರಿಸಿ ಅವರು ಮಾತನಾಡಿದರು. 12ನೇ ಶತಮಾನದ ಶರಣರನ್ನು ನೋಡಿದರೆ ಅಚ್ಚರಿಯಾಗುತ್ತದೆ. ನೂರಾರು ವರ್ಷಗಳ ಹಿಂದೆಯೇ ಅಷ್ಟೊಂದು ವಿಚಾರವಂತರು ಇದ್ದರು. ಬಸವಣ್ಣ ಸೇರಿದಂತೆ ಎಲ್ಲರೂ ಮಾನವೀಯ ಅಸ್ಮಿತೆಗೆ ಬೆಲೆ ನೀಡಿದವರು. ಅದೇ ದಾರಿಯಲ್ಲಿ ನಿಂತು ಕೆಲಸ ಮಾಡಿದವರು ಸಂಶೋಧಕ ಕಲಬುರ್ಗಿಯವರು. ಧರ್ಮಾಂಧನೊಬ್ಬ ಅವರನ್ನು ಕೊಂದರೆಂದರೆ ಬಹಳ ನೋವು ತರಿಸುತ್ತದೆ. ಅವರ ಮರಣದ ನಂತರ ಸ್ಥಾಪಿಸಲಾಗಿರುವ ಪ್ರಶಸ್ತಿ ಸ್ವೀಕಾರ ಸಂತೋಷದಾಯಕವಲ್ಲ. ಆದರೆ ಜಾತಿ, ಆಚಾರವಾದಿಗಳಿಗೆ ಸವಾಲ್ ಆಗಿ ಸ್ವೀಕರಿಸುತ್ತಿದ್ದೇನೆಂದು ಹೇಳಿದರು.
ಮನುಷ್ಯನ ಗೌರವ ಮತ್ತು ಮಾನವೀಯತೆಗೆ ನೀಡಿದ ಪ್ರಶಸ್ತಿ ಇದಾಗಿದೆ. ಬೈಲೂರು ಜನತೆಗೆ ಪ್ರಶಸ್ತಿ ಅರ್ಪಣೆ ಮಾಡುವುದಾಗಿ ಹೇಳಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಡಾ. ಬಾಳಣ್ಣ ಶೀಗಿಹಳ್ಳಿ, ಡಾ| ಕಲಬುರ್ಗಿ ಸಾಧನೆ ಸಾಕಷ್ಟಿದೆ. ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ದೃಷ್ಟಿಕೋನದ ನೆಲೆಯಿಂದ ಬೋಧಿಸುತ್ತಿದ್ದರು. ಅವರ ಬೋಧನಾ ವೈಖರಿ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಚಲಿಸುವ ವಿಶ್ವಕೋಶವಾಗಿದ್ದ ಅವರು, ನಾಟಕ, ಸಂಶೋಧನೆ, ಛಂದಸ್ಸು, ಹಳೆಗನ್ನಡ, ಸಂಪಾದನೆ ಹೀಗೆ ಯಾವುದೇ ರಂಗದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಸಂಶೋಧನೆ ಗ್ರಂಥ ಓದಿದರೆ ಅವರನ್ನು ವಿರೋಧಿಸುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಕಲಾವಿದ ಕೆ. ವಿ. ನಾಗರಾಜಮೂರ್ತಿ ವರ್ಚುವಲ್ ವೇದಿಕೆ ಮುಖಾಂತರ ಆಶಯ ನುಡಿಗಳನ್ನಾಡುತ್ತ ಮೌಡ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಹುಲಿಕಲ್ ನಟರಾಜ್, ರಂಗಭೂಮಿ ಕಲಾವಿದ, ವಿಚಾರವಾದಿ ಪ್ರೊ. ಜಿ. ಕೆ. ಗೋವಿಂದರಾವ್, ಪ್ರೊ. ಆಶಾದೇವಿ ಅವರಿಗೆ ಈಗಾಗಲೇ ಕಲಬುರ್ಗಿ ಪ್ರಶಸ್ತಿ ನೀಡಲಾಗಿದೆ. ಈ ಸಾಲಿನಲ್ಲಿ ಪ್ರವಚನಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ನಿಜಗುಣಾನಂದ ಸ್ವಾಮೀಜಿ ಅವರಿಗೆ ನೀಡಲಾಗುತ್ತಿದೆ ಎಂದರು.
ವರ್ಚುವಲ್ ವೇದಿಕೆ ಮೂಲಕ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮಹಾದೇವಯ್ಯ, ಖ್ಯಾತ ವಿಮರ್ಶಕಿ ಎಂ. ಎಸ್. ಆಶಾದೇವಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ಪ್ರಶಸ್ತಿ ಪತ್ರ ಓದಿದರು. ಮಾಜಿ ಶಾಸಕ ಶಿವಶಂಕರ, ಪ್ರೊಬೇಶನರಿ ತಹಶೀಲ್ದಾರ್ ಮಹೇಶ ಪತ್ರಿ, ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನಪದ ಸಂಶೋಧನೆ ಕೇಂದ್ರದ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಕಲಬುರ್ಗಿ ವಿರಚಿತ ರಂಗಗೀತೆ ಹಾಡಿದರು. ಅಥಣಿ ದೇವದಾಸಿ ವಿಮೋಚನಾ ಸಂಸ್ಥೆ ಮುಖ್ಯಸ್ಥ ಬಿ. ಎಲ್. ಪಾಟೀಲ ಸ್ವಾಗತಿಸಿದರು.