Advertisement

ಭಾರೀ ಮಳೆ; ನೆಲಕಚ್ಚಿದ ಮನೆಗಳು : ಕೊಚ್ಚಿ ಹೋದ ಮೇವಿನ ಬಣವೆ

01:42 PM Sep 12, 2020 | sudhir |

ಬೈಲಹೊಂಗಲ: ದೊಡವಾಡ ಗ್ರಾಮದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಸುರಿದ ಮಳೆಗೆ ಅನೇಕ ಮನೆಗಳು ನೆಲ ಕಚ್ಚಿವೆ. ದಿಡ್ಡಿ ಅಗಸಿಯಲ್ಲಿನ ಕರೀಕಟ್ಟಿ ರಸ್ತೆಗುಂಟ ಹರಿದಿರುವ ಹಳ್ಳಕ್ಕೆ ಬಹಳ ವರ್ಷಗಳ ಹಿಂದೆ ನಿರ್ಮಿಸಿರುವ ಕಿರು ಸೇತುವೆ ಬಿರುಸಿನ ಮಳೆಗೆ ಕುಸಿದು ಬಿದ್ದು ಅಪಾರ ಪ್ರಮಾಣದ ನೀರು ರಸ್ತೆ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಸೇತುವೆ ಕುಸಿದು ಹಳ್ಳದ ನೀರು ರಭಸದಿಂದ ಹರಿದಿದ್ದರಿಂದ ನಿವಾಸಿ ಬಸವರಾಜ ಅಂದಾನಶೆಟ್ಟಿಯವರ ಮನೆಗೆ ನೀರು ನುಗ್ಗಿದ್ದಲ್ಲದೇ ಅವರ ಹಿತ್ತಲಿನಲ್ಲಿನ ಮೇವಿನ ಬಣವೆ ಹಾಗೂ ಶೌಚಾಲಯ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಮನೆಗಳಲ್ಲಿ ನೀರು ತುಂಬಿದ್ದರಿಂದ ಹಾಗೂ ಮನೆ ಗೋಡೆಗಳು ಕುಸಿದು ಬೀಳುವ ಆತಂಕದಿಂದ ಕೆಲವರು ಕುಟುಂಬ ಸಮೇತ ಸಮುದಾಯ ಭವನ ದೇವಸ್ಥಾನಗಳಲ್ಲಿ ದಿನ ಕಳೆದಿದ್ದಾರೆ.

Advertisement

ದಿಡ್ಡಿ ಅಗಸಿಯಲ್ಲಿನ ಕರೀಕಟ್ಟಿ ಹಳ್ಳದ ಸೇತುವೆ ಶಿಥಿಲಾವಸ್ಥೆ ತಲುಪಿ ಹಲವು ವರ್ಷಗಳೇ ಕಳೆದಿವೆ. ಈ ಕುರಿತು ಅಲ್ಲಿನ ನಿವಾಸಿಗಳು ಅನೇಕ ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿಗೆ ಮುಂದಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಮಳೆಗಾಲದಲ್ಲಿ ಭರಮ ಅಗಸಿ ಕಡೆಯಿಂದ ಮಳೆ ನೀರಿನ ಜತೆ ಚರಂಡಿ ನೀರು ಅಪಾರ ಪ್ರಮಾಣದಲ್ಲಿ ಹರಿದು ಬಂದು ಮನೆಗಳಿಗೆ ನುಗ್ಗುವುದರಿಂದ ಜನ ನರಕಯಾತನೆ ಅನುಭವಿಸುತ್ತಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳು ಹಾಗೂ ಗ್ರಾಪಂಯವರು ಈ ಬಗ್ಗೆ ಗಮನ ಹರಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಸಾಮಾಜಿಕ ಕಾರ್ಯಕರ್ತ ಮಲ್ಲಪ್ಪ ಯರಿಕಿತ್ತೂರ ಆಗ್ರಹಿಸಿದ್ದಾರೆ.

ಹಲವೆಡೆ ಭಾರೀ ಮಳೆ
ಸಾಂಬ್ರಾ: ಸಾಂಬ್ರಾ, ಬಾಳೆಕುಂದ್ರಿ, ಮೋದಗಾ, ಸುಳೇಭಾವಿ, ಮಾರಿಹಾಳ, ಕರಡಿಗುದ್ದಿ, ಉಚಗಾಂವ, ಮಣ್ಣೂರ, ಹಿಂಡಲಗಾ ಗ್ರಾಮಗಳಲ್ಲಿ ಶುಕ್ರವಾರ ಸುಮಾರು 2 ಗಂಟೆಗೂ ಹೆಚ್ಚು ಕಾಲ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮಣ್ಣೂರ ಗ್ರಾಮದಿಂದ ಗೋಜಗಾ ಮತ್ತು ಅಂಬೆವಾಡಿ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆ ಕಡಿತಗೊಂಡಿತ್ತು. ಈ ರಸ್ತೆ ಸೇತುವೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತು ಸಂಚಾರ ಸ್ಥಗುತಗೊಡಿದೆ. ತಗ್ಗು ಪ್ರದೇಶಗಳಲ್ಲಿ ಹಾಗೂ ಕೆಲವಡೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಗಟಾರ, ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯಿತು. ಬಸವಣ ಕುಡಚಿ ಗ್ರಾಮದ ನರ್ಸರಿ ಬೆಳೆ ಉತ್ಪಾದನೆ ತೋಟದಲ್ಲಿ ನೀರು ನುಗ್ಗಿ ಬೆಳೆಗಳೆಲ್ಲ ಹಾಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next