ಬೈಲಹೊಂಗಲ: ಭಾರತದ ಗೌರವವನ್ನು ಎತ್ತಿ ಹಿಡಿದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ದೇಶಪ್ರೇಮ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕ, ಪಾಲಕರ ಮೇಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಪಟ್ಟಣದ ಮುರಗೋಡ ರಸ್ತೆಯಲ್ಲಿ ಕಿತ್ತೂರು ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರ, ಪುರಸಭೆ ವತಿಯಿಂದ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೂತನ ಪ್ರತಿಮೆ, ಪ್ಲಾಟ್ ಫಾರ್ಮ್, ಐಕ್ಯ ಸ್ಥಳದಲ್ಲಿರುವ ದ್ವಿಮುಖ ರಸ್ತೆಯ ವಿದ್ಯುತ್ ಎಲ್‌ಇಡಿ ಬಲ್ಬ್ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಮುಂದೆ ಬೆಳಗಾವಿಯಿಂದ ದೇಶ, ವಿದೇಶಗಳಿಗೆ ವಿಮಾನ ಹಾರಾಟ ಆರಂಭಗೊಳ್ಳಲಿದೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರಿಡಲು ರಾಜ್ಯ ಸರ್ಕಾರದಿಂದ ಅನುಮೋದನೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರದಲ್ಲಿ ಅದರ ಜವಾಬ್ದಾರಿ ವಹಿಸಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರಿಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಚನ್ನಮ್ಮನ ಐಕ್ಯಸ್ಥಳ ಅಭಿವೃದ್ಧಿಗೆ ಸುಮಾರು 3 ಕೋಟಿ ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಪಡಿಸಲಾಗುವುದಲ್ಲದೇ ಪ್ರತಿಮೆಗೆ ಲೋಟಸ್ ಮಾದರಿಯಲ್ಲಿ ಸುಮಾರು 75 ಲಕ್ಷ ರೂ.ವೆಚ್ಚದಲ್ಲಿ ಗ್ಲಾಸ್ ಹೌಸ್ ನಿರ್ಮಿಸಲಾಗುವುದು ಎಂದರು.
ಎಸಿ ಶಿವಾನಂದ ಭಜಂತ್ರಿ, ಚಿತ್ರನಟ ಶಿವರಂಜನ ಬೋಳನ್ನವರ, ಉದ್ಯಮಿ ವಿಜಯ ಮೆಟಗುಡ್ಡ, ಕಲಾವಿದ ಸಿ.ಕೆ. ಮೆಕ್ಕೆದ, ಕಸಾಪ ಮಾಜಿ ತಾಲೂಕಾಧ್ಯಕ್ಷ ಈಶ್ವರ ಹೋಟಿ, ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿದರು.
ಭಗಳಂಬಾದೇವಿ ಆರಾಧಕ ಈರಯ್ಯಸ್ವಾಮಿ ಹಿರೇಮಠ, ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಸಾನ್ನಿಧ್ಯ ವಹಿಸಿದ್ದರು. ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ, ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ಅಭಿಯಂತರಾದ ಎಸ್.ಬಿ.ಪಾಟೀಲ, ಎಸ್.ಕೆ.ಮುಗಸಜ್ಜಿ, ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಉಣ್ಣಿ, ತಾಪಂ ಸದಸ್ಯೆ ಶೈಲಾ ಸಿದ್ರಾಮನಿ, ತಾಪಂ ಇಒ ಸಮೀರ್ ಮುಲ್ಲಾ, ಸಿಪಿಐ ಮಂಜುನಾಥ ಕುಸುಗಲ್ಲ, ಪಿಎಸ್‌ಐ ಎಂ.ಎಸ್.ಹೂಗಾರ, ಗುರುಪುತ್ರಪ್ಪ ಹೊಸಮನಿ, ಪಾರಿಶಪ್ಪ ಭಾವಿ, ಸ್ವಾತಂತ್ರ್ಯ ಹೋರಾಟಗಾರ ಮುರುಳೀಧರ ಮಾಳ್ಳೋದೆ, ಕುಮಾರ ದೇಶನೂರ, ಗುರುಪಾದ ಕಳ್ಳಿ, ಸುರೇಶ ಮಾಟೋಳಿ, ಬಸವರಾಜ ನೀಲಗಾರ, ಬಸವರಾಜ ಜನ್ಮಟ್ಟಿ ಇತರರು ಹಾಜರಿದ್ದರು.