Advertisement

ಬೈಲಹೊಂಗಲ: ರಾಯಣ್ಣನ ನೆಲದಲ್ಲಿ ಕುಸ್ತಿಪಟುಗಳ ಕಾದಾಟ!

06:09 PM Jan 19, 2024 | Team Udayavani |

ಉದಯವಾಣಿ ಸಮಾಚಾರ
ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಗ್ರಾಮದ ಗ್ರಾ.ಪಂ. ಆವರಣದಲ್ಲಿ ಗುರುವಾರ ನಡೆದ ಪುರುಷರ ಮತ್ತು ಮಹಿಳೆಯರ ಹೊನಲುಬೆಳಕಿನ ರಾಷ್ಟ್ರ ಮಟ್ಟದ ಜಂಗೀ ನಿಕಾಲಿ ಕುಸ್ತಿಗಳು ಸಹಸ್ರಾರು ಕುಸ್ತಿಪ್ರೇಮಿಗಳನ್ನು ರೋಮಾಂಚನಗೊಳಿಸಿತು.

Advertisement

ಕುಸ್ತಿ ಕಣವನ್ನು ಹೂವುಗಳಿಂದ ಶೃಂಗರಿಸಲಾಗಿತ್ತು. ಪೈಲ್ವಾನರನ್ನು ಪ್ರೇಕ್ಷಕರು ಹುರುದುಂಬಿಸಿದರು. ವಿಜಯಪುರ ಭೂತನಾಳ
ತಾಂಡದ ಅಶೋಕ ವಾಲಿಕರ ತಂಡದ ಹಲಿಗೆ ವಾದನ ಕುಸ್ತಿ ಪಟುಗಳಿಗೆ, ಪ್ರೇಕ್ಷಕರಿಗೆ ಹುಮ್ಮಸ್ಸು ನೀಡಿತು. ಒಟ್ಟು 30ಕ್ಕೂ ಹೆಚ್ಚು ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು.

ಪುರುಷ ವಿಭಾಗ: ಮಹಾರಾಷ್ಟ್ರ ಮಹಾನ್‌ ಭಾರತ ಕೇಸರಿ ಪೈ.ಜ್ಞಾನೇಶ್ವರ (ಮೌಳಿ) ಜಮದಾಳೆ ಜೊತೆ ಸೆಣಸಿದ ಹರಿಯಾಣದ ರಾಷ್ಟ್ರೀಯ ಮಟ್ಟದ ಕುಸ್ತಿಪಟು ವಿಶಾಲ ಡೊಲು ಫ್ರಂಟ್‌ ಜೀಸಾ ಡಾವ್‌ ಪೇಚ್‌ ಮೂಲಕ ವಿಜಯದ ನಗೆ ಬೀರಿದರು. ದೆಹಲಿ ಪೈ. ಸಚಿನಕುಮಾರ-ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಪೈ.ಕಾರ್ತಿಕ ಕಾಟೆ ನಡುವಿನ ಕುಸ್ತಿಯಲ್ಲಿ ಕಾಟೆ ಇವರು ಏಕ ಲಂಗೀ ಡಾಂಗ್‌ ಮೂಲಕ ವಿಜಯ ಪತಾಕೆ ಹಾರಿಸಿದರು. ಧಾರವಾಡದ ಕರ್ನಾಟಕ ಕೇಸರಿ ಪೈ.ನಾಗರಾಜ ಬಸಿಡೋಣಿ ಇವರು ಏಕ ಚಕ್ಕ್ ಡಾವ್‌ ಪೇಚ್‌ ಮೂಲಕ ಹರಿಯಾಣದ‌ ಪೈ.ಉದಯ ಅವರನ್ನು ಸೋಲಿಸಿದರು. ಕಲಬುರಗಿಯ ಪೈ.ಪ್ರವೀಣ ಹಿಪ್ಪರಗಿ ಜೊತೆ ಸೆಣಸಿದ ಮಹಾರಾಷ್ಟ್ರದ ಪೈ. ಪ್ರಣಿತ್‌ ಭೋಸಲೆ ಸೋಲುಂಡರು.

ದಾವಣೆಗೆರೆಯ ಪೈ.ಬಸವರಾಜ ಹುದಲಿ ಜೊತೆ ಸೆಣಸಿದ ಸೊಲ್ಲಾಪೂರದ ಪೈ.ಸಾಗರ ಚೌಗಲೆ ವಿಜಯ ಪತಾಕೆ ಹಾರಿಸಿದರು.
ಅಥಣಿಯ ಪೈ.ಮಹೇಶಕುಮಾರ ಲಂಗೋಟಿ ಅವರು ಮಹಾರಾಷ್ಟ್ರದ ಪೈ.ಚೇತನ ಕತಗಾರ ಅವರನ್ನು ಸೋಲಿಸಿದರು.

ಮಹಿಳಾ ವಿಭಾಗ: ದಸರಾ ಕಿಶೋರಿ ಹಳಿಯಾಳದ ಪೈ. ಪ್ರೀನ್ಸಟ್‌ ಸಿದ್ಧಿ-ಮಹಾರಾಷ್ಟ್ರದ ಪೈ.ದೀಪಾಲಿ ನಡುವಿನ ಕುಸ್ತಿ ಹಾಗೂ ಹಲಗಾದ ಪೈ.ಲಕ್ಷ್ಮೀ ಪಾಟೀಲ-ಮಹಾರಾಷ್ಟ್ರದ ಪೈ.ಸಾಧನಾ ಕಾಟ್ಕರ್‌ ನಡುವಿನ ಕುಸ್ತಿಗಳು ಸಮಬಲಗೊಂಡವು. ಬಾಗಲಕೋಟೆಯ ಪೈ.ಕಾವೇರಿ ಯಾಡಹಳ್ಳಿ ಅವರನ್ನು ಸೋಲಿಸಿ ಗದಗದ ಪೈ.ಭುವನೇಶ್ವರಿ ವಿಜಯದ ಪತಾಕೆ ಹಾರಿಸಿದರು.

Advertisement

ಬೆಳಗಾವಿಯ ಪೈ.ಭಾಗ್ಯಶ್ರೀ-ಗದಗದ ಪೈ. ವೈಷ್ಣವಿ ನಡುವಿನ ಕುಸ್ತಿ ಸಮಬಲಗೊಂಡಿತು. ಬೆಳಗಾವಿಯ ಪೈ.ನಿಹಾರಿಕಾ ಯಾದವ ವಿರುದ್ಧ ಮಹಾರಾಷ್ಟ್ರದ ಅಮೃತಾ ಮಿರಗೆ ಗೆದ್ದರು. ಶಾಸಕ ಮಹಾಂತೇಶ ಕೌಜಲಗಿ, ತಾ.ಪಂ. ಇಒ ಸುಭಾಸ ಸಂಪಗಾಂವಿ, ತಹಶೀಲ್ದಾರ್‌ ಸಚ್ಚಿದಾನಂದ ಕುಚನೂರ, ಗ್ರಾ.ಪಂ.ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕ್ಕೀರಪ್ಪ ಕುರಿ, ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನವರ, ರತ್ನಾ ಆನೇಮಠ, ಈರಣ್ಣಾ ಹಳಿಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವಣ್ಣವರ, ಗಂಗವ್ವಾ ಹೊಳೆಪ್ಪನವರ, ಮಂಜುಳಾ ಕೊಡೊಳ್ಳಿ, ಸನಾ ಖುದ್ದುನವರ, ಗಂಗವ್ವಾ ಪೂಜೇರ, ಪಿಡಿಒ ಮಾರುತಿ ಕಾಂಬಳೆ, ಗಣ್ಯರಾದ ಅರುಣ ಯಲಿಗಾರ, ಮಹೇಶ ಹಿರೇಮಠ, ಆಕಾಶ ಮಾಲಬನ್ನವರ, ಕುಸ್ತಿಪ್ರೇಮಿಗಳು ಉಪಸ್ಥಿತರಿದ್ದರು. ಮಾಜಿ ಪೈ.ರತ್ನಕುಮಾರ ಮಠಪತಿ, ತರಬೇತುದಾರ ನಾಗರಾಜ ಎ.ಆರ್‌.
ಕೆ. ನಿರೂಪಿಸಿದರು. ಮಾಜಿ ಪೈ. ವಿಠಲ ಅಂದಾನಿ, ಅಶೋಕ ಮತ್ತಿಕೊಪ್ಪ, ರಾಜೇಸಾಬ ಉಗರಗೋಳ, ನಾಗರಾಜ ಭಟ್ಟಿ, ಮೀರಾ,
ಮಹಾಂತೇಶ ತುರಮರಿ, ಮಲ್ಲಿಕಾರ್ಜುನ ಹೊಂಗಲಮಠ, ಅಶೋಕ ನಾಗನೂರ ಪಂಚರಾಗಿ ಕಾರ್ಯನಿರ್ವಹಿಸಿದರು.

ಜನಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಅಂಗವಾಗಿ ಬುಧವಾರ ರಾತ್ರಿ ನಡೆದ ಸಾಂಸ್ಕೃತಿಕ, ರಸಮಂಜರಿ
ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಪ್ರವೀಣ ಗಸ್ತಿ ಅವರ ಹಾಸ್ಯ ಸಂಜೆಯ ಮಾತುಗಳು ಜನರನ್ನು ನಗೆಗಡಲಲ್ಲಿ ತೇಲಿಸಿತು. ರೂಪಾ ಖಡಗಾವಿ ಅವರ ತತ್ವ ಪದ, ಸಂಗೊಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ರೂಪಕ ಗಮನ ಸೆಳೆಯಿತು. ಆರಾಧ್ಯಾ ಸಂಪಗಾಂವಿ ಅವರ ನೃತ್ಯ, ಶಂಕರ ಬೆಣ್ಣಿ ಮತ್ತು ತಂಡದಿಂದ ನಡೆದ ಭಜನಾ ಪದಗಳು ಅದ್ಭುತವಾಗಿತ್ತು.

ಯದುಕುಮಾರ ಅವರ ನಾದಸ್ವರ, ಸಂಗೊಳ್ಳಿ ಸಾಯಿ ಕಿರಿಯ ಪ್ರಾಥಮಿಕ ಶಾಲೆಯ ದೇಶಭಕ್ತಿ ಗೀತೆಗಳ ನೃತ್ಯಕ್ಕೆ ಜನ ಮನಸೋತರು. ಚೆನ್ನಪ್ಪ ಕಾಂಬಳೆ, ಡಾ.ರಾಮು ಮೂಲಗಿ ಅವರ ಜನಪದ ಸಂಗೀತ, ಶಾರದಾ ಚಂಡೆ ಬಳಗದ ಚಂಡೆ ವಾಯಲಿನ್‌, ಡಾ.ಸುಜಯ ತಂಡದ ನೃತ್ಯ ವೈವಿಧ್ಯ ಅತ್ಯಾಕರ್ಷಕವಾಗಿತ್ತು. ಚಲನ ಚಿತ್ರ ಹಿನ್ನಲೆ ಗಾಯಕ ಚಂದನ ಶೆಟ್ಟಿ
ತಂಡದಿಂದ ನಡೆದ ರಸಮಂಜರಿಯಲ್ಲಿ ವಿವಿಧ ಚಲನ ಚಿತ್ರಗೀತೆಗಳಿಗೆ ಪ್ರೇಕ್ಷಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ತಡ ರಾತ್ರಿವರೆಗೆ
ವೇದಿಕೆಯ ಮುಂಭಾಗದಲ್ಲಿ ಜನರನ್ನು ತಮ್ಮ ಹಿಡಿದಿರಿಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾದವು.

Advertisement

Udayavani is now on Telegram. Click here to join our channel and stay updated with the latest news.

Next