ಪಾಟ್ನಾ: ಬಿಹಾರ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ದಾಖಲಿಸಿದ್ದ ಮಾನಹಾನಿ ಪ್ರಕರಣದಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಗೆ ಶನಿವಾರ ಜಾಮೀನು ಸಿಕ್ಕಿದೆ.
ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಪ್ರಚಾರ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಪಿಎನ್‌ಬಿ ಹಗರಣದ ಕುರಿತು ಮಾತನಾಡುತ್ತಾ ‘ಎಲ್ಲ ಕಳ್ಳರ ಅಡ್ಡ ಹೆಸರೂ ಮೋದಿ ಎಂದೇ ಏಕಿದೆ’ ಎಂದು ಪ್ರಶ್ನಿಸಿದ್ದರು. ರಾಹುಲ್ ಅವರ ಈ ಹೇಳಿಕೆ ಯಿಂದ ‘ಮೋದಿ’ ಎಂಬ ಸರ್‌ನೇಮ್ ಹೊಂದಿರುವ ಎಲ್ಲರಿಗೂ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿ ಸುಶೀಲ್ ಮೋದಿ ಅವರು ಪಾಟ್ನಾದ ಕೋರ್ಟ್‌ನಲ್ಲಿ ಮಾನಹಾನಿ ಕೇಸ್ ದಾಖಲಿಸಿದ್ದರು.
ಈ ಹಿನ್ನೆಲೆ ಶನಿವಾರ ಪಾಟ್ನಾದ ನ್ಯಾಯಾ ಲಯಕ್ಕೆ ರಾಹುಲ್ ಗಾಂಧಿ ಹಾಜರಾಗಿದ್ದು, ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಆ.8ರಂದು ಮುಂದಿನ ವಿಚಾರಣೆ ನಡೆಯಲಿದೆ. ಇದಕ್ಕೂ ಮುನ್ನ ಕೋರ್ಟ್ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, ‘ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹಾಗೂ ಬಿಜೆಪಿ- ಆರೆಸ್ಸೆಸ್ ವಿರುದ್ಧ ಯಾರೇ ಧ್ವನಿಯೆತ್ತಿದರೂ ಅವರನ್ನು ಟಾರ್ಗೆಟ್ ಮಾಡಿ, ಕೇಸು ದಾಖಲಿಸಲಾಗುತ್ತಿದೆ. ಹಾಗಂತ ನಾನು ನನ್ನ ಹೋರಾಟವನ್ನು ನಿಲ್ಲಿಸದೇ, ದೇಶದ ಬಡವರಿಗಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಿಂದೆ ಆರೆಸ್ಸೆಸ್ ಮನಸ್ಥಿತಿ ಕೆಲಸ ಮಾಡಿದೆ ಎಂಬ ಹೇಳಿಕೆ ಕುರಿತ ಪ್ರಕರಣ ಸಂಬಂಧ 2 ದಿನಗಳ ಹಿಂದಷ್ಟೇ ರಾಹುಲ್ಗೆ ಮುಂಬೈ ಕೋರ್ಟ್ ಜಾಮೀನು ನೀಡಿತ್ತು.
ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ: ಮುಂಬೈ ಮಾದರಿಯಲ್ಲೇ ಬಿಹಾರದ ಪಾಟ್ನಾದಲ್ಲೂ ಕೋರ್ಟ್ ಆವರಣದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ರಾಹುಲ್ ರಾಜೀನಾಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದ್ದು ಕಂಡುಬಂತು.