Advertisement

ಬೈಕಂಪಾಡಿ: ಸಮಸ್ಯೆ ಬಗೆಹರಿಸಲು ಕೈಗಾರಿಕೆ ಅದಾಲತ್‌ ನೆರವಾಗಲಿ

11:43 AM May 11, 2022 | Team Udayavani |

ಬೈಕಂಪಾಡಿ: ರಾಜ್ಯದ 2ನೇ ಅತೀ ದೊಡ್ಡ ಕೈಗಾರಿಕೆ ಪ್ರದೇಶವಾದ ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿ ತುರ್ತಾಗಿ ಆಗಬೇಕಾದ ಮೂಲಸೌಕರ್ಯ ಅಭಿವೃದ್ಧಿಗಳು ಆಡಳಿತ ಯಂತ್ರದ ನಿರ್ಲಕ್ಷ್ಯ ದಿಂದ ನಿಧಾನಗತಿಯಲ್ಲಿ ಸಾಗಿವೆ.

Advertisement

2015ರಿಂದ ಟೌನ್‌ಶಿಪ್‌ ಯೋಜನೆಗೆ ಬೈಕಂಪಾಡಿ ಸಣ್ಣ ಕೈಗಾರಿಕೆ ಸಂಘವು ಸತತ ಒತ್ತಡ ಹೇರುತ್ತಾ ಬಂದಿದ್ದರೂ ನಗರಾಭಿವೃದ್ಧಿ ಇಲಾಖೆಯಿಂದ ಪೂರಕ ಸ್ಪಂದನೆ ದೊರಕಿಲ್ಲ. ಕಾಯ್ದೆಯಲ್ಲಿ ತಿದ್ದುಪಡಿ ಮಾಡದೆ ಯಾವುದೇ ಕಡತಗಳು ಮುಂದೆಹೋಗುತ್ತಿಲ್ಲ. ಇದರಿಂದಾಗಿ ಇಲ್ಲಿನ ಸಮಸ್ಯೆಗಳು ಬಾಕಿಯುಳಿದಿವೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾವಣೆ ಆಗುತ್ತಿದ್ದರೂ ಇದರ ಉಪಯೋಗ ಮಾಡಿಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಾಗಿದೆ.

ನೀರು ಶುದ್ಧೀಕರಣ ಘಟಕದ ಆವಶ್ಯಕತೆ ಯಿದ್ದು, ಈ ಹಿಂದಿನಂತೆ ಕೋಟ್ಯಂತರ ರೂ. ಖರ್ಚು ಮಾಡುವ ಪ್ರಮೇಯವಿಲ್ಲ. ನದಿ, ತೊರೆ, ಸಮುದ್ರದ ಮಾಲಿನ್ಯ ತಡೆಯಲು ಎಸ್‌ಟಿಪಿ ಘಟಕ ಪ್ರಾಮುಖ್ಯವಾಗಿದೆ. ಜಲಮಾಲಿನ್ಯಕ್ಕೆ ಕುಳಾಯಿ ಸಮೀಪದ ಬಗ್ಗುಂಡಿ ಕೆರೆ, ಜೋಕಟ್ಟೆ ಪ್ರದೇಶದ ಹಳ್ಳ, ತೊರೆಗಳು ಹರಿಯುವ ಪ್ರಕೃತಿ ರಮಣೀಯ ಪ್ರದೇಶ ಇಂದು ದುರ್ವಾಸನೆ ಬೀರುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಹದೆಗೆಟ್ಟ ಸರ್ವಿಸ್‌ ರಸ್ತೆ

ಕೈಗಾರಿಕೆ ಪ್ರದೇಶ, ಎನ್‌ಎಂಪಿಟಿಗೆ ನಿತ್ಯ ಸಾವಿರಾರು ಲಾರಿಗಳ ಓಡಾಟವಿದ್ದು, ಬೈಕಂಪಾಡಿ ಕೈಗಾರಿಕೆ ಪ್ರದೇಶಕ್ಕೆ ತಿರುಗುವ ರಸ್ತೆ, ಸರ್ವಿಸ್‌ ರಸ್ತೆಯ ಸ್ಥಿತಿ ಹದೆಗೆಟ್ಟಿದೆ. ಇಲ್ಲಿನ ರೈಲ್ವೇ ಮೇಲ್ಸೇತುವೆ ಕೆಳಭಾಗದಲ್ಲಿ ಅಂಡರ್‌ ಪಾಸ್‌ ಮಾಡಲು ಯೋಜನೆ ರೂಪಿಸಿದ್ದರೂ ಅರೆ ಬರೆ ಕಾಮಗಾರಿಯಿಂದ ಇದರ ಪ್ರಯೋಜನ ಕೈಗಾರಿಕೆ ಪ್ರದೇಶಕ್ಕೆ ಇನ್ನೂ ಸಿಕ್ಕಿಲ್ಲ. ಪರಿಣಾಮ ಕೂಳೂರು, ಪಣಂಬೂರು, ಬೈಕಂಪಾಡಿ ಮತ್ತಿತರ ಕಡೆಯಿಂದ ಬರುವ ಸಾವಿರಾರು ಲಾರಿಗಳು ಹೆದ್ದಾರಿಯಲ್ಲಿ ತಿರುವು ಪಡೆಯುತ್ತಿದ್ದು, ಸುಲಲಿತ ಓಡಾಟಕ್ಕೆ ಇದು ತಡೆಯಾಗುತ್ತಿದೆ.

Advertisement

ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ಹತ್ತು ಹಲವು ಸಭೆ, ಚರ್ಚೆಗಳಾದರೂ ಇದುವರೆಗೂ ಹೇಳಿಕೆಗೆ ಸೀಮಿತವಾಗಿದೆ. ವಿವಿಧೆಡೆ ಜಾಗ ಗುರುತಿಸಿದರೂ ತುರ್ತು ನಿರ್ಧಾರ ಕೈಗೊಳ್ಳುವ, ಅನುಮೋದನೆ ನೀಡುವ ಕೆಲಸ ಕಾರ್ಯಗಳು ಆಡಳಿತ ಯಂತ್ರದ ನಿಧಾನ ಗತಿಯ ಕಾರ್ಯ ವೈಖರಿಯಿಂದ ಮುಂದೆ ಹೋಗುತ್ತಿಲ್ಲ. ಟ್ರಕ್‌ ಟರ್ಮಿನಲ್‌ನಿಂದ ಹೆದ್ದಾರಿ ಬದಿ ನಿಲ್ಲಿಸುವ ಲಾರಿಗಳಿಂದ ಮುಕ್ತಿ ದೊರೆತು ವಾಹನ ಅಪಘಾತ ಇಳಿಕೆಯಾಗುವುದರಲ್ಲಿ ಸಂಶಯವಿಲ್ಲ.

ಲಾರಿಗಳ ಓಡಾಟಕ್ಕೆ ಅಡಚಣೆ

ಕೆಐಡಿಬಿ ವ್ಯಾಪ್ತಿಯ ಈ ಕೈಗಾರಿಕೆ ಪ್ರದೇಶದಲ್ಲಿ ಹಾಕಲಾದ ನೀರಿನ ಕೊಳವೆಗಳು ಓಬಿರಾಯನ ಕಾಲದ್ದಾಗಿದ್ದು, ಇದೀಗ ನೀರಿನ ಒತ್ತಡ ತಾಳಲಾರದೆ ಬಿರುಕು ಬಿಡುತ್ತಿವೆ. ನೀರಿನ ಪೋಲು ತಡೆಯುವ ಉದ್ದೇಶದಿಂದ ಹಾಗೂ ಸಮರ್ಪಕವಾಗಿ ನೀರಿನ ಸರಬರಾಜು ಉದ್ದೇಶದಿಂದ ಹೊಸ ಪೈಪ್‌ಲೈನ್‌ ವ್ಯವಸ್ಥೆ ಅಗತ್ಯವಿದೆ. ಜಲಸಿರಿ ಯೋಜನೆಯ ಬಳಕೆಗೆ ಕೈಗಾರಿಕೆ ಪ್ರದೇಶಕ್ಕೆ ಅವಕಾಶ ನೀಡಲಾಗಿಲ್ಲ. ಕುಡಿಯುವ ನೀರಿನ ಯೋಜನೆಯೆಂದು ಸರಕಾರ ಜಾರಿ ಮಾಡಿರುವುದರಿಂದ ಅವರ ಮನವಿಯನ್ನು ತಳ್ಳಿಹಾಕಲಾಗಿದೆ. ಇನ್ನು ಕಾಮಗಾರಿಗೆಂದು ಅಗೆದು ಹಾಕಲಾದ ರಸ್ತೆಗಳನ್ನು ಕಾಮಗಾರಿ ಮುಗಿದ ಬಳಿಕ ಮತ್ತೆ ಸುಸ್ಥಿತಿಗೆ ತರಲು ವಿಳಂಬಿಸುತ್ತಿರುವುದು ಪ್ರದೇಶಕ್ಕೆ ಬರುವ ಲಾರಿಗಳ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತೂಂದು ಸಮಸ್ಯೆ,ಸಾವಿರಾರು ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದು, ಮಹಿಳಾ ವೈದ್ಯೆಯ ನೇಮಕವಾಗಿಲ್ಲ. ಕಂಪೆನಿಗಳು ಇಎಸ್‌ಐಗೆ ನಿಗದಿತ ಪಾವತಿ ಮಾಡುತ್ತಿದ್ದರೂ ಇಲ್ಲಿನ ಆಸ್ಪತ್ರೆಗೆ ಹೆಚ್ಚಿನ ಸೌಕಯಒದಗಿಸದೆ ನೌಕರರು ದಿನವಿಡೀ ಚಿಕಿತ್ಸೆ, ಔಷಧಕ್ಕೆ ಕಾಯುವಂತಾಗಿದೆ.

-ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next