Advertisement
ತಾಲೂಕಿನ ಮಲೆಯೂರು ಗ್ರಾಮದ ಹೊರ ವಲಯದಲ್ಲಿರುವ ಕನಕಗಿರಿ ಬೆಟ್ಟ ಪ್ರದೇಶದಲ್ಲಿ 18 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ವಿಗ್ರಹವನ್ನು 2017ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಆ ಸಂದರ್ಭದಲ್ಲಿ ನಡೆದಿದ್ದ ಮಹಾಮಸ್ತಕಾಭಿಷೇಕ ಬಿಟ್ಟರೆ ಇದು, ಎರಡನೇ ಮಹಾಮಸ್ತಕಾಭಿಷೇಕ.
Related Articles
Advertisement
ಕಳಸದ ಅಭಿಷೇಕ ಮುಗಿದ ನಂತರ ಶುದ್ಧ ಜಲಾಭಿಷೇಕ, ಎಳನೀರು, ಕ್ಷೀರಾಭಿಷೇಕ, ಇಕ್ಷುರಸ, ಸರ್ವ ಔಷಧ, ಕಲ್ಕಚೂರ್ಣ, ಅರಿಶಿನ, ಚತುಷ್ಕೋನ ಕಳಸ, ಶ್ರೀಗಂಧ, ಕೆಂಪು ಚಂದನದ ಅಭಿಷೇಕಗಳು ನಡೆದವು.
ಬಳಿಕ ಪುಷ್ಪವೃಷ್ಟಿ, ಶಾಂತಿಧಾರಾ, ಮಹಾಮಂಗಳಾರತಿ ಹಾಗೂ ಮಹಾಹಾರ ಕಾರ್ಯಕ್ರಮಗಳು ನಡೆದವು. ಈ ಅಭಿಷೇಕದ ಸಂದರ್ಭದಲ್ಲಿ ಬಾಹುಬಲಿ ಮೂರ್ತಿ ತರ ತರಹದ ಬಣ್ಣಗಳ ಮೂಲಕ ಕಂಗೊಳಿಸಿಸಿತು.
ಮಾಜಿ ಸಂಸದ ಆರ್. ಧ್ರುವನಾರಾಯಣ, ಚಾಮುಲ್ ನಿರ್ದೇಶಕ ರವಿಶಂಕರ್, ಮೂರ್ತಿ ವಿಗ್ರಹ ದಾನಿ ವಿಶಾಲೇಂದ್ರಯ್ಯ ಹಾಗೂ ಜೈನ ಸಮುದಾಯದ ಪ್ರಮುಖರು ಹಾಜರಿದ್ದರು.
ಈ ಬಾಹುಬಲಿ ವಿಗ್ರಹದ ದಾನಿಗಳು ಮೈಸೂರಿನ ವಿಶಾಲೇಂದ್ರಯ್ಯ ಕುಟುಂಬ. 18 ಅಡಿಯ ಈ ಏಕಶಿಲಾ ಪ್ರತಿಮೆಯನ್ನು ಬೆಂಗಳೂರು ಬಳಿಯ ಬಿಡದಿಯ ಶಿಲ್ಪಿ ಅಶೋಕ್ ಗುಡಿಗಾರ್ ಕೆತ್ತಿದ್ದಾರೆ. ಈ ವಿಗ್ರಹ ಪ್ರತಿಷ್ಠಾಪನೆಯ ಪರಿಕಲ್ಪನೆ ಕನಕಗಿರಿ ಕ್ಷೇತ್ರದ ಶ್ರೀ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಅವರದು.
ಬಾಹುಬಲಿ ಎಲ್ಲವನ್ನೂ ಗೆದ್ದ ಮಹಾ ಪರಾಕ್ರಮಿ : ಶ್ರೀ ಶಿವರಾತ್ರಿ ದೇಶಿಕೆಂದ್ರ ಸ್ವಾಮೀಜಿ :
ಬಾಹುಬಲಿ ಎಲ್ಲವನ್ನೂ ಗೆದ್ದ ಮಹಾ ಪರಾಕ್ರಮಿ. ಹಾಗಿದ್ದರೂ ವಿರಾಗಿಯಾಗಿ ಸರ್ವವನ್ನೂ ತ್ಯಾಗ ಮಾಡಿದವರು. ಲೋಕ ಕಲ್ಯಾಣಕ್ಕಾಗಿ ಕಠಿಣ ತಪಸ್ಸುಗೈದ ಮಹಾತ್ಯಾಗಿ ಎಂದು ಸುತ್ತೂರು ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೆಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಮಲೆಯೂರಿನ ಕನಕಗಿರಿಯಲ್ಲಿ ಭಾನುವಾರ ನಡೆದ ಭಗವಾನ್ ಬಾಹುಬಲಿಸ್ವಾಮಿಯವರ ಮಹಾಮಸ್ತಕಾಭಿಷೇಕವನ್ನು ಉದ್ಘಾಟಿಸಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ತ್ಯಾಗದ ಮೂಲಕ ಬಾಹುಬಲಿ ಸ್ವಾಮಿ ಜಗತ್ತಿಗೆ ನೀಡಿದ ಸಂದೇಶ ಬಹಳ ಮಹತ್ವದ್ದು, ಆ ತ್ಯಾಗ ಜಗತ್ತಿಗೆ ಆದರ್ಶವಾಗಬೇಕು ಎಂದು ಸ್ವಾಮೀಜಿ ಹೇಳಿದರು.
ಮಾಜಿ ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಅಹಿಂಸೆ, ಶಾಂತಿ ಮೂಲಕ ಎಲ್ಲವನ್ನೂ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಜೈನ ಧರ್ಮದ ಆಶಯ ಅನನ್ಯವಾದದು ಎಂದು ಹೇಳಿದರು. ಜಗತ್ತಿಗೆ ಬೌದ್ಧ ಹಾಗೂ ಜೈನ ಧರ್ಮಗಳು ಮಾನವನ ಒಳಿತಿಗಾಗಿ ಅಪಾರ ಕೊಡುಗೆಗಳನ್ನು ನೀಡಿವೆ. ಹಾಗೆ ನೋಡಿದರೆ ಯಾವುದೇ ಧರ್ಮ ಮೇಲು, ಕೀಳು ಎಂಬುದನ್ನು ಹೇಳುವುದಿಲ್ಲ. ಅಧರ್ಮವನ್ನು ಬಯಸುವುದಿಲ್ಲ. ಇದೆಲ್ಲವನ್ನೂ ಮನುಷ್ಯನೇ ಸೃಷ್ಟಿಸಿಕೊಂಡಿದ್ದಾನೆ. ಹಾಗಾಗಿ ಧರ್ಮಗಳ ಸಾರವನ್ನು ಅರಿತು ನಡೆದಾಗ ಎಲ್ಲ ಕಡೆ ಉನ್ನತಿ ಸಾಧ್ಯವಿದೆ ಎಂದರು.
ಕನಕಗಿರಿಯ ಅಭಿವೃದ್ಧಿಗೆ ಭುವನಕೀರ್ತಿ ಭಟ್ಟಾರಕಸ್ವಾಮೀಜಿ ಹಗಲಿರುಳು ಶ್ರಮಿಸಿದ್ದಾರೆ. ಅವರ ದೂರದೃಷ್ಟಿ ಫಲವಾಗಿ ಕಳೆದ 25 ವರ್ಷಗಳಲ್ಲಿ ಕನಕಗಿರಿ ಕ್ಷೇತ್ರದ ಉತ್ತಮವಾಗಿ ಅಭಿವೃದ್ಧಿಯಾಗಿದೆ. ತಾವು ಸಂಸದರಾಗಿದ್ದ ವೇಳೆಯಲ್ಲಿ ಈ ಕ್ಷೇತ್ರವನ್ನು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸಲು ಅನುದಾನವನ್ನು ಬಿಡುಗಡೆ ಮಾಡಿಸಲಾಗಿತ್ತು ಎಂದು ಹೇಳಿದರು.ಕನಕಗಿರಿ ಅತಿಶಯ ಕ್ಷೇತ್ರದ ಶ್ರೀ ಭುವನಕೀರ್ತಿ ಭಟ್ಟಾರಕಸ್ವಾಮೀಜಿ , ಅಮೋಘಕೀರ್ತಿಮುನಿಮಹಾರಾಜರು, ಶ್ರೀ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿದರು.