ಮಂಗಳೂರು: ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ತೆರಳುವ ಹಲವು ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಭಾರತ ಸರಕಾರದ ಸೂಚನೆಯಂತೆ ಬಹ್ರೈನ್-ಕುವೈಟ್-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್ ಪ್ರಸ್‌ನ ಐಎಕ್ಸ್ 889/ 890 ವಿಮಾನ ಸೇವೆಯನ್ನು ಮಾ. 31ರ ವರೆಗೆ ಸ್ಥಗಿತಗೊಳಿಸಲಾಗಿದೆ. ದಮಾಮ್‌ಗೆ ತೆರಳುವ ಐಎಕ್ಸ್ 885/ 886 ವಿಮಾನ ಹಾಗೂ ದೋಹಾಕ್ಕೆ ಸಾಗುವ ಐಎಕ್ಸ್ 821/ 822 ವಿಮಾನಗಳ ಸೇವೆಯನ್ನು ಮಾ. 28ರ ವರೆಗೆ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಗಳು ತಿಳಿಸಿವೆ.
ಜತೆಗೆ ಬಹ್ರೈನ್, ಕುವೈಟ್, ಕತಾರ್, ಸೌದಿ ಅರೇಬಿಯಾಕ್ಕೆ ತೆರಳುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೇವೆಗಳನ್ನೂ ರದ್ದುಗೊಳಿಸಲಾಗಿದ್ದು, ದುಬಾೖ, ಅಬುಧಾಬಿ, ಮಸ್ಕತ್ ದೇಶಗಳಿಗೆ ವಿಮಾನ ಸೇವೆ ಎಂದಿನಂತೆಯೇ ಲಭ್ಯವಿವೆ. ಅಂತಾರಾಜ್ಯವಾಗಿ ತೆರಳುವ ಕೆಲವು ವಿಮಾನ ಸೇವೆಗಳಲ್ಲೂ ವ್ಯತ್ಯಯವಾಗಲಿದೆ.
ಈ ಮಧ್ಯೆ ಕೆಲವು ವಿಮಾನ ಸಂಸ್ಥೆಗಳು ಟಿಕೆಟ್ ದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿವೆ; ಟಿಕೆಟ್ ರದ್ದು ಮಾಡುವಾಗ ಪ್ರಯಾಣಿಕರಿಗೆ ಸಮಸ್ಯೆಗಳಾಗುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಈ ಮಧ್ಯೆ ಬುಧವಾರದಿಂದ ಮಾ. 31ರ ವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ವಿದೇಶೀ ವಿಮಾನಗಳ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ತಪಾಸಣೆ ನಡೆಸಲಾಗುತ್ತದೆ. ಯಾರಲ್ಲಾದರೂ ಕೊರೊನಾ ಲಕ್ಷಣ ಕಂಡುಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗುತ್ತದೆ. ಇಲ್ಲವಾದರೆ ಆ ಪ್ರಯಾಣಿಕರನ್ನು ಮನೆಗೆ ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.